ಕಾರ್ಕಳ: ದಿಲ್ಲಿಯ ಕೆಂಪುಕೋಟೆಯಲ್ಲಿ ಇಂದು (ಜ. 26) ನಡೆಯುವ ಗಣರಾಜ್ಯೋತ್ಸವದಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಮೇಳೈಸಲಿದೆ.
ಹೆಬ್ರಿ ತಾಲೂಕಿನ ಮುದ್ರಾಡಿಯ ನಾಟ್ಕದೂರಿನ ನಮ್ಮ ತುಳುವೆರ್ ಕಲಾ ಸಂಘಟನೆ ಗಣರಾಜ್ಯೋತ್ಸವ ಸಂದರ್ಭ ಪ್ರದರ್ಶನ ನೀಡಲು ಅಯ್ಕೆಯಾಗಿದೆ. ಸುಕುಮಾರ ಮೋಹನ್ ನೇತೃತ್ವದ 10 ಜನರ ತಂಡವು ನರಸಿಂಹ ಹಾಗೂ ಪರಶುರಾಮ ಅವರ ಕುರಿತಂತೆ 25 ನಿಮಿಷಗಳ ಕಾಲ ಹಿಮ್ಮೇಳ-ಮುಮ್ಮೇಳ ಸಹಿತ 2 ಯಕ್ಷಗಾನ ಪ್ರದರ್ಶನ ನೀಡಲಿದೆ.
ಕಲಾವಿದರಾದ ಅಜೇಯ ಸುಬ್ರಹ್ಮಣ್ಯ ರಾವ್, ಎಂ. ದೇವಾನಂದ ಭಟ್, ಶ್ರೀರಾಜ್, ಶುಭಾಂಜನ ಮೊದಲಾದವರು ಬಣ್ಣ ಹಚ್ಚಲಿದ್ದಾರೆ. 28 ವರ್ಷಗಳ ಅನುಭವವಿರುವ ರಂಗ ನಿರ್ದೇಶಕ ಕಲಾವಿದ ಸುಕುಮಾರ ಮೋಹನ್ ಅವರ ತಂಡವು ದೇಶ ವಿದೇಶಗಳಲ್ಲಿ ವಿವಿಧ ನಾಟಕಗಳ ಪ್ರದರ್ಶನ ನೀಡಿದೆ.
ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆ ಸಮಾರಂಭಕ್ಕೆ ಸಾರ್ವಜನಿಕರನ್ನು ಅಮಂತ್ರಿಸಲು ಕಾರ್ಕಳ ವಿಧಾನಸಭಾ ವ್ಯಾಪ್ತಿಯಲ್ಲಿ ಬೀದಿ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ಸಾಮಾಜಿಕ ಪಿಡುಗುಗಳ ವಿರುದ್ಧ ಅರಿವು ಮೂಡಿಸುವ ಬೀದಿ ನಾಟಕಗಳ ಮೂಲಕ ರಾಜ್ಯಾದ್ಯಂತ ಮನೆಮಾತಾಗಿದ್ದಾರೆ.