Advertisement

ಯಡ್ತಾಡಿ: ಕೇಳುವವರಿಲ್ಲವೇ ಜೀತ ಮುಕ್ತ ಕಾರ್ಮಿಕರ ಗೋಳು ?

03:18 PM Apr 06, 2017 | Team Udayavani |

ಕೋಟ: ಸಮಾಜದಲ್ಲಿ ಶೋಷಣೆಗೊಳಗಾದ ಜೀತ ಕಾರ್ಮಿಕರನ್ನು  ಸರಕಾರ ಜೀತ ಮುಕ್ತಗೊಳಿಸಿ, ಅವರ ಪುನರ್ವಸತಿಗೆ ಭೂಮಿ ಮಂಜೂರು ಮಾಡಿ ಮುಂದೆ ಅಗತ್ಯವಿರುವ ಮೂಲ ಸೌಕರ್ಯವನ್ನು ನೀಡುವಂತೆ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಿದರೂ ಕೂಡ  ಸೂಕ್ತ  ಕ್ರಮ ಕೈಗೊಳ್ಳದೆ ಇದೀಗ ಅವರ  ಪುನರ್ವಸತಿಗೆ ಮೀಸಲಿರಿಸಿದ  ಜಾಗವನ್ನೇ ದುರುಪಯೋಗಪಡಿಸಿಕೊಂಡಿದೆ  ಎನ್ನುವ  ಆರೋಪ ಉಡುಪಿ ತಾಲೂಕಿನ ಯಡ್ತಾಡಿ  ಗ್ರಾ.ಪಂ.  ಮೇಲೆ ಕೇಳಿ ಬಂದಿದ್ದು  ಸಂತ್ರಸ್ತ ಕಾರ್ಮಿಕರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

Advertisement

ಜೀತ ಮುಕ್ತ ಕಾರ್ಮಿಕರಿಗೆ ಅನ್ಯಾಯ ಸುಮಾರು  ಮೂರು ವರ್ಷಗಳ ಹಿಂದೆ ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯ ಗರಿಕೆಮಠ ಕಲ್ಲುಕೋರೆಯಲ್ಲಿ  ಕಾರ್ಯ ನಿರ್ವಹಿಸುತ್ತಿದ್ದ ಯಡ್ತಾಡಿ ಗ್ರಾಮದ ನಿವಾಸಿಗಳಾದ ಅಣ್ಣಪ್ಪ, ಗೋವಿಂದರಾಜು, ನರಸಿಂಹ, ಪರಶುರಾಮ, ಮುತ್ತುರಾಜ್‌, ರಮೇಶ, ಕುಂಜಿ ಮೋಯಿಂಗ್‌, ಚೆಲುವರಾಜು ಎನ್ನುವ ಕುಟುಂಬದವರನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗು ತ್ತಿದೆ ಎನ್ನುವ ದೂರಿನ  ಮೇರೆಗೆ  ಸಂಬಂಧಪಟ್ಟ  ಅಧಿಕಾರಿಗಳು  ತನಿಖೆ ನಡೆಸಿ  ಜೀತದಿಂದ ಮುಕ್ತಗೊಳಿಸಿ, ಪುನರ್ವಸತಿ ಯೋಜನೆಯಡಿ ಯಡ್ತಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಹೇರಾಡಿಯ ಸರ್ವೇ ನಂಬರ್‌ 51/ಪಿ1ರಲ್ಲಿ ಒಟ್ಟು  94 ಸೆಂಟ್ಸ್‌ ಜಾಗವನ್ನು ಮೀಸಲಿರಿಸಿತ್ತು ಹಾಗೂ ಮೂಲ  ಸೌಕರ್ಯವನ್ನು ನೀಡಬೇಕೆಂದು ಆದೇಶ ನೀಡಿತ್ತು. ಆದರೆ ಈ  ಕಾರ್ಮಿಕರಿಗೆ ಇದುವರೆಗೆ ಸೂಕ್ತ ಪುನರ್ವಸತಿ ದೊರೆತಿಲ್ಲ. ಇದೀಗ  ಮೀಸಲಿಟ್ಟ ಭೂಮಿಯನ್ನು ಸಮತಟ್ಟುಗೊಳಿಸುವ ನಿಟ್ಟಿನಲ್ಲಿ  ಯಡ್ತಾಡಿ ಗ್ರಾ.ಪಂ. 24 ಸಾವಿರ ರೂ.ಗೆ  ಕ್ರಿಯಾ ಯೋಜನೆ ತಯಾರಿಸಿದ್ದು,  ಜಾಗವನ್ನು ಸಮತಟ್ಟು ಮಾಡುವ ಬದಲು  ಅಲ್ಲಿನ ಮಣ್ಣನ್ನು ಖಾಸಗಿ ವ್ಯಕ್ತಿಗಳಿಗೆ ಲಕ್ಷಾಂತರ ಹಣಕ್ಕೆ ಮಾರಾಟ ಮಾಡಲಾಗಿದೆ ಎನ್ನುವ ಆರೋಪ ಸಂತ್ರಸ್ತರಿಂದ ಕೇಳಿ ಬಂದಿದೆ ಹಾಗೂ  ಸದ್ರಿ ಸ್ಥಳವನ್ನು ಸುಮಾರು 3 ಫೀಟ್‌ಗಿಂತ  ಹೆಚ್ಚು  ಆಳ ಮಾಡಿರುವುದು ಈ ಆರೋಪಕ್ಕೆ  ಪುಷ್ಟಿ ನೀಡುವಂತಿದೆ ಹಾಗೂ ಜಾಗ ಸಮತಟ್ಟುಗೊಳಿಸಲು ಹೊಂಡ ಮಾಡಬೇಕಾದ ಅಗತ್ಯವೇನು ಎನ್ನುವ ಪ್ರಶ್ನೆ ಮೂಡಿದೆ. ಮಣ್ಣು ತೆಗೆದ ಸ್ಥಳದಲ್ಲಿ  ಮಳೆಗಾಲದಲ್ಲಿ ನೀರು ನಿಲ್ಲಲಿದ್ದು ಮನೆ  ಕಟ್ಟಿಕೊಳ್ಳಲು ಅಸಾಧ್ಯವಾಗಲಿದೆ. ಹೀಗಾಗಿ ಸಂತ್ರಸ್ತರಿಗೆ ಈ ಸ್ಥಳದಲ್ಲಿ ಪುನರ್ವಸತಿ ಕನಸಿನ ಮಾತಾಗಲಿದೆ.

ಒಟ್ಟಾರೆ ಜೀತ ಮುಕ್ತ ಕಾರ್ಮಿಕರಿಗೆ  ನೀಡಿದ  ಭೂಮಿಯನ್ನು ಅಭಿವೃದ್ಧಿಪಡಿಸುವ ಬದಲು  ಹಾಳು ಮಾಡಿದ ಯಡ್ತಾಡಿ ಗ್ರಾ.ಪಂ.ಗೆ ಸಂತ್ರಸ್ತ  ಕಾರ್ಮಿಕರು ಹಿಡಿಶಾಪ ಹಾಕುತ್ತಿದ್ದಾರೆ. ಈ ಕುರಿತು ಜೀತ  ಮುಕ್ತ ಕಾರ್ಮಿಕರು ಜಿಲ್ಲಾಧಿಕಾರಿ, ಜಿ.ವಿ.ಕೆ. ಸೇರಿದಂತೆ ಹಲವು ಅಧಿಕಾರಿಗಳಿಗೆ  ದೂರು ನೀಡಿದ್ದು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.

ಜೀತಮುಕ್ತ ಕಾರ್ಮಿಕರಿಗೆ ಪುನರ್ವಸತಿ ಒದಗಿಸುವಲ್ಲಿ  ನಾವು ನಿರ್ಲಕ್ಷ  ಮಾಡಿಲ್ಲ. ಸಂಬಂಧಪಟ್ಟ  ಇಲಾಖೆಯಿಂದ ಅನುದಾನ ಬರುವುದು ತಡವಾದ್ದರಿಂದ ಪುನರ್ವಸತಿ  ವಿಳಂಬವಾಯಿತು.  ಇದೀಗ ಕ್ರಿಯಾ ಯೋಜನೆ  ರೂಪಿಸಿ  ಮೀಸಲಿಟ್ಟ ಜಾಗವನ್ನು ಸಮತಟ್ಟು  ಮಾಡಲಾಗುತ್ತಿದೆ. ಜಾಗ ಸಮತಟ್ಟು ಮಾಡುವಾಗ  ಕಲ್ಲು  ಬಂದ ಕಾರಣ ಜಾಗ  ಸ್ವಲ್ಪ ಹೊಂಡವಾಗಿದೆ.  ಇದರಲ್ಲಿ ಅವ್ಯವಹಾರ ನಡೆದಿಲ್ಲ.
ಪ್ರಕಾಶ್‌ ಎಚ್‌.  ಶೆಟ್ಟಿ,    ಅಧ್ಯಕ್ಷರು ಯಡ್ತಾಡಿ ಗ್ರಾ.ಪಂ.

ಜೀತ ಕಾರ್ಮಿಕರು ಎನ್ನುವ ನಿಟ್ಟಿನಲ್ಲಿ ಸರಕಾರ ನಮಗೆ ನಿವೇಶನ ಮಂಜೂರು ಮಾಡಿತ್ತು ಹಾಗೂ ಮನೆ ಮುಂತಾದ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಇದುವರೆಗೆ ನಮಗೆ  ಸ್ಥಳೀಯ ಯಡ್ತಾಡಿ ಗ್ರಾ.ಪಂ. ಯಾವುದೇ ಸೌಲಭ್ಯಗಳನ್ನು ನೀಡಿಲ್ಲ. ಬದಲಿಗೆ ಹೇರಾಡಿಯಲ್ಲಿ ನಮಗೆ  ಮೀಸಲಿರಿಸಿದ ಜಾಗದ ಮಣ್ಣನ್ನು   ಖಾಸಗಿಯವರಿಗೆ ಲಕ್ಷಾಂತರ ಹಣಕ್ಕೆ ಮಾರಾಟ ಮಾಡಿ ಆ ಜಾಗ  ಪ್ರಯೋಜನಕ್ಕೆ  ಬಾರದಂತೆ ಮಾಡಿದೆ. ಈ ಕುರಿತು ವಿಚಾರಿಸಿದರೆ ಜಾಗ ಸಮ ತಟ್ಟು  ಮಾಡಲು ಎಂದು ಹೇಳುತ್ತಿದ್ದಾರೆ.  ಇದರಿಂದಾಗಿ  ಬಡವರು, ಅವಿಧ್ಯಾವಂತರಾದ ನಮಗೆ ಅನ್ಯಾಯವಾಗಿದೆ. ದಯವಿಟ್ಟು ನಮಗೆ ಸಂಬಂಧಪಟ್ಟವರು ನ್ಯಾಯ ನೀಡಬೇಕು.

Advertisement

ಗೋವಿಂದರಾಜು,  ಸಂತ್ರಸ್ತ  ಜೀತ ಮುಕ್ತ  ಕಾರ್ಮಿಕ

Advertisement

Udayavani is now on Telegram. Click here to join our channel and stay updated with the latest news.

Next