ಯಡ್ರಾಮಿ: ಪದ್ದತಿಯಂತೆ ಎರಡು ವರ್ಷಗಳಿಗೊಮ್ಮೆ ನಡೆಯುವ ಕ್ಷೇತ್ರದ ಅಧಿ ದೇವತೆ ಶ್ರೀ ಗ್ರಾಮದೇವತೆ ಜಾತ್ರೆ ಗುರುವಾರ ಸಂಜೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಪಟ್ಟಣದ ಜನರಲ್ಲಿ ಸಡಗರ-ಸಂಭ್ರಮ ಮನೆ ಮಾಡಿದೆ.
ತಿಂಗಳ ಪರ್ಯಂತ ಮನೆಗಳನ್ನು ಸ್ವಚ್ಛ ಮಾಡಿ, ಸುಣ್ಣ-ಬಣ್ಣ, ತಳಿರು ತೋರಣ ಕಟ್ಟಿ ಜಾತ್ರೆಯ ಸಂಭ್ರಮದಲ್ಲಿ ಪಟ್ಟಣದ ಜನತೆ ಪಾಲ್ಗೊಳ್ಳುತ್ತಿದ್ದಾರೆ. ತಿಂಗಳ ಹಿಂದೆ ಊರ ಹೊರಗಿನ ಹನುಮಂತ ದೇವರ ಗುಡಿಗೆ ಕರೆತಂದ ಗ್ರಾಮದೇವತೆಗೆ, ಕಲಾವಿದ ಲಕ್ಷೀಕಾಂತ ಸೋನಾರ ಸಪ್ತಬಣ್ಣಗಳಿಂದ ಅಲಂಕಾರ ಮಾಡುವರು. ಗುರುವಾರ ರಾತ್ರಿ 8 ಗಂಟೆಗೆ ಶ್ರೀ ದೇವಿ ಶೃಂಗರಿಸಲಾದ ರಥದಲ್ಲಿ ಆಸೀನಳಾಗುವಳು.
ಪಟ್ಟಣದ ಪ್ರಮುಖ ಬೀದಿ ಮಾರ್ಗವಾಗಿ ಗ್ರಾಮಸ್ಥರೆಲ್ಲ ಸೇರಿ ರಾತ್ರಿಯಿಡಿ ರಥವನ್ನು ಎಳೆಯುತ್ತಾರೆ. ಶುಕ್ರವಾರ ಬೆಳಗ್ಗೆ 4 ಗಂಟೆಗೆ ರಾಮತೀರ್ಥ ಬಳಿ ಇರುವ ಬಾವಿ ನೀರಿನಿಂದ ಗಂಗಾಸ್ನಾನ ಮಾಡುವ ದೇವಿ, ಊರಿನ ನಡುಗಡ್ಡೆ ಲಕ್ಷ್ಮೀ ಗುಡಿ ಹತ್ತಿರ ಆಸೀನಳಾಗಿ ಭಕ್ತರಿಂದ ನೈವೇದ್ಯ ಸ್ವೀಕರಿಸಿ ಹರಸುವಳು. ಸಂಜೆ ಗರ್ಭಗುಡಿಯಲ್ಲಿ ಗ್ರಾಮದೇವತೆಯನ್ನು ಪ್ರತಿಷ್ಠಾಪಿಸಲಾಗುವುದು. ನಂತರ ಮಹಾಮಂಗಲದೊಂದಿಗೆ ಉತ್ಸವ ಸಂಪನ್ನಗೊಳ್ಳುವುದು.
ಸುಮಾರು 50 ವರ್ಷದಿಂದ ನಾವು ನೋಡಕೋಂತ ಬಂದಿವಿ. ಜಾತ್ರೆ ಯಾವಾಗ ಶುರು ಆಗಿದ್ದು ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ನಮ್ಮ ತಾತ, ಮುತ್ತಾತಂದಿರ ಕಾಲದಲ್ಲಿಯೂ ಗ್ರಾಮದೇವತೆ ಉತ್ಸವ ಮಾಡಿಕೊಂಡು ಬರುತ್ತಿದ್ದರು ಎನ್ನುವುದು ಗೊತ್ತಿದೆ. ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ ಪ್ರತಿ ಎರಡು ವರ್ಷಕೊಮ್ಮೆ ಜಾತ್ರೆ ಮಾಡುತ್ತೇವೆ.
ಸಿದ್ಧನಗೌಡ ಮಾಲೀಪಾಟೀಲ,
ಜಾತ್ರಾ ಉಸ್ತುವಾರಿ
ಗ್ರಾಮದೇವತೆ ಉತ್ಸವವನ್ನು ಎಲ್ಲರೂ ಸೇರಿ ಮಾಡುತ್ತೇವೆ. ಇಲ್ಲಿ ಧರ್ಮ, ಜಾತಿ ಎನ್ನುವ ಮಾತೆ ಇಲ್ಲ. ಶ್ರೀ ದೇವಿ ಉತ್ಸವದಲ್ಲಿ ನಾವೆಲ್ಲ ಸಂತೋಷದಿಂದ ಭಾಗವಹಿಸುತ್ತೇವೆ. ಗ್ರಾಮಕ್ಕೆ ಒಳ್ಳೆಯ ಮಳೆ, ಬೆಳೆ, ಸಮೃದ್ಧಿ ಆಗಲಿ ಎಂದು ದೇವಿಯಲ್ಲಿ ಪ್ರಾರ್ಥಿಸುತ್ತೇವೆ.
ಅಬ್ದುಲ್‌ರಜಾಕ್ ಮನಿಯಾರ,
ಕಾಂಗ್ರೆಸ್ ಮುಖಂಡ
ಎರಡು ವರ್ಷಕೊಮ್ಮೆ ನಡೆಯುವ ದೇವಿ ಜಾತ್ರೆ ನೆಪದಲ್ಲಿ ನಮ್ಮೂರ ಹೆಣ್ಣುಮಕ್ಕಳು ತವರೂರಿಗೆ ಬಂದು, ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ವಾರಗಿತ್ತಿಯರೆಲ್ಲ ಪರಸ್ಪರ ಕುಶಲ-ಕ್ಷೇಮ ವಿಚಾರಿಸುತ್ತಾರೆ. ಎರಡು ವರ್ಷಕೊಮ್ಮೆ ಆಗುವ ಭೇಟಿಯಿಂದ ಪಟ್ಟಣದ ಹೆಣ್ಣುಮಕ್ಕಳು ಖುಷಿ ಪಡುತ್ತಾರೆ.
ಜಯಶ್ರೀ ಪ್ರಕಾಶ ಬೆಲ್ಲದ, ಗೃಹಿಣಿ