ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಪ್ರಸಕ್ತವಾಗಿ ಅತಿವೃಷ್ಟಿಯಿಂದ ಹಾನಿಯಾಗಿರುವ ಬೆಳೆಗೆ ಪರಿಹಾರ ನೀಡುವಂತೆ ವಿರೋಧ ಪಕ್ಷದ ಮುಖ್ಯಸಚೇತಕ ಹಾಗೂ ಜೇವರ್ಗಿ ಶಾಸಕ ಡಾ| ಅಜಯಸಿಂಗ್ ನೇತೃತ್ವದ ನಿಯೋಗ ಗುರುವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದೆ.
ನವೆಂಬರ್‌ನಲ್ಲಿ ಬಿದ್ದ ಭಾರಿ ಪ್ರಮಾಣದ ಮಳೆಯಿಂದ ವಾಣಿಜ್ಯ ಬೆಳೆ ತೊಗರಿ ಗೊಡ್ಡುರೋಗ ಹಾಗೂ ನೆಟೆರೋಗಕ್ಕೆ ಒಳಗಾಗಿ ಕೈಗೆ ಬಂದ ತುತ್ತು ಬಾರದಂತಾಗಿದೆ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರುವ ಬೆಳೆ ಹಾನಿಗೆ ಸಂಬಂಧಿಸಿದಂತೆ ಅಕ್ಟೋಬರ್ ತಿಂಗಳಲ್ಲೇ ಜಂಟಿ ಸಮೀಕ್ಷೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರಿಂದ ಪರಿಹಾರ ಬರಲಾರಂಭಿಸಿದೆ.
ಯಡ್ರಾಮಿ ತಾಲೂಕಿನಲ್ಲಿ ನವೆಂಬರ್ ತಿಂಗಳಲ್ಲಿ ಹಾನಿಯಾಗಿದ್ದರಿಂದ ಕೊನೆಗೆ ಅತಿವೃಷ್ಟಿ ಬೆಳೆ ಹಾನಿ ಕುರಿತಾಗಿ ಕಂದಾಯ ಹಾಗೂ ಕೃಷಿ ಇಲಾಖಾಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಕೈಗೊಂಡು ಯಡ್ರಾಮಿ ತಾಲೂಕಿನಲ್ಲಿ 66 ಸಾವಿರ ಎಕರೆ ಬೆಳೆ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದ್ದರಿಂದ ಕೂಡಲೇ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಲಾಯಿತು.
ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಪರಿಹಾರದಿಂದ ವಂಚಿತರಾಗಿರುವ ಯಡ್ರಾಮಿ ತಾಲೂಕಿನ ರೈತರಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಸದನದಲ್ಲಿ ಪ್ರಸ್ತಾಪಿಸಲಾಗಿತ್ತು. ಕಂದಾಯ ಸಚಿವರ ಪರವಾಗಿ ಜಲಸಂಪನ್ಮೂಲ ಸಚಿವರು ಉತ್ತರ ನೀಡಿದ್ದರು. ಇದೇ ಕಾರಣಕ್ಕೆ ಹಲವಾರು ದಿನಗಳಿಂದ ಬೆಳೆ ಪರಿಹಾರಕ್ಕೆ ಆಗ್ರಹಿಸಿ ಯಡ್ರಾಮಿಯಲ್ಲಿ ಧರಣಿಗೆ ಕುಳಿತ್ತಿದ್ದ ರೈತರು ಮುಷ್ಕರ ವಾಪಸ್ಸು ಪಡೆದಿದ್ದಾರೆ. ಆದ್ದರಿಂದ ಸರ್ಕಾರ ಪರಿಹಾರ ನೀಡಬೇಕು ಎಂದು ನಿಯೋಗ ಕೋರಿತು.
ನಿಯೋಗದಲ್ಲಿ ಅಮರನಾಥ ಪಾಟೀಲ ಸಾಹು, ಹಣಮಂತ ಗುತ್ತೇದಾರ, ಅಪ್ಪು ಶಹಾಪುರ, ಮಾಳಪ್ಪ ಕಾರಗೊಂಡ, ಮಡಿ ವಾಳ ಯತ್ನಾಳ, ಶ್ರೀಶೈಲ ಗಂಗಾಕರ, ಸಿದ್ಧು ಸಿರಸಗಿ, ಚಂದ್ರಶೇಖರ ಮಲ್ಲಾಬಾದ, ಶಿವಶಂಕರ ಬಳಬಟ್ಟಿ, ರೇವಣಸಿದ್ಧ ಮಕಾಶಿ, ಚಂದ್ರಶೇಖರ ಬಳಬಟ್ಟಿ, ಅಯ್ಯಣ್ಣ ಸರಕಾರ ಮುಂತಾದವರಿದ್ದರು.