Advertisement

ಯಾದಗಿರಿ-ವಾಡಿ-ಕಲಬುರಗಿ ಸಾರಿಗೆ ಸಂಪರ್ಕ ಸರಳ

10:55 AM Jul 05, 2018 | Team Udayavani |

ವಾಡಿ: ತಗ್ಗು-ದಿಣ್ಣೆ , ಧೂಳಿನಿಂದ ಕೂಡಿದ್ದ ವಾಡಿ-ಕಲಬುರಗಿ ಹಾಗೂ ವಾಡಿ-ಯಾದಗಿರಿ ನಡುವಿನ ಹದಗೆಟ್ಟ ರಸ್ತೆಗಳೀಗ ರಾಷ್ಟ್ರೀಯ ಹೆದ್ದಾರಿಯಾಗಿ ಸುಧಾರಣೆ ಕಂಡಿದ್ದು, ಬಸ್‌ಗಳ ಓಡಾಟ ಹೆಚ್ಚಿದೆ. ನರಕ ಸದೃಶ್ಯವಾಗಿದ್ದ ಯಾದಗಿರಿ-ವಾಡಿ-ಕಲಬುರಗಿ ಪ್ರಯಾಣ ಸದ್ಯ ಸುಖಕರವಾಗಿದ್ದು, ಸಾರಿಗೆ ಸಂಪರ್ಕ ಸರಳಗೊಂಡಿದೆ.

Advertisement

ರಸ್ತೆಗಳು ವಿಪರೀತ ಹದಗೆಟ್ಟಿದ್ದರಿಂದ ಯಾದಗಿರಿ ಹಾಗೂ ಕಲಬುರಗಿ ಮಧ್ಯೆ ಸಾರಿಗೆ ಸಂಪರ್ಕವೇ ಇಲ್ಲವಾಗಿತ್ತು. ಹರಕು ರಸ್ತೆ ಮೇಲೆ ಹೊರಡುತ್ತಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಇಲಾಖೆಯ ಮುರುಕು ಬಸ್‌ಗಳು ಜಲ್ಲಿ ಕಲ್ಲುಗಳ ರಸ್ತೆಯಲ್ಲಿ ಜೋಲಿ ಹೊಡೆಯುತ್ತ ಧೂಳು ಹರಡಿ ಹೈರಾಣ ಮಾಡುತ್ತಿದ್ದವು. ಮಧ್ಯದಲ್ಲಿ ಕೆಟ್ಟುನಿಂತು ಪ್ರಯಾಣಿಕರನ್ನು ಗೋಳಾಡಿಸುತ್ತಿದ್ದವು. ಸಾಕಪ್ಪೋ ಸಾಕು ಈ ಬಸ್‌ ಪ್ರಯಾಣದ ಸಹವಾಸ ಸಾಕು ಎಂದು ಪ್ರಯಾಣಿಕರು ಚುನಾಯಿತ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದರು.

ಬಸ್‌ ಸಂಚಾರಕ್ಕೆ ಗುಡ್‌ ಬೈ ಹೇಳುವ ಮೂಲಕ ಹಲವು ದಶಕಗಳ ಕಾಲ ಜನರು ರೈಲು ಪ್ರಯಾಣದತ್ತ ಮುಖಮಾಡಿದ್ದರು. ಆದರೆ, ಈಗ ಪರಸ್ಥಿತಿ ಬದಲಾಗಿದೆ. ಜನರು ರೈಲು ಮರೆತು ಬಸ್‌ ಪ್ರಯಾಣದತ್ತ ಮುಖಮಾಡಿದ್ದಾರೆ. ಕಾರಣ, ಹದಗೆಟ್ಟ ರಸ್ತೆಗಳು ಕಣ್ಮರೆಯಾಗಿವೆ. ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಒತ್ತಾಸೆ ಮೇರೆಗೆ ಕಲಬುರಗಿ-ವಾಡಿ-ಯಾದಗಿರಿ ಮಧ್ಯೆ ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ.

ಎನ್‌ಇಕೆಆರ್‌ಟಿಸಿ ವತಿಯಿಂದ ಯಾದಗಿರಿ-ವಾಡಿ-ಕಲಬುರಗಿ ನಡುವೆ ಹತ್ತಾರು ಬಸ್‌ಗಳ ಸಂಚಾರ ಸೌಲಭ್ಯ ಒದಗಿಸಲಾಗಿದ್ದು, ಪ್ರತಿ 30 ನಿಮಿಷಕ್ಕೊಂದರಂತೆ ಬಸ್‌ಗಳು ನಿಲ್ದಾಣಕ್ಕೆ ಬರುತ್ತಿವೆ. ಹೊಚ್ಚ ಹೊಸ ಬಸ್‌ಗಳ ಸೌಲಭ್ಯ ದಕ್ಕಿದ್ದಿರಿಂದ ಈ ಭಾಗದ ಪ್ರಯಾಣಿಕರು ಸಾರಿಗೆ ಸಮಸ್ಯೆಯಿಂದ ಮುಕ್ತರಾಗಿದ್ದಾರೆ.
 
ವಾಡಿಯಿಂದ ಕಲಬುರಗಿ ಹಾಗೂ ವಾಡಿಯಿಂದ ಯಾದಗಿರಿ ಕೇವಲ 40 ನಿಮಿಷದಲ್ಲಿ ತೂಕಡಿಕೆಯಿಲ್ಲದೆ ತಲುಪಬಹುದಾಗಿದೆ. ವ್ಯಾಪಾರ ವಹಿವಾಟಿಗಾಗಿ ಹಾಗೂ ಕಾಲೇಜು ಆಸ್ಪತ್ರೆಗಳಿಗೆ ನಿತ್ಯ ಪ್ರಯಾಣ ಬೆಳೆಸುತ್ತಿದ್ದ ಸಾವಿರಾರು ಜನ ಪ್ರಯಾಣಿಕರು ರೈಲು ತಪ್ಪಿದರೆ ಚಿಂತೆಗೊಳಗಾಗದೆ ಬಸ್‌ ನಿಲ್ದಾಣದತ್ತ ಬರುತ್ತಾರೆ. ಸಾರಿಗೆ ಸಂಪರ್ಕ ನಿರೀಕ್ಷೆ ಮೀರಿ ಸರಳಗೊಂಡಿದ್ದು, ರಸ್ತೆಗಳ ಮೇಲೆ ಬಿಡುವಿಲ್ಲದ ಕೆಂಪು-ಬಿಳಿ ಬಸ್‌ಗಳ ಓಡಾಟ ಕಂಡು ಸಾರ್ವಜನಿಕರು ಹರ್ಷಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾದ ನಂತರ ಯಾದಗಿರಿ-ವಾಡಿ- ಕಲಬುರಗಿ ಮಧ್ಯೆ ಬಸ್‌ ಸಂಚಾರ ಸೌಲಭ್ಯ ಹೆಚ್ಚಿಸಿದ್ದೇವೆ. ಯಾದಗಿರಿ ಡಿಪೋದಿಂದ 23 ಹಾಗೂ ಕಲಬುರಗಿ ಡಿಪೋದಿಂದ 23, ಪ್ರತಿನಿತ್ಯ ಒಟ್ಟು 46 ಬಸ್‌ಗಳು ಸಂಚರಿಸುತ್ತಿವೆ. ಜನರ ಸ್ಪಂದನೆ ಉತ್ತಮವಾಗಿದೆ. ಇಲಾಖೆಗೆ ಉತ್ತಮ ಆದಾಯ ಬರುತ್ತಿದೆ. ಬರುವ ದಿನಗಳಲ್ಲಿ ಸಾರಿಗೆ ಸೌಲಭ್ಯ ಇನ್ನಷ್ಟು ಹೆಚ್ಚಿಸುವ ಚಿಂತನೆಯಿದೆ.  ಪ್ರಭು ಹಲಗುಂಡ, ವ್ಯವಸ್ಥಪಕರು, ಎನ್‌ಈಕೆಆರ್‌ಟಿಸಿ, ಯಾದಗಿರಿ ಡಿಪೋ

Advertisement

ಸಾರಿಗೆ ಇಲಾಖೆಯಿಂದ ವಾಡಿ-ಕಲಬುರಗಿ ಮಧ್ಯೆ ಸಾಕಷ್ಟು ಹೊಸ ಬಸ್‌ಗಳ ಓಡಾಟ ಆರಂಭವಾಗಿವೆ. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಿದೆ. ಹಿಂದೆ ರೈಲು ತಪ್ಪಿಸಿಕೊಂಡರೆ ಮತ್ತೂಂದು ರೈಲು ಎಷ್ಟೇ ತಡವಾಗಿ ಬಂದರೂ ಅದಕ್ಕಾಗಿ ಕಾಯಬೇಕಿತ್ತು. ಆದರೆ, ಈಗ ರಸ್ತೆ ಗಣನೀಯವಾಗಿ ಸುಧಾರಣೆ ಕಂಡಿದ್ದರಿಂದ ಬಸ್‌ ಪ್ರಯಾಣ ಅತ್ಯಂತ ಸರಳವಾಗಿದೆ. ಜನರಿಗೆ ಉತ್ತಮ ಸೌಲಭ್ಯ ಒದಗಿಸಿ ಕೊಡುವುದೇ ಸರಕಾರದ ಮೂಲ ಕರ್ತವ್ಯವಾಗಿದೆ. ಜನ ಇದನ್ನು ಜನಪ್ರತಿನಿಧಿಗಳಿಂದ ನಿರೀಕ್ಷಿಸುತ್ತಾರೆ. ಸಾರಿಗೆ ವ್ಯವಸ್ಥೆಯಲ್ಲಿ ತುಸು ಪ್ರಗತಿ ಕಂಡಿದ್ದು, ಅದು ಇನ್ನಷ್ಟು ಸುಧಾರಿಸಬೇಕಿದೆ. 
 ಯೇಶಪ್ಪ ಕೇದಾರ, ಪದವೀಧರ ವಿದ್ಯಾರ್ಥಿ

ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next