Advertisement

ಸಿಇಟಿಗೆ ಐದು ಕೇಂದ್ರ ಸ್ಥಾಪನೆ

03:52 PM Apr 26, 2019 | Team Udayavani |

ಯಾದಗಿರಿ: 2019-20ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜಿಲ್ಲೆಯ ಐದು ಕೇಂದ್ರಗಳಲ್ಲಿ ಏಪ್ರಿಲ್ 29 ಮತ್ತು 30ರಂದು ಸಾಮಾನ್ಯ ಪ್ರವೇಶ ಪರೀಕ್ಷೆ ಸುಸೂತ್ರವಾಗಿ ನಡೆಯಲು ಸಂಬಂಧಿಸಿದ ಅಧಿಕಾರಿಗಳು ಹಾಗೂ ಪರೀಕ್ಷಾ ಕೇಂದ್ರಗಳ ಉಪ ಮುಖ್ಯ ಅಧೀಕ್ಷಕರು ಅಗತ್ಯ ಕ್ರಮದೊಂದಿಗೆ ಸಿದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ ಪೂರ್ವಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಾದಗಿರಿ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ನ್ಯೂ ಕನ್ನಡ ಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಡಾನ್‌ ಬಾಸ್ಕೊ ಪದವಿ ಪೂರ್ವ ಕಾಲೇಜು, ಜವಾಹರ ಸಂಯುಕ್ತ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಾಗಿವೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಆಸನ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್‌, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು. ಮುಖ್ಯವಾಗಿ ಯಾವುದೇ ಅಕ್ರಮ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಸೂಚಿಸಿದರು.

ಪರೀಕ್ಷೆ ಅತಿ ಸೂಕ್ಷ್ಮವಾದ ಪ್ರಕ್ರಿಯೆಯಾಗಿದೆ. ಹಾಗಾಗಿ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್‌ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗುವುದು. ಪರೀಕ್ಷಾ ಕಾರ್ಯಗಳಿಗಾಗಿ ನೇಮಕವಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾತ್ರ ಕೇಂದ್ರದಲ್ಲಿ ಇರತಕ್ಕದ್ದು. ಪರವಾನಗಿ ಇಲ್ಲದ ವ್ಯಕ್ತಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಸೂಚಿಸಿದರು.

ಸುಸೂತ್ರವಾಗಿ ಪರೀಕ್ಷೆ ನಡೆಸುವ ಹಿತದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಿಗೆ ವೀಕ್ಷಕರು ಮತ್ತು ಜಿಲ್ಲಾ ಮಟ್ಟದ ತ್ರಿ ಸದಸ್ಯ ಸಮಿತಿ ನೇಮಕ ಮಾಡಲಾಗಿದೆ. ಕೇಂದ್ರಗಳ ಹೊರಗೆ ಬಂದೋಬಸ್ತ್ಗಾಗಿ ಪೊಲೀಸ್‌ ಸಿಬ್ಬಂದಿಯನ್ನು ಹತ್ತಿರದ ಠಾಣೆಗಳಿಂದ ಪಡೆಯಲು ಮುಂಚಿತವಾಗಿ ಕ್ರಮ ಕೈಗೊಂಡಿರಬೇಕು. ಪರೀಕ್ಷೆ ಗೌಪ್ಯ ಸಾಮಗ್ರಿಗಳನ್ನು ನೀಡುವಾಗ ಮತ್ತು ಪಡೆಯುವಾಗ ಪರೀಕ್ಷಾ ಕೇಂದ್ರದ ಉಪ ಮುಖ್ಯ ಅಧೀಕ್ಷಕರು ಜಾಗ್ರತೆಯಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶಿಸಿದರು.

Advertisement

ಗುರುತಿನ ಚೀಟಿ ಕಡ್ಡಾಯ: ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶಪತ್ರದ ಜತೆಗೆ ಕಡ್ಡಾಯವಾಗಿ ಯಾವುದಾದರೊಂದು ಗುರುತಿನ ಚೀಟಿ (ಆಧಾರ್‌ ಕಾರ್ಡ್‌, ಪಾನ್‌ಕಾರ್ಡ್‌, ಕಾಲೇಜಿನ ಗುರುತಿನ ಚೀಟಿ, ಪಾಸ್‌ಪೋರ್ಟ್‌, ದ್ವಿತೀಯ ಪಿಯುಸಿ- 12ನೇ ತರಗತಿ ಪ್ರವೇಶಪತ್ರ) ತರಬೇಕು. ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳ ಎಡಗೈ ಹೆಬ್ಬೆರಳಿನ ಗುರುತನ್ನು ಒಎಂಆರ್‌ ಮೇಲೆ ಪಡೆಯಬೇಕು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಯಾವುದೇ ತರಹದ ಕೈ ಗಡಿಯಾರ ಮತ್ತು ಕ್ಯಾಲ್ಕ್ಯುಲೇಟರ್‌ ತರಲು ಅವಕಾಶ ಇಲ್ಲ. ಅಲ್ಲದೆ, ಮೊಬೈಲ್ ಕೂಡ ನಿಷೇಧಿಸಲಾಗಿದೆ. ಅಭ್ಯರ್ಥಿಗಳಿಗೆ ಸಮಯದ ಬಗ್ಗೆ ತಿಳಿಯುವಂತಾಗಲು ಕೇಂದ್ರದಲ್ಲಿ ಗೋಡೆ ಗಡಿಯಾರ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗುರುಲಿಂಗಪ್ಪ ಮಿಣಜಗಿ ಮಾತನಾಡಿ, ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸುಮಾರು 1,657 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಪ್ರವೇಶ ಪತ್ರಗಳನ್ನು ಆನ್‌ಲೈನ್‌ ಮೂಲಕ ಪಡೆಯಲು ಪರೀಕ್ಷಾ ಪ್ರಾಧಿಕಾರದಿಂದ ಅಭ್ಯರ್ಥಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಏಪ್ರಿಲ್ 26ರಂದು ಕೊಠಡಿ ಮೇಲ್ವಿಚಾರಕರ ತರಬೇತಿಯನ್ನು ಆಯಾ ಪರೀಕ್ಷಾ ಕೇಂದ್ರದಲ್ಲಿ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ನ್ಯೂ ಕನ್ನಡ ಪದವಿ ಪೂರ್ವ ಕಾಲೇಜು ಕೇಂದ್ರಕ್ಕೆ ಹೊಂದಿಕೊಂಡಂತೆ ಭಾಗ್ಯಲಕ್ಷ್ಮೀ ಚಿತ್ರಮಂದಿರ ಇದೆ. ಆದ್ದರಿಂದ ಪರೀಕ್ಷಾ ದಿನದಂದು ಚಿತ್ರ ಪ್ರದರ್ಶನ ರದ್ದುಪಡಿಸಬೇಕಾಗುತ್ತದೆ. ಜವಾಹರ ಸಂಯುಕ್ತ ಪದವಿ ಪೂರ್ವ ಕಾಲೇಜು ಕೇಂದ್ರಕ್ಕೆ ಹೊಂದಿಕೊಂಡ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಪರೀಕ್ಷಾ ದಿನದಂದು ಧ್ವನಿವರ್ಧಕ ಬಳಸದಂತೆ ಸೂಚಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಡಿವೈಎಸ್‌ಪಿ ಯು. ಶರಣಪ್ಪ, ಜಿಲ್ಲಾ ಖಜಾನಾಧಿಕಾರಿ ಶೇಖ್‌ ಮಹಿಬೂಬಿ, ತಹಶೀಲ್ದಾರ್‌ ಶಿವರಾಜ ಸೇರಿದಂತೆ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು, ವಿಶೇಷ ಜಾಗೃತದಳ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next