Advertisement

ಸಮಾಜದಲ್ಲಿ ಮಹಿಳೆಯರಿಗಿದೆ ಗೌರವ

04:12 PM Mar 09, 2020 | Naveen |

ಯಾದಗಿರಿ: ಮಹಿಳೆಯರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ಮನೆಯಲ್ಲಿ ನಮ್ಮ ತಾಯಿಗೆ ಕೊಡುವ ಗೌರವ ಸಮಾಜದಲ್ಲಿನ ಎಲ್ಲ ಮಹಿಳೆಯರಿಗೂ ಕೊಡಬೇಕು. ಅಂದಾಗ ಮಾತ್ರ ಮಹಿಳೆಯರ ಮೇಲೆ ನಡೆಯುವ ಅನ್ಯಾಯ, ದೌರ್ಜನ್ಯ, ಅತ್ಯಾಚಾರದಂತಹ ಪ್ರಕರಣ ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಹೇಳಿದರು.

Advertisement

ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ರವಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸ್ತ್ರೀ ಶಕ್ತಿ ಸಮಾವೇಶ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ, ಸ್ತ್ರೀ ಶಕ್ತಿ ಸಂಘಗಳಿಂದ ಉತ್ಪಾದಿತ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಗಂಡು-ಹೆಣ್ಣಿಗೆ ಸಮಾನ ಗೌರವ ಸಿಗಬೇಕು. ಮಹಿಳೆಯರನ್ನು ನೋಡುವ ದೃಷ್ಟಿ ಬದಲಾಗಬೇಕು. ಪ್ರತಿ ತಂದೆ-ತಾಯಿ ಮನೆಯಲ್ಲಿ ತಮ್ಮ ಮಕ್ಕಳಿಗೆ ಸಮಾಜದಲ್ಲಿ ಹೇಗೆ ಜೀವಿಸಬೇಕು ಎನ್ನುವ ಕುರಿತು ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು.

ಜಿ.ಪಂ ಸಿಇಒ ಶಿಲ್ಪಾ ಶರ್ಮಾ ಮಾತನಾಡಿ, ಅಪೌಷ್ಟಿಕತೆಯಿಂದ ಇರುವ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಹಲವಾರ ಯೋಜನೆಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಜಾರಿಗೆ ತಂದಿದ್ದು, ಅಂತಹ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ಉಪನ್ಯಾಸಕಿ ಡಾ|ಜ್ಯೋತಿಲತಾ ತಡಿಬಿಡಿಮಠ ಮಾತನಾಡಿ, ಹೆಣ್ಣು ಪ್ರಕೃತಿಯ ಅದ್ಭುತ ಕೊಡುಗೆ. ಹೆಣ್ಣಿಲ್ಲದ ಮನೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ಪ್ರತಿಯೊಬ್ಬರ ಸಹಕಾರ, ಪ್ರೀತಿ ಇದ್ದರೆ ಹೆಣ್ಣು ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಬಲ್ಲಳು. ಕುಟುಂಬದಲ್ಲಿ ಎಲ್ಲರ ಆರೋಗ್ಯ ಸರಿಯಾಗಿರಬೇಕು ಎಂದು ಬಯಸುವ ಮಹಿಳೆಯರು ತಮ್ಮ ಆರೋಗ್ಯದ ಕುರಿತಾಗಿಯೂ ಕಾಳಜಿ ವಹಿಸಬೇಕು ಎಂದು ಹೇಳಿದರು.

Advertisement

ವಕೀಲೆ ನಿರ್ಮಲಾದೇವಿ ಎಸ್‌. ಹೂಗಾರ ಮಹಿಳೆಯರಿಗೆ ಇರುವ ಕಾನೂನುಗಳು ಹಾಗೂ ವಕೀಲೆ ಸಾವಿತ್ರಿದೇವಿ ಪಾಟೀಲ ಮಹಿಳೆಯರ ಮೇಲೆ ಕೌಟುಂಬಿಕ ದೌರ್ಜನ್ಯ ಕುರಿತು ಉಪನ್ಯಾಸ ನೀಡಿದರು. ಮಹಿಳಾ ಸಮಖ್ಯಾ ಪ್ರಭಾರ ಜಿಲ್ಲಾ ಸಂಯೋಜಕಿ ವಿಮಲಾಕ್ಷಿ ಆರ್‌.ಹಿರೇಮಠ ತಾಲೂಕು ಒಕ್ಕೂಟಗಳ ಬಲವರ್ಧನೆ ಮತ್ತು ಇಲಾಖೆ/ ಇತರೆ ಇಲಾಖೆಗಳಲ್ಲಿ ಮಹಿಳೆಯರಿಗಾಗಿ ಇರುವ ಯೋಜನೆಗಳು, ಕಾರ್ಯಕ್ರಮಗಳ ಗ್ರಾಮಸಭೆ ಕುರಿತು ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶೈಕ್ಷಣಿಕ, ಸಾಂಸ್ಕೃತಿಕವಾಗಿ ಸಾಧನೆ ಮಾಡಿದ ಹತ್ತು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು. ಯಾದಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜಿ. ಮಣ್ಣೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿ.ಪಂ ಸದಸ್ಯೆ ಅನಿತಾ ಎಸ್‌. ರಾಠೊಡ, ಶಶಿಕಲಾ ಬಿ. ಕ್ಯಾತ್ನಾಳ, ತಾಲೂಕು ಪಂಚಾಯತಿ ಅಧ್ಯಕ್ಷೆ ಭೀಮವ್ವ ಎಂ. ಅಚ್ಚೋಲ, ನ್ಯಾಯವಾದಿಗಳಾದ ಶೋಭಾ ಸಾಲಮಂಟಪಿ, ಸುಷ್ಮಾ ಜಾಧವ ಉಪಸ್ಥಿತರಿದ್ದರು. ತಾಲೂಕು ಶಿಶು ಅಭಿವೃದ್ಧಿ ಯೋಜನಾ ಧಿಕಾರಿಗಳು, ತಾಲೂಕು ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು, ಅಂಗನವಾಡಿ ಮೇಲ್ವಿಚಾರಕಿಯರು, ಸಹಾಯಕೀಯರು, ಸಾರ್ವಜನಿಕರು ಭಾಗವಹಿಸಿದ್ದರು.

ಮಾತೃ ವಂದನಾ ಯೋಜನೆ ಜಿಲ್ಲಾ ನೋಡಲ್‌ ಅಧಿಕಾರಿ ಯಲ್ಲಪ್ಪ ಕೆ. ನಿರೂಪಿಸಿದರು. ಸುರಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಾಲಸಾಬ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next