ಯಾದಗಿರಿ: ರೈತರು ಇಂದಿನ ದಿನಗಳಲ್ಲಿ ಕೇವಲ ಕೃಷಿ ಮಾತ್ರವಲ್ಲದೇ ಇತರ ಉಪ ಕಸುಬು ಮಾಡಿಕೊಂಡಾಗ ಮಾತ್ರ ಕೃಷಿಯಲ್ಲಿ ಆದಾಯ ಹೆಚ್ಚಿಸಲು ಸಾಧ್ಯ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ| ಬಿ.ಎಂ. ಚಿತ್ತಾಪುರ ಹೇಳಿದರು.
ಜಿಲ್ಲೆಯ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ತರಬೇತಿ ನಿಲಯದಲ್ಲಿ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ ಕುರಿ ಮತ್ತು ಆಡು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ಧತಿಗಳು ಕುರಿತ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪಶು ಸಂಪತ್ತು ಯಥೇತ್ಛವಾಗಿ ಬೆಳೆಯಲು ಸೂಕ್ತ ವಾತಾವರಣ ಮತ್ತು ಹವಾಗುಣವಿದೆ. ಸಾಮಾನ್ಯವಾಗಿ ಯಾದಗಿರಿ ಜಿಲ್ಲೆಯಲ್ಲಿ ಕುರಿ ಮತ್ತು ಆಡುಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಅಲೆಮಾರಿ ಪದ್ಧತಿಯಾಗಿದೆ. ಇಂದಿನ ದಿನಗಳಲ್ಲಿ ಮಾಂಸಕ್ಕಾಗಿ ಕುರಿ ಮತ್ತು ಆಡುಗಳನ್ನು ಒಂದೆಡೆ ಸಾಕುವ ಪದ್ಧತಿಗಳು ಹೆಚ್ಚು ಬೇಡಿಕೆಯಲ್ಲಿವೆ. ಅದಕ್ಕಾಗಿ ರೈತರು ಇಂತಹ ತರಬೇತಿಯಲ್ಲಿ ವೈಜ್ಞಾನಿಕ ಪದ್ಧತಿಗಳ ಬಗ್ಗೆ ಮಾಹಿತಿ ಪಡೆದು ಅಳವಡಿಸಿಕೊಳ್ಳುವುದು ಸೂಕ್ತ ಎಂದು ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ| ಶರಣಭೂಪಾಲರೆಡ್ಡಿ ಮಾತನಾಡಿ, ರೈತರಿಗಾಗಿ ಇಲಾಖೆಯಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಪ್ರಸಕ್ತ ಜಾರಿಯಲ್ಲಿರುವ ಲಸಿಕೆಗಳ ಬಗ್ಗೆ ಮತ್ತು ಅವುಗಳ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಯೋಜನೆಗಳ ಲಾಭ ಪಡೆಯಲು ತಂತ್ರಾಂಶದ ಮೂಲಕ ಹೆಸರು ನೋಂದಾಯಿಸಿ ಸರಕಾರದ ಯೋಜನೆಗಳಿಂದ ಲಾಭ ಪಡೆಯುವಂತೆ ಸಲಹೆ ನೀಡಿದರು.
ತರಬೇತಿಯಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಮಲ್ಲಿಕಾರ್ಜುನ ಕೆಂಗನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿ ಮೂಲ ಉದ್ದೇಶ ಮತ್ತು ರೈತರಿಗೆ ಅದರಿಂದಾಗುವ ಲಾಭಗಳ ಬಗ್ಗೆ ತಿಳಿಸಿದರು.
ತರಬೇತಿ ಸಂಯೋಜಕ ಡಾ| ಮಹೇಶ ಕುರಿ ಮತ್ತು ಆಡು ಸಾಕಾಣಿಕೆ ವಿವಿಧ ಆಯಾಮಗಳ ಬಗ್ಗೆ ತಿಳಿಸಿದರು. ತೋಟಗಾರಿಕೆ ವಿಜ್ಞಾನಿಗಳಾದ ಸತೀಶ ಕಾಳೆ ಹಾಗೂ ಸುಮಾರು 50ಕ್ಕೂ ಹೆಚ್ಚಿನ ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.