ಯಾದಗಿರಿ: ಜಿಲ್ಲಾ ಬಾಲ ಕಾರ್ಮಿಕ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಪೊಲೀಸ್ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ನಗರದ ಹೊಸ ಬಸ್ ನಿಲ್ದಾಣ, ಚಿರಂಜೀವಿ ಶಾಲೆ ಹತ್ತಿರ, ಗಂಜ್ ಏರಿಯಾ, ಮೈಲಾಪೂರ ಅಗಸಿ ಏರಿಯಾ, ಹೊಸಳ್ಳಿ ಕ್ರಾಸ್ ಸುತ್ತಮುತ್ತಲಿನ ಸ್ಟಾಲ್, ಮಳಿಗೆ, ಅಂಗಡಿಗಳ ಮೇಲೆ ಅನಿರೀಕ್ಷಿತ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಮತ್ತು ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡರು.
ಈ ವೇಳೆ ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರ ಸಿಂಗ್ ಠಾಕೂರ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿ ಆದೇಶ ಪಡೆದು ದಾಳಿ ನಡೆಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು ನಿಷೇಧಿಸಲಾಗಿದ್ದು, ಉಲ್ಲಂಘಿಸಿದಲ್ಲಿ 25 ಸಾವಿರ ರೂ. ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಬಾಲ ಕಾರ್ಮಿಕ ಪದ್ಧತಿ 1986ರ ಕಾಯ್ದೆಯಡಿ 18 ವರ್ಷದೊಳಗಿನ ಮಕ್ಕಳನ್ನು ಯಾವುದೇ ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂಬ ವಿಷಯದ ಕುರಿತು ಅರಿವು ಮೂಡಿಸಲಾಗಿದೆ ಎಂದು ಹೇಳಿದರು.
ನಗರಸಭೆ ಪರಿಸರ ಇಂಜಿನಿಯರ್ ಸಂಗಮೇಶ ಮಾತನಾಡಿ, ಸಾಕಷ್ಟು ಬಾರಿ ಜಾಥಾ ಮೂಲಕ, ಪ್ರಚಾರ, ಕರಪತ್ರಗಳ ವಿತರಣೆ, ಕಾನೂನು ಅರಿವು- ನೆರವು ಕಾರ್ಯಕ್ರಮಗಳು ಮತ್ತು ಹಲವಾರು ಬಾರಿ ಅನಿರೀಕ್ಷಿತ ತಪಾಸಣೆ, ದಾಳಿ ಮಾಡಿ ಸಾರ್ವಜನಿಕರಿಗೆ ಹಾಗೂ ಸಬಂಧಿಸಿದ ಅಂಗಡಿ ಮಾಲೀಕರುಗಳಿಗೆ ಮಾಹಿತಿ ನೀಡಿದರೂ ಸಹ ಹಲವಾರು ಅಂಗಡಿ ಮಾಲೀಕರು ನಿಯಮಗಳನ್ನು ಉಲ್ಲಂಘಿಸಿ, ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸುತ್ತಿರುವುದು, ಬಹಿರಂಗವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಬಾಲಕಾರ್ಮಿಕರನ್ನು ದುಡಿಸಿಕೊಳ್ಳುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ, ಪ್ರಕರಣ ದಾಖಲಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ಮಹಾಲಕ್ಷ್ಮೀ ಸಜ್ಜನ್ ಮಾತನಾಡಿ, ಕೋಟ್ಪಾ-2003 ಕಾಯ್ದೆಯಡಿ ಸೆಕ್ಷನ್ 4, 5, 6, 6ಎ, 6ಬಿ ಮತ್ತು 7ರ ಪ್ರಕಾರ ಸಂಬಂಧಿಸಿದ ಕಾಯ್ದೆಗಳನುಸಾರ ಹೋಟೆಲ್, ರೆಸ್ಟೊರೆಂಟ್, ಬಾರ್, ಧಾಬಾ, ಅಂಗಡಿಗಳಲ್ಲಿ ಮತ್ತು ಶಾಲಾ-ಕಾಲೇಜು ಪ್ರದೇಶದ 100 ಮೀಟರ್ ಅಂತರದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಬಹಿರಂಗವಾಗಿ ಮಕ್ಕಳಿಂದ ಮಾರುವುದಕ್ಕೆ ಪ್ರಚೋದನೆ ನೀಡುವುದು, ದುಡಿಸಿಕೊಳ್ಳುವುದು ಮತ್ತು ಸೇದುವುದು ಕಾನೂನಿನ ಪ್ರಕಾರ ನಿಷೇಧಿಸಲಾಗಿರುತ್ತದೆ. ನಿಯಮಗಳನ್ನು ಉಲ್ಲಂಘಿಸಿದಲ್ಲಿ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ತಿಳಿವಳಿಕೆ ನೀಡಿದರು. ಎಎಸ್‌ಐ ಪಾಟೀಲ ಮತ್ತು ನಗರಸಭೆ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.