ಯಾದಗಿರಿ: ಬರ ಆವರಿಸಿರುವುದರಿಂದ ಯಾದಗಿರಿ ಜಿಲ್ಲೆಯಲ್ಲಿ ಭೀಮೆಯ ಒಡಲು ಬತ್ತಿ ಹೋಗಿದ್ದು, ಬೇಸಿಗೆ ಆರಂಭಕ್ಕೂ ಮುನ್ನವೇ ಜಿಲ್ಲಾಡಳಿತ ನದಿ ಪಾತ್ರದ ರೈತರು ಭತ್ತ ಬೆಳೆಯದಂತೆ ಸೂಚನೆ ನೀಡಿದ್ದರಿಂದ ಭತ್ತ ಬೆಳೆದಿಲ್ಲವಾದರೂ ಕುಡಿಯುವ ನೀರಿಗೆ ಅಭಾವಯುಂಟಾಗಿದೆ.
ಜಿಲ್ಲೆಯಲ್ಲಿ ಕೃಷ್ಣಾ ಮತ್ತು ಭೀಮಾ ನದಿಗಳು ಹರಿದರೂ ನದಿಗಳಿಗೆ ಒಳ ಹರಿವುಯಿಲ್ಲದೇ ಸಂಪೂರ್ಣ ಬತ್ತಿ ಹೋಗಿದೆ. ಈ ಮಧ್ಯೆಯೇ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉದ್ಭವವಾಗಿದೆ. ಭೀಮಾನದಿಯ ನೀರನ್ನು ಬಹುತೇಕ ನದಿ ಪಾತ್ರದ ಜಮೀನು ಮಾಲೀಕರು ಬೆಳೆಗಳಿಗೆ ಬಳಸಿಕೊಳ್ಳುತ್ತಾರೆ. ಅಲ್ಲದೇ ಇಲ್ಲಿಂದಲೇ ಯಾದಗಿರಿ ಮತ್ತು ಗುರುಮಠಕಲ್ ಪಟ್ಟಣ ಹಾಗೂ ಸುತ್ತಲಿನ 36 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ನೀರು ಬಳಸಿಕೊಳ್ಳಲಾಗುತ್ತದೆ.
ಭೀಮಾನದಿಯ ಹಳೆಯ ಬ್ರೀಡ್ಜನಿಂದ ಯಾದಗಿರಿ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತಿತ್ತು, ಇದರ ಮೇಲ್ಭಾಗ ಗುರುಸಣಿಗಿ ಬ್ರಡ್ಜ್ನಲ್ಲಿ ಕೇವಲ 10-12 ಫೀಟ್ ನೀರಿನ ಸಂಗ್ರಹ ಇರುವುದರಿಂದ ಕೇವಲ 1 ಗೇಟ್ ತೆರೆದು ನದಿಗೆ ನೀರು ಹರಿಸಲಾಗುತ್ತಿದೆ. ಅಲ್ಲದೇ ಜಲ ಸಂಕಟ ಎದುರಾಗಿರುವುದರಿಂದ ನೀರು ಬೇರೆಡೆ ಹರಿದು ಪೋಲಾಗಬಾರದು ಎಂದು ಎಚ್ಚರಿಕೆ ವಹಿಸಿ ನೇರವಾಗಿ ನೀರೆತ್ತುವ ಘಟಕಕ್ಕೆ ಬರುವಂತೆ ಮಾರ್ಗವನ್ನು ಮಾಡಲಾಗಿದ್ದು ಈ ಮೂಲಕ ಹರಿದು ಬರುವ ನೀರನ್ನೇ ನಗರಸಭೆ ಒಂದು ದಿನ ಬಿಟ್ಟು ಒಂದು ದಿನ ಸರಬರಾಜು ಮಾಡುತ್ತಿದೆ. ಆದರೂ ನಗರದ ಬಹುತೇಕ ಬಡಾವಣೆಗಳಿಗೆ ಸಮರ್ಪಕ ನೀರು ತಲುಪದೇ ಇರುವುದುರು ಸಾರ್ವಜನಿಕರು ರೊಚ್ಚಿಗೆದ್ದು ನೀರಿಗಾಗಿ ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಿದೆ.
ಗುರುಸಣಿಗಿ ಬ್ರಿಡ್ಜ್ನಲ್ಲಿ 10 ಫೀಟ್ ನೀರು: ಭೀಮಾನದಿ ಮೇಲ್ಭಾಗದ ಗುರುಸಣಿಗಿ ಬ್ರಿಡ್ಜ್ಗೆ ಸನ್ನತ್ತಿಯಿಂದ ಒಳ ಹರಿವು ಬರುತ್ತದೆ. ಆದರೇ, ಪ್ರಸ್ತುತ ನೀರಿನ ಸಂಗ್ರಹ ಕೇವಲ 10ರಿಂದ 12 ಫೀಟ್ ಇರುವುದರಿಂದ ಗುರುಮಠಕಲ್ ಪಟ್ಟಣ ಮತ್ತು ಸುತ್ತಲಿನ 36 ಹಳ್ಳಿಗಳಿಗೆ ಕುಡಿಯುವ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಸಮರ್ಪಕ ನೀರು ಸರಬರಾಜಿಗೆ ಸುಮಾರು 20 ಫೀಟ್ ವರೆಗೆ ನೀರಿನ ಸಂಗ್ರಹವಿರಬೇಕು ಎನ್ನಲಾಗಿದ್ದು, ಪ್ರಸ್ತುತ ನೀರಿನ ಸಂಗ್ರಹ ಇಳಿಕೆಯಾಗಿರುವುದು ಸಾಕಷ್ಟು ಸಮಸ್ಯೆಗೆ ಕಾರಣವಾಗಿದೆ.
36 ಹಳ್ಳಿಗಳಿಗಿಲ್ಲ ನೀರು: 2008ರಲ್ಲಿ ಗುರಮಠಕಲ್ ಪಟ್ಟಣ ಸೇರಿ 36 ಗ್ರಾಮೀಣ ಭಾಗಗಳಿಗೆ ನಿರಂತರ ಕುಡಿಯುವ ನೀರು ಸರಬರಾಜುಗೊಳಿಸಲು ಅಂದಾಜು 32 ಕೋಟಿ ವೆಚ್ಚದಲ್ಲಿ ಯೋಜನೆಗೆ ಮಂಜೂರಾತಿ ದೊರಕಿತ್ತು. ಪುನಃ ಹೆಚ್ಚುವರಿಯಾಗಿ 5 ಕೋಟಿಗಳನ್ನು ಸರ್ಕಾರ ಮಂಜೂರು ಮಾಡಿದ್ದರಿಂದ ಯೋಜನೆ 2013ರಲ್ಲಿ ಆರಂಭಗೊಂಡಿತ್ತು. ಪ್ರಸ್ತುತ ನದಿಯಲ್ಲಿ ನೀರಿನ ಸಂಗ್ರಹ ಕಡಿಮೆಯಿರುವುದರಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ಗುರುಮಠಕಲ್ ಭಾಗದ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
19 ಗ್ರಾಮಗಳಿಗೆ ಟ್ಯಾಂಕರ್ ನೀರು: ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನಿವಾರಿಸಲು ಈಗಾಗಲೇ ಜಿಲ್ಲಾಡಳಿತ ಯಾದಗಿರಿ, ಶಹಾಪುರ ಹಾಗೂ ಸುರಪುರ ತಾಲೂಕಿನ 19 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜುಗೊಳಿಸಲು ಕ್ರಮವಹಿಸಿದೆ.
ಜಲ ಚರಗಳ ಮಾರಣ ಹೋಮ
ಒಂದೆಡೆ ಕುಡಿಯುವ ನೀರಿನ ತಾತ್ವಾರದಿಂದಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇನ್ನೊಂದೆಡೆ ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂಪೂರದ ಕೆರೆಯಲ್ಲಿದ್ದ ಮೀನುಗಳ ಮಾರಣ ಹೋಮವಾಗಿದೆ. ಕರೆಯಲ್ಲಿ ನೀರು ಬತ್ತುತ್ತಿರುವುದರಿಂದ ಮೀನುಗಳು ಸಾವನ್ನಪ್ಪಿದ್ದು, ನದಿ ಪಾತ್ರದಲ್ಲಿ ಅಡಗಿರುವ ಮೊಸಳೆಗಳು ಕೂಡ ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿವೆ.
ಅನೀಲ ಬಸೂದೆ