ಯಾದಗಿರಿ: ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾರ್ಚ್ 26ರಂದು ರೈಲ್ವೆ ಕಾರ್ಮಿಕನೊಬ್ಬ ಮಲದ ಗುಂಡಿಗಿಳಿದು ಸ್ವಚ್ಛತೆ ಮಾಡುವ ಅಮಾನವೀಯ ಘಟನೆ ಕುರಿತು ಅಧಿಕಾರಿಗಳು ತಂಡ ರಚಿಸಿ ವಿಚಾರಣೆ ಶುರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿನ ರೈಲ್ವೆ ನಿಲ್ದಾಣದ ಆವರಣದಲ್ಲಿ ಗುಂಡಿಗಿಳಿದಿದ್ದ ರಾಯಚೂರು ವಿಭಾಗದ ಕಾರ್ಮಿಕ ಖಾದರವಲಿ ಕೇವಲ ಒಳ ಉಡುಪು ಧರಿಸಿ ಕೈ ಮತ್ತು ಕಾಲುಗಳಿಗೆ ಯಾವುದೇ ಸುರಕ್ಷತೆಯಿಲ್ಲದೇ ಸ್ವಚ್ಛಗೊಳಿಸುತ್ತಿದ್ದ. ಈ ಬಗ್ಗೆ ಉದಯವಾಣಿ ಪತ್ರಿಕೆಯಲ್ಲಿ ಮಾರ್ಚ್ 27ರಂದು ವರದಿ ಪ್ರಕಟವಾಗಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ತಂಡ ರಚಿಸಿ ವಿಚಾರಣೆ ಆರಂಭಿಸಿದ್ದಾರೆ. ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ವರದಿಗೆ ಸ್ಪಂದಿಸಿದ್ದರು. ವರದಿ ಪ್ರಕಟವಾದ ದಿನವೇ ದಕ್ಷಿಣ ಮಧ್ಯ ರೈಲ್ವೆ ಗುಂತಕಲ್ ವಿಭಾಗದ ಪ್ರಬಂಧಕರಿಗೆ ನೋಟಿಸ್ ಜಾರಿಗೊಳಿಸಿ 10 ದಿನದಲ್ಲಿ ಕ್ರಮಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಈ ಬಗ್ಗೆ ಯಾದಗಿರಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರು ಪ್ರತಿಕ್ರಿಯಿಸಿ ರೈಲ್ವೆ ಅಧಿಕಾರಿಗಳನ್ನು ವಿಚಾರಿಸಿ ಕ್ರಮಕೈಗೊಳ್ಳುವುದಾಗಿ ಹೇಳಿದ್ದರು.
ನೋಟಿಸ್‌ಗೆ ಸಿಕ್ಕಿಲ್ಲವೇ ಉತ್ತರ?: ರೈಲ್ವೆ ನಿಲ್ದಾಣದ ಆವರಣದಲ್ಲಿ ಮಲದಗುಂಡಿಗಿಳಿದು ಕಾರ್ಮಿಕರ ಯಾವುದೇ ಸುರಕ್ಷತೆಯಿಲ್ಲದೇ ಸ್ವಚ್ಛಗೊಳಿಸುವುದು ಮ್ಯಾನುವಲ್ ಸ್ಕ್ಯಾವೆಂಜಿಂಗ್ ಕಾನೂನು ಉಲ್ಲಂಘನೆಯಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮಕೈಗೊಂಡು 10 ದಿನದಲ್ಲಿ ಉತ್ತರಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ದಕ್ಷಿಣ ಮಧ್ಯ ರೈಲ್ವೆ ಗುಂತಕಲ್ ವಿಭಾಗದ ಪ್ರಬಂಧಕರಿಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಘಟನೆ ನಡೆದು 1 ತಿಂಗಳು ಕಳೆದರೂ ಈವರೆಗೂ ಆಯೋಗಕ್ಕೆ ರೈಲ್ವೆ ಅಧಿಕಾರಿಗಳು ವರದಿ ನೀಡಿದ್ದಾರೋ ಇಲ್ಲವೋ ಎನ್ನುವುದು ಮಾತ್ರ ಸ್ಪಷ್ಟವಾಗಿಲ್ಲ.
ಕ್ರಮಕೈಗೊಳ್ಳಲು ನಗರಸಭೆಗಿಲ್ಲವೇ ಅಧಿಕಾರ?: ಯಾದಗಿರಿ ರೈಲ್ವೆ ನಿಲ್ದಾಣ ಯಾದಗಿರಿ ನಗರ ಪ್ರದೇಶದಲ್ಲಿರುವುದರಿಂದ ಮಲದ ಗುಂಡಿಗಿಳಿದು ಸ್ವಚ್ಛಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ಉದಯವಾಣಿ ವರದಿ ಬಳಿಕ ಎಚ್ಚೆತ್ತುಕೊಂಡಿರುವ ನಗರಸಭೆ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಘಟನೆ ಕುರಿತು ನಗರಸಭೆಯಿಂದ ಮಾಹಿತಿ ಕೇಳಿದರೆ ರೈಲ್ವೆ ಇಲಾಖೆಗೆ ತನ್ನದೇ ಉನ್ನತ ಅಧಿಕಾರಿಗಳಿದ್ದಾರೆ. ಹಾಗಾಗಿ ಇಲಾಖೆಯೇ ವಿಚಾರಣೆ ನಡೆಸುತ್ತದೆ. ಆದ್ದರಿಂದ ಈ ಘಟನೆ ನಗರಸಭೆಗೆ ಸಂಬಂಧವಿಲ್ಲ ಎಂಬ ಉತ್ತರ ದೊರೆತಿದೆ ಎನ್ನುವ ಮಾಹಿತಿ ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
ವಿಚಾರಣೆಗೆ ರೈಲ್ವೆ ಅಧಿಕಾರಿಗಳ ತಂಡ ರಚನೆ: ಇಂತಹ ಅಮಾನವೀಯ ಘಟನೆ ಕುರಿತು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಗುಂತಕಲ್ ವಿಭಾಗದ ಮೇಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಚಾರಣೆಗೆ ತಂಡ ರಚಿಸಿದ್ದಾರೆ. ತಂಡದಲ್ಲಿ ರಾಯಚೂರಿನ ಮೂವರು ಹಿರಿಯ ಅಧಿಕಾರಿಗಳು ಇದ್ದಾರೆ. ಈ ಬಗ್ಗೆ ಮೇ 10ರಂದು ರಾಯಚೂರು ಅಧಿಕಾರಿಗಳು ಯಾದಗಿರಿ ಸ್ಟೇಷನ್ ಮ್ಯಾನೇಜರ್‌ಗೆ ಪತ್ರ ಬರೆದಿರುವ ಕುರಿತು ಮಾಹಿತಿ ಸಿಕ್ಕಿದೆ.
ಕಾರ್ಮಿಕನ ವಿಚಾರಣೆ: ಘಟನೆಗೆ ಸಂಬಂಧಿಸಿದಂತೆ ಮಾರ್ಚ್ 26ರಂದು ಯಾದಗಿರಿ ರೈಲ್ವೆ ನಿಲ್ದಾಣದ ಆವರಣದಲ್ಲಿ ಮಲದ ಗುಂಡಿಗಿಳಿದ ಕಾರ್ಮಿಕ ಖಾದರವಲಿಯನ್ನು ರಾಯಚೂರಿನಲ್ಲಿ ರೈಲ್ವೆ ಅಧಿಕಾರಿಗಳು ಈಗಾಗಲೇ ವಿಚಾರಣೆ ನಡೆಸಿದ್ದಾರೆ. ಈ ಕುರಿತು ಕಾರ್ಮಿಕ ಒಪ್ಪಿಕೊಂಡಿದ್ದಾನೆ ಎನ್ನುವ ಮಾಹಿತಿ ಖಚಿತ ಮೂಲಗಳಿಂದ ಸಿಕ್ಕಿದೆ.
ಘಟನೆಗೆ ಸಂಬಂಧಿಸಿದಂತೆ ಇನ್ನೂ ಕೆಲವೇ ದಿನದಲ್ಲಿ ವಿಚಾರಣೆ ಕುರಿತು ಅಂತಿಮ ವರದಿಯನ್ನು ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಸಲ್ಲಿಸಲಿದ್ದು, ಬಳಿಕ ಘಟನೆಗೆ ಯಾರನ್ನು ಹೊಣೆ ಮಾಡಲಾಗುತ್ತದೋ ಎನ್ನುವ ಚಿತ್ರಣ ಸ್ಪಷ್ಟವಾಗಲಿದೆ.