Advertisement

ಗುಣಮಟ್ಟದ ಬಿತ್ತನೆ ಬೀಜ ವಿತರಿಸಿ

04:53 PM May 26, 2019 | Naveen |

ಯಾದಗಿರಿ: ಜಿಲ್ಲೆಯಲ್ಲಿ ಕೆಲವು ದಿನಗಳಲ್ಲಿ ಮುಂಗಾರು ಆರಂಭವಾಗಲಿದೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸಬೇಕು. ಯಾವುದೇ ಕಾರಣಕ್ಕೂ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಉಂಟಾಗಬಾರದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 2019-20ನೇ ಸಾಲಿನ ಮುಂಗಾರು ಹಂಗಾಮಿನ ಪೂರ್ವಭಾವಿ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅಕ್ರಮ ಮತ್ತು ನಕಲಿ ಬಿತ್ತನೆ ಬೀಜ ಮಾರಾಟ ಕಂಡು ಬಂದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ರಿಯಾಯಿತಿ ದರದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟದ ವೇಳೆ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುವುದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌. ಮಾತನಾಡಿ, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಪ್ರಮುಖ ಬೆಳೆಗಳಾದ ತೊಗರಿ, ಉದ್ದು, ಹೆಸರು, ಭತ್ತ, ಸಜ್ಜೆ, ಜೋಳ, ಅಲಸಂದೆ, ಸೂರ್ಯಕಾಂತಿ, ಮೆಕ್ಕೆ ಜೋಳ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ (ಕೆಎಸ್‌ಎಸ್‌ಸಿ), ರಾಷ್ಟ್ರೀಯ ಬೀಜ ನಿಗಮ (ಎನ್‌ಎಸ್‌ಸಿ) ಹಾಗೂ ಖಾಸಗಿ ಸಂಸ್ಥೆಗಳಿಂದ ದಾಸ್ತಾನು ಮಾಡಲಾಗಿದೆ. 79,285 ಮೆಟ್ರಿಕ್‌ ಟನ್‌ ರಸಗೊಬ್ಬರದ ಬೇಡಿಕೆ ಇದೆ. 95,567 ಮೆಟ್ರಿಕ್‌ ಟನ್‌ ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ಹಾಗಾಗಿ, ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಬೀಳುವುದಿಲ್ಲ. ಮಳೆ ಬಾರದಿದ್ದರೆ ಪರ್ಯಾಯ ಬೆಳೆ ಪದ್ಧತಿ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಬಿಟಿ ಹತ್ತಿ ಬೀಜ ಸರಬರಾಜು ಮಾಡಲು 39 ಸಂಸ್ಥೆಗಳು ಅನುಮೋದಿತವಾಗಿವೆ. ಬೀಜದ ಬೇಡಿಕೆ ಪ್ರಮಾಣ 5.31 ಲಕ್ಷ ಪಾಕೆಟ್ ಇದ್ದು, 12.94 ಲಕ್ಷ ಪಾಕೆಟ್ ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಬಿತ್ತನೆ ಬೀಜಗಳ ರಿಯಾಯಿತಿ ದರ: ಭತ್ತ ಸಾರ್ವಜನಿಕ ತಳಿಗೆ ಸಾಮಾನ್ಯ ವರ್ಗಕ್ಕೆ ಪ್ರತಿ ಕೆಜಿಗೆ 8 ರೂ. (ಪ್ರಮಾಣಿತ) ಹಾಗೂ 7 ರೂ. (ನಿಜ ಚೀಟಿ) ನಿಗದಿಪಡಿಸಲಾಗಿದೆ. ಅದರಂತೆ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ 12 ರೂ. (ಪ್ರಮಾಣಿತ) ಹಾಗೂ 15 ರೂ. (ನಿಜ ಚೀಟಿ) ಇದೆ. ಜೋಳ ಸಂಕರಣ ತಳಿಗೆ ಸಾಮಾನ್ಯ ವರ್ಗಕ್ಕೆ 30 ರೂ. (ಪ್ರಮಾಣಿತ) ಹಾಗೂ 29 ರೂ. (ನಿಜ ಚೀಟಿ) ಇದ್ದು, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ 45 ರೂ. (ಪ್ರಮಾಣಿತ) ಹಾಗೂ 43 ರೂ. (ನಿಜ ಚೀಟಿ) ಇದೆ. ಜೋಳ ಸಾರ್ವಜನಿಕ ತಳಿಗೆ ಸಾಮಾನ್ಯ ವರ್ಗಕ್ಕೆ 20 ರೂ. (ಪ್ರಮಾಣಿತ) ಹಾಗೂ 19 ರೂ. (ನಿಜ ಚೀಟಿ) ಇದ್ದು, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ 30 ರೂ. (ಪ್ರಮಾಣಿತ) ಹಾಗೂ 28.50 ರೂ. (ನಿಜ ಚೀಟಿ) ಇದೆ.

Advertisement

ತೊಗರಿ, ಉದ್ದು ಮತ್ತು ಹೆಸರು ಬೀಜಗಳ ಸಾರ್ವಜನಿಕ ತಳಿಗೆ ಸಾಮಾನ್ಯ ವರ್ಗಕ್ಕೆ 25 ರೂ. (ಪ್ರಮಾಣಿತ) ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ 37.50 ರೂ. (ಪ್ರಮಾಣಿತ) ಇದೆ. ಅಲಸಂದೆ ಸಾರ್ವಜನಿಕ ತಳಿಗೆ ಸಾಮಾನ್ಯ ವರ್ಗಕ್ಕೆ 25 ರೂ. (ಪ್ರಮಾಣಿತ) ಹಾಗೂ 24 ರೂ. (ನಿಜ ಚೀಟಿ) ಇದ್ದು, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ 37.50 ರೂ. (ಪ್ರಮಾಣಿತ) ಹಾಗೂ 35 ರೂ. (ನಿಜ ಚೀಟಿ) ಇದೆ. ಸಜ್ಜೆ ಸಾರ್ವಜನಿಕ ತಳಿಗೆ ಸಾಮಾನ್ಯ ವರ್ಗಕ್ಕೆ 15 ರೂ. (ಪ್ರಮಾಣಿತ) ಹಾಗೂ 25 ರೂ. (ನಿಜ ಚೀಟಿ) ಇದ್ದು, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ 22.50 ರೂ. (ಪ್ರಮಾಣಿತ) ಹಾಗೂ 37.50 ರೂ. (ನಿಜ ಚೀಟಿ) ಇದೆ. ಸೂರ್ಯಕಾಂತಿ ಸಂಕರ ತಳಿಗೆ ಸಾಮಾನ್ಯ ವರ್ಗಕ್ಕೆ 80 ರೂ. (ಪ್ರಮಾಣಿತ-ನಿಜ ಚೀಟಿ) ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ 120 ರೂ. (ಪ್ರಮಾಣಿತ-ನಿಜ ಚೀಟಿ) ಇದೆ. ಮೆಕ್ಕೆಜೋಳ ಸಂಕರ ತಳಿಗೆ ಸಾಮಾನ್ಯ ವರ್ಗಕ್ಕೆ 20 ರೂ. (ಪ್ರಮಾಣಿತ-ನಿಜ ಚೀಟಿ) ಹಾಗೂ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡಕ್ಕೆ 30 ರೂ. (ಪ್ರಮಾಣಿತ-ನಿಜ ಚೀಟಿ) ನಿಗದಿಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಮಣ್ಣು ಆರೋಗ್ಯ ಅಭಿಯಾನ: ಅಭಿಯಾನದಲ್ಲಿ ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಿಸುವ ಜತೆಗೆ ಅದರ ಉಪಯೋಗದ ಬಗ್ಗೆ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಸೂಚಿಸಿದರು.

ಜಿಲ್ಲೆಯ ಯಾದಗಿರಿ ತಾಲೂಕಿನ ಗುರುಮಠಕಲ್, ಮಾದ್ವಾರ, ಸೈದಾಪುರ, ಜೈಗ್ರಾಂ, ಸುರಪುರ ತಾಲೂಕಿನ ತಿಮ್ಮಾಪುರ, ಶಾಂತಪುರ ಕ್ರಾಸ್‌, ಸುರಪುರ, ಕೊಡೇಕಲ್ ಹಾಗೂ ಶಹಾಪುರ ತಾಲೂಕಿನ ಶಹಾಪುರ, ಆಲಬಾವಿ, ದೋರನಹಳ್ಳಿ, ಶಹಾಪುರ, ವಡಗೇರಾ ಸೇರಿದಂತೆ ಒಟ್ಟು 13 ಕಡೆ ಗ್ರಾಮ ಮಟ್ಟದ ಮಣ್ಣು ಪರೀಕ್ಷಾ ಘಟಕ ಸ್ಥಾಪಿಸಲಾಗಿದೆ. ಒಂದು ಮಣ್ಣು ಮಾದರಿ ಪರೀಕ್ಷೆಗೆ 250 ರೂ. ಬೆಲೆ ನಿಗದಿಪಡಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುನೀಲ ಬಿಸ್ವಾಸ್‌, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಬಾಬು, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಆರ್‌. ಗೋಪಾಲ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಮಲ್ಲಿಕಾರ್ಜುನ ಕೆಂಗನಾಳ, ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ನಾಗೂರ, ಕೃಷಿ ತಾಂತ್ರಿಕ ಅಧಿಕಾರಿ ರಾಜಕುಮಾರ ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next