Advertisement

ಕುಷ್ಠ ರೋಗದಿಂದ ಜಿಲ್ಲೆ ಮುಕ್ತಗೊಳಿಸಲು ಕರೆ

12:35 PM Jan 31, 2020 | |

ಯಾದಗಿರಿ: ನಮ್ಮ ಜಿಲ್ಲೆಯನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಪಣ ತೊಟ್ಟು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಹೇಳಿದರು.

Advertisement

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಕುಷ್ಠ ವಿಭಾಗ) ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾದ್ಯಂತ ಜ. 30ರಿಂದ ಫೆಬ್ರವರಿ 13ರ ವರೆಗೆ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನ ಹಮ್ಮಿಕೊಳ್ಳಲಾಗಿದೆ. ಕುಷ್ಠರೋಗಿಗಳಿಗೆ ಸಮಾಜದಲ್ಲಿ ಯಾವುದೇ ರೀತಿಯಾದ ತಾರತಮ್ಯಗಳಾಗದಂತೆ ಎಚ್ಚರ ವಹಿಸಬೇಕು. ಇತರರಿಂದಲೂ ಶೋಷಣೆಗಳಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಜಿಲ್ಲೆಯಲ್ಲಿರುವ ಎಲ್ಲ ಸಂಪನ್ಮೂಲ ಬಳಸಿಕೊಂಡು ಕುಷ್ಠರೋಗ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ತರಲು ನಾವೆಲ್ಲರೂ ಬದ್ಧರಾಗಬೇಕು ಎಂದು ಹೇಳಿದರು.

ಸಾಮಾಜಿಕ ಕಳಂಕ-ಪಿಡುಗುಗಳನ್ನು ಒಗ್ಗಟ್ಟಿನಿಂದ ಹೋಗಲಾಡಿಸಿ ದೌರ್ಜನ್ಯಕ್ಕೊಳಗಾದ ಕುಷ್ಠರೋಗಿಗಳನ್ನು ಮುಖ್ಯವಾಹಿನಿಗೆ ತರಬೇಕಿದೆ. ಕುಷ್ಠರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ ಸಂಪೂರ್ಣವಾಗಿ ಗುಣಪಡಿಸಬಹುದು. ಈ ನಿಟ್ಟಿನಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆಗೊಳಪಡಿಸಿ ಬಾಪೂಜಿ ನಂಬಿಕೆ ಮತ್ತು ಸದುದ್ದೇಶಗಳನ್ನು ಸಾಕಾರಗೊಳಿಸಲು ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಕರೆ ನೀಡಿದರು.

ಕುಷ್ಠರೋಗ ದೇವರ ಶಾಪ ಅಥವಾ ಯಾವುದೋ ಪಾಪದ ಕರ್ಮದ ಫಲವಲ್ಲ. ಈ ಕಾಯಿಲೆ ಮೈಕೊಬ್ಯಾಕ್ಟೀರಿಯಂ ಲೆಪ್ರ ಎಂಬ ರೋಗಾಣುವಿನಿಂದ ಬರುತ್ತದೆ. ಚರ್ಮದ ಮೇಲಿನ ತಿಳಿ, ಬಿಳಿ, ತಾಮ್ರ ಬಣ್ಣದ ಮಚ್ಚೆಗಳಿದ್ದರೆ ಗುಪ್ತವಾಗಿರಿಸದೆ ವೈದ್ಯರಿಗೆ ತೋರಿಸಬೇಕು. ಈ ಮಚ್ಚೆಗಳ ಮೇಲೆ ಸ್ಪರ್ಶ ಜ್ಞಾನ ಇರುವುದಿಲ್ಲ. ರೋಗದ ಔಷಧಿ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ ಎಂದು ಹೇಳಿದರು.

Advertisement

ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮನೋಭಾವದಿಂದ ಕುಷ್ಠರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಎಎನ್‌ಎಂ ಮತ್ತು ಆರೋಗ್ಯ ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಜಿಲ್ಲೆಯಲ್ಲಿ 17 ಪ್ರಕರಣ ಪತ್ತೆ ಹಚ್ಚಿದ್ದಾರೆ. ಈ 17 ಜನರಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡಿ ಗುಣಪಡಿಸಬೇಕು ಎಂದು ವೈದ್ಯರಿಗೆ ಸೂಚಿಸಿದರು.

ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ| ಭಗವಂತ ಅನವಾರ ಮಾತನಾಡಿ, ಕುಷ್ಠರೋಗ ವಂಶಪಾರಂಪರಿಕವಾಗಿ ಹರಡುವುದಿಲ್ಲ. ಬಡವ-ಶ್ರೀಮಂತ ಎಂಬ ಭೇದವಿಲ್ಲ. ಇಂಜಿನಿಯರ್‌ ಗೂ ಈ ರೋಗ ಬಂದ ಉದಾಹರಣೆ ಇದೆ. ಚಿಕಿತ್ಸೆ ಹೊಂದದ ಕುಷ್ಠರೋಗಿ ಸೀನಿದಾಗ ಅಥವಾ ಕೆಮ್ಮಿದಾಗ ಹೊರಬರುವ ಬ್ಯಾಕ್ಟೀರಿಯಾದಿಂದ ಕುಟುಂಬದಲ್ಲಿ ಅಥವಾ ಯಾರಿಗೆ ಬೇಕಾದರೂ ಈ ರೋಗ ಹರಡಬಹುದು. ಕುಷ್ಠರೋಗ ಕಾಣಿಸಿಕೊಳ್ಳಲು 3 ವರ್ಷದಿಂದ 25 ವರ್ಷ ಬೇಕು ಎಂದು ಹೇಳಿದರು.

ಕಾಯಿಲೆ ಹೊಂದಿದವರಿಗೆ ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಶೇ.100ರಷ್ಟು ಗುಣಮುಖವಾಗುತ್ತಾರೆ. ಮೈಕೊಬ್ಯಾಕ್ಟೀರಿಯಂ ಲೆಪ್ರ ರೋಗಾಣು ಹರಡಿದ ವ್ಯಕ್ತಿಯು ಪ್ರಾರಂಭಿಕ ಹಂತ (ಪಿಬಿ-ಪಾಸಿಬೆಸಿಲ್ಲರಿ ಹಂತ)ದಲ್ಲಿ ಚಿಕಿತ್ಸೆ ಪಡೆಯದಿದ್ದರೆ 18 ತಿಂಗಳ ನಂತರ ಅದು ಕುಷ್ಠರೋಗ (ಎಂಬಿ-ಮಲ್ಟಿಬೆಸಿಲ್ಲರಿ)ವಾಗಿ ಪರಿವರ್ತನೆಗೊಳ್ಳುತ್ತದೆ. ತದನಂತರ ವ್ಯಕ್ತಿಯಲ್ಲಿ 15 ದಿನದಿಂದ 1 ತಿಂಗಳಲ್ಲಿ ಅಂಗವಿಕಲತೆ ಉಂಟಾಗಬಹುದು ಎಂದು ಮಾಹಿತಿ ನೀಡಿದರು.

ಆಂದೋಲನದಲ್ಲಿ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಕುಷ್ಠರೋಗದ ಜಾಗೃತಿ ಬಗೆಗಿನ ಜಿಲ್ಲಾಡಳಿತದ ಸಂದೇಶ ಓದಲಾಗುವುದು. ಸುಮಾರು 25 ಪ್ರಶ್ನಾವಳಿಗಳ ಜತೆಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉತ್ತರ ಹೇಳಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಲಿಂಗಪ್ಪ ಪುಟಗಿ ಮಾತನಾಡಿದರು. ಮಹಾತ್ಮ ಗಾಂಧೀಜಿ ಹುತಾತ್ಮ ದಿನಾಚರಣೆ ಅಂಗವಾಗಿ ಮೌನಾಚರಣೆ ಮಾಡಲಾಯಿತು. ಕುಷ್ಠರೋಗದಿಂದ ಗುಣಮುಖ ಹೊಂದಿದ ರಾಯಪ್ಪ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.

ಆಂದೋಲನ ಅಂಗವಾಗಿ ಆಯೋಜಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಕುಷ್ಠ ರೋಗ ವಿರುದ್ಧದ ಮಹಾತ್ಮ ಗಾಂಧೀಜಿ ಕೊಡುಗೆ ಬಗ್ಗೆ ಯರಗೋಳದ ಭೀಮಜ್ಯೋತಿ ಕಲಾತಂಡ ಪ್ರದರ್ಶಿಸಿದ ನಾಟಕ ಗಮನ ಸೆಳೆಯಿತು.

ಹಾಸ್ಯ ಕಲಾವಿದ ಬಸವರಾಜ ಮಹಾಮನಿ, ಡಿವೈಎಸ್‌ಪಿ ಯು.ಶರಣಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎಸ್‌. ಪಾಟೀಲ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ನಾರಾಯಣಪ್ಪ ಹಾಗೂ ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆರು, ಆರೋಗ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಅನಿತಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.

ಹಿರಿಯ ಆರೋಗ್ಯ ಸಹಾಯಕ ಮಹಿಪಾಲರೆಡ್ಡಿ ಮಾಲಿಪಾಟೀಲ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next