ಯಾದಗಿರಿ: ಜಿಲ್ಲಾದ್ಯಂತ ಮಂಗಳವಾರ ಸಾರ್ವಜನಿಕರು ಹೋಳಿ ಹಬ್ಬ ಸಂಭ್ರಮದಿಂದ ಆಚರಿಸಿದರು. ವರ್ಷಕ್ಕೊಮ್ಮೆ ಆಚರಿಸುವ ಹೋಳಿ ಹಬ್ಬದಂದು ಜಿಲ್ಲೆಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.
ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿ ಕೆಲವರು ಕೊರೊನಾ ವೈರಸ್ ಭೀತಿಯಿಂದ ಬಣ್ಣ ಆಡುವುದರಿಂದ ದೂರ ಉಳಿದಿದ್ದರೇ ಇನ್ನೂ ಕೆಲವರು ಅದಾವುದನ್ನು ಲೆಕ್ಕಿಸದೇ ರಂಗಿನ ಓಕಳಿಯಲ್ಲಿ ಮಿಂದೆದ್ದು ಸಂಭ್ರಮಿಸಿದರು.
ಸೋಮವಾರ ರಾತ್ರಿ ವಡಗೇರಾ, ಗುರುಮಠಕಲ್ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಕಾಮ ದಹನ ಜರುಗಿತು. ಮಂಗಳವಾರ ಬೆಳಗ್ಗಿನಿಂದಲೇ ಬಣ್ಣದ ಓಕಳಿ ಪ್ರಾರಂಭವಾಯಿತು. ಕೋಲಿವಾಡದಲ್ಲಿ ಎರಡು ಬಣ್ಣದ ಬಂಡಿಗಳಿಗೆ ಡಿವೈಎಸ್‌ಪಿಯು. ಶರಣಪ್ಪ, ಸಿಪಿಐ ಶರಣಗೌಡ ನ್ಯಾಮನವರ್ ಮತ್ತು ನಗರಸಭೆ ಸದಸ್ಯರಾದ ಪ್ರಭಾವತಿ ಮಾರುತಿ ಕಲಾಲ್, ಚನ್ನಕೇಶವಗೌಡ ಬಾಣತಿಹಾಳ, ಅಂಬಯ್ಯ ಶಾಬಾದಿ ಚಾಲನೆ ನೀಡಿದರು.
ಬಣ್ಣದ ಆಟದಲ್ಲಿ ಎಲ್ಲ ಸಮುದಾಯ ಜನ ಉಲ್ಲಾಸದಿಂದ ಪಾಲ್ಗೊಂಡು ಪರಸ್ಪರ ಬಣ್ಣ ಹಚ್ಚಿ ಸೌಹಾರ್ದಯುತವಾಗಿ ಹಬ್ಬ ಆಚರಿಸಿದರು. ಶಾಂತಿ ಸಮಿತಿ ಸದಸ್ಯರಾದ ಅಯ್ಯಣ್ಣ ಹುಂಡೇಕಾರ, ಡಾ| ಸಿದ್ದಪ್ಪ ಹೊಟ್ಟಿ, ನಾಗೇಂದ್ರ ಜಾಜಿ, ನೂರೊಂದಪ್ಪ ಲೇವಡಿ, ಪ್ರಮುಖರಾದ ಶಂಕರ ಗೋಸಿ, ಮಾರುತಿ ಕಲಾಲ್, ಮಲ್ಲಯ್ಯ ಪೂಜಾರಿ, ಮಹಾದೇವಪ್ಪ ಗಣಪುರ, ಸಿದ್ದಯ್ಯ ಪೂಜಾರಿ, ಮಾಹದೇವಪ್ಪ, ಯಂಕಪ್ಪ ಗೋಸಿ, ವಿಜಯ ಪಾಟೀಲ ಸೇರಿದಂತೆ ಯುವಕರು, ಸಂಘ-ಸಂಸ್ಥೆಗಳ ಪದಾಧಿ ಕಾರಿಗಳು ಬಣ್ಣ ಆಡಿ ಸಂಭ್ರಮಿಸಿದರು.
ನಿತ್ಯದ ಕೆಲಸದ ಒತ್ತಡಗಳಲ್ಲಿರುವ ಅಧಿಕಾರಿಗಳಿಗೆ ಇಲ್ಲಿನ ಪತ್ರಕರ್ತರು ಹೋಳಿ ಸಂಭ್ರಮದಲ್ಲಿ ತೊಡಗುವಂತೆ ಮಾಡಿದರು. ಬೆಳಗ್ಗೆ ಜಿಲ್ಲಾಧಿ ಕಾರಿ, ಜಿ.ಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು.
ಇನ್ನೂ ಅಂಬೇಡ್ಕರ್ ನಗರದಲ್ಲಿ ಯುವತಿಯರು ಪರಸ್ಪರ ಬಣ್ಣ ಎರಚಿ ಸಂತಸ ಪಟ್ಟರು. ಹೋಳಿ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಹಾಗೂ ಗೃಹ ರಕ್ಷಕ ದಳದ ನಿಯೋಜನೆ ಮಾಡಲಾಗಿತ್ತು.