Advertisement

ರೈತರ ಹೆಸರು ಶೀಘ್ರ ನೋಂದಾಯಿಸಿ

11:23 AM Jun 26, 2019 | Naveen |

ಯಾದಗಿರಿ: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರೈತರನ್ನು ಶೀಘ್ರ ನೋಂದಾಯಿಸಬೇಕು. ಈ ಯೋಜನೆಯಿಂದ ಜಿಲ್ಲೆಯ ಯಾವುದೇ ಅರ್ಹ ರೈತರು ವಂಚಿತರಾಗದಂತೆ ಕ್ರಮ ವಹಿಸುವ ಮೂಲಕ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಅನುಷ್ಠಾನ ಕುರಿತು ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಯಡಿ ಪ್ರತಿ ರೈತ ಕುಟುಂಬಕ್ಕೆ ಒಂದು ವರ್ಷಕ್ಕೆ 6 ಸಾವಿರ ರೂ.ಗಳನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆಯಂತೆ ಒಟ್ಟು 3 ಸಮಾನ ಕಂತುಗಳಲ್ಲಿ ನೀಡಲು ಉದ್ದೇಶಿಸಲಾಗಿದೆ. ಎರಡನೇ ಮತ್ತು ಮೂರನೇ ಕಂತುಗಳಿಗೆ ಪದೇ ಪದೇ ರೈತರ ಮಾಹಿತಿ ಸಂಗ್ರಹಿಸುವ ಅಗತ್ಯವಿರುವುದಿಲ್ಲ. ಆಧಾರ್‌ ಸಂಖ್ಯೆ ಜೋಡಣೆ ಮಾಡಿದ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ ಎಂದು ಮಾಹಿತಿ ನೀಡಿದರು.

ಗ್ರಾಮೀಣಾಭಿವೃದ್ಧಿ, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಎರಡು ಸಾವಿರಕ್ಕಿಂತ ಹೆಚ್ಚು ರೈತರು ಇರುವ ಹಳ್ಳಿಗಳಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುವುದು. ಯೋಜನೆಯಡಿ ನೋಂದಾಯಿಸಿಕೊಳ್ಳಲು ಪ್ರತಿ ಹಳ್ಳಿಯಲ್ಲಿ ಡಂಗುರ ಸಾರಬೇಕು. ಗ್ರಾಮದ ಸೂಕ್ತವಾದ ಸ್ಥಳದಲ್ಲಿ ಆಧಾರ್‌ ಕಾರ್ಡ್‌, ಬ್ಯಾಂಕ್‌ ಪಾಸ್‌ಬುಕ್‌ ನಕಲು ಪ್ರತಿ ಪಡೆದು ಸ್ವಯಂಘೋಷ‌ಣಾ ಪತ್ರವನ್ನು ರೈತರ ಸಹಿಯೊಂದಿಗೆ ಭರ್ತಿ ಮಾಡಿ, ಅಪ್‌ಲೋಡ್‌ ಮಾಡಬೇಕು. ಗ್ರಾಪಂವಾರು ಅರ್ಜಿ ಪಡೆಯುವ ಸಿಬ್ಬಂದಿಗೆ ರೈತರ ಪಟ್ಟಿ ನೀಡುತ್ತಿರುವುದರಿಂದ ಪಹಣಿ ಪಡೆಯುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಮಳೆಯಾಗಿದ್ದರಿಂದ ರೈತರು ಬಿತ್ತನೆ ಹಾಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಹಾಗಾಗಿ, ರೈತರ ಸಮಯಕ್ಕೆ ಹೊಂದಿಕೊಂಡು ಅವರಿಗೆ ಈ ಯೋಜನೆ ತಲುಪಿಸಬೇಕು. ರೈತರ ಮನೆ ಮನೆ ಭೇಟಿ ಮೂಲಕವೂ ಸ್ವಯಂಘೋಷ‌ಣೆ ಪತ್ರ ಪಡೆಯಬಹುದು. ಬ್ಯಾಂಕ್‌ ಖಾತೆ ಇಲ್ಲದ ರೈತರ ಖಾತೆಯನ್ನು ತಕ್ಷಣ ತೆರೆಯಲು ಸಂಬಂಧಪಟ್ಟ ಶಾಖೆಗೆ ತಿಳಿಸಬೇಕು. ಅದೇ ರೀತಿ ಆಧಾರ್‌ ಸಂಖ್ಯೆ ಸಮಸ್ಯೆಗಳಿದ್ದಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ಕುಟುಂಬದ ಒಬ್ಬರು ಮಾತ್ರ ಯೋಜನೆಗೆ ಅರ್ಹರು. ರೈತರ ಹೆಸರಿನಲ್ಲಿ ಎಷ್ಟೇ ಜಮೀನು, ಸರ್ವೇ ನಂಬರ್‌ ಇದ್ದರೂ ಒಂದೇ ಅರ್ಜಿ ಪರಿಗಣಿಸಲಾಗುತ್ತದೆ. ನಿವೃತ್ತಿ ಅಥವಾ ಹಾಲಿ ಸೇವೆಯಲ್ಲಿರುವ ಸರ್ಕಾರಿ ನೌಕರರು (ಗ್ರೂಪ್‌ ಡಿ ಹೊರತುಪಡಿಸಿ), ಪ್ರತಿ ಮಾಹೆಯಾನ ಹತ್ತು ಸಾವಿರ ರೂ.ಗಿಂತ ಹೆಚ್ಚಿನ ಮೊತ್ತ ಪಡೆಯುತ್ತಿರುವ ಪಿಂಚಣಿದಾರರು, ಆದಾಯ ತೆರಿಗೆ ಪಾವತಿದಾರರು,

Advertisement

ವೃತ್ತಿಪರರು (ವೈದ್ಯರು, ಅಭಿಯಂತರರು, ವಕೀಲರು ಮತ್ತು ಇತರೆ), ಮಾಜಿ ಮತ್ತು ಹಾಲಿ ಸಾಂವಿಧಾನಿಕ ಹುದ್ದೆ ಹೊಂದಿದವರು ಈ ಯೋಜನೆಗೆ ಅರ್ಹರಲ್ಲ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಸಭೆಯಲ್ಲಿ ಹಾಜರಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಿಗರು, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳ ಸಿಬ್ಬಂದಿಗೆ ಸ್ವಯಂ ಘೋಷ‌ಣಾ ಅರ್ಜಿ ನಮೂನೆ ಭರ್ತಿ ಮಾಡುವ ವಿಧಾನವನ್ನು ಕೃಷಿ ಇಲಾಖೆಯ ಉಪನಿರ್ದೇಶಕಿ ಅನುಸೂಯಾ ಹೂಗಾರ ತಿಳಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್‌, ಸಹಾಯಕ ಆಯುಕ್ತ ಶಂಕರಗೌಡ ಎಸ್‌. ಸೋಮನಾಳ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next