Advertisement

ಬೊಮ್ಮಾಯಿ ಸಂಪುಟದಲ್ಲೂ ಯಾದಗಿರಿ ಕಡೆಗಣನೆ

06:18 PM Aug 05, 2021 | Team Udayavani |

ಯಾದಗಿರಿ: ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಯಾದಗಿರಿಗೆ ಜಿಲ್ಲೆಗೆ ಸಚಿವ ಸ್ಥಾನ ಸಿಗದಿರುವುದು ಗಿರಿ ಜಿಲ್ಲೆ ಜನರಲ್ಲಿ ಬೇಸರ ಮೂಡಿಸಿದೆ. ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳಲ್ಲಿ ಯಾದಗಿರಿ ಮತ್ತು ಸುರಪುರದಲ್ಲಿ ಕಮಲ ಅರಳಿದ್ದು, ಸುರಪುರ ಕ್ಷೇತ್ರದಿಂದ ಮುರು ಬಾರಿ ಆರಿಸಿ ಬಂದ ನರಸಿಂಹ ನಾಯಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.

Advertisement

ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರೆಡ್ಡಿ ಗೌಡ ಮುದ್ನಾಳ ಇಲ್ಲವೇ ನರಸಿಂಹ ನಾಯಕ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಪಕ್ಕಾ ಎನ್ನುವ ಮಾತುಗಳು ಕೇಳಿಬಂದಿತ್ತು. ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಿದ್ದಾಗಲೂ ಅವರ ಆಪ್ತರೇ ಆಗಿದ್ದ ಇಬ್ಬರಿಗೂ ಸಚಿವ ಸ್ಥಾನ ದಕ್ಕಿರಲಿಲ್ಲ. ಇದೀಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನರಸಿಂಹ ನಾಯಕ ಮಂತ್ರಿಯಾಗುವುದು ಖಚಿತವಾಗಿತ್ತು.

ಆದರೆ ಅಂದುಕೊಂಡಂತೆ ನಡೆದಿದ್ದರೆ ಕ್ಷೇತ್ರದ ಜನ ಸಂಭ್ರಮದಲ್ಲಿರುತ್ತಿದ್ದರು. ಲೆಕ್ಕಾಚಾರ ಉಲ್ಟಾ ಆಗಿದ್ದರಿಂದ ಬೆಂಬಲಿಗರು, ಕಾರ್ಯಕರ್ತರು ಆಕ್ರೋಶಗೊಳ್ಳುವಂತೆ ಮಾಡಿದೆ. ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಬೆಂಬಲಿಗರು ಹೈಕಮಾಂಡ್‌ ಮೇಲೆ ಒತ್ತಡ ಹೇರುವ ಕಾರ್ಯವನ್ನು ನಿರಂತರ ಮಾಡಿದ್ದರೂ ಶ್ರಮ ಫಲಿಸದಿರುವುದು ಇಬ್ಬರು ನಾಯಕರ ಬೆಂಗಲಿಗರಲ್ಲಿ ನಿರಾಶೆ ಮೂಡಿಸಿದೆ.

ನರಸಿಂಹ ನಾಯಕರನ್ನು ಮಂತ್ರಿ ಮಾಡಿಯೇ ಕ್ಷೇತ್ರಕ್ಕೆ ಕರೆತರಲು ಬೆಂಗಳೂರಿಗೆ ತೆರಳಿದ್ದ ಬೆಂಬಲಿಗರು ಅಂತಿಮ ಹಂತದಲ್ಲಿ ನಾಯಕ ಹೆಸರು ಇಲ್ಲದಿರುವುದರಿಂದ ಆಕ್ರೋಶಗೊಂಡು ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆದಿದೆ. ಈ ವೇಳೆ ಶಾಸಕ ನಾಯಕ ಮಾತನಾಡಿ, ಮಂತ್ರಿ ಮಾಡದೇ ಇರುವುದಕ್ಕೆ ಒಂದೇ ಒಂದು ಕಾರಣ ಕೊಡಲಿ ಎಂದಿರುವ ಅವರು, ಪಕ್ಷ ತಾಯಿಯಿದ್ದಂತೆ. ಪಕ್ಷ ಸಂಘಟನೆಗಾಗಿ ದುಡಿಯುತ್ತೇನೆ. ಮುಂದೆ ಮಂತ್ರಿಯಾಗುವೆ ಎಂದು ಕಾರ್ಯಕರ್ತರಿಗೆ ಸಮಾಧಾನ ಪಡಿಸಿದ್ದಾರೆ

ರಾಜುಗೌಡರಿಗೆ ಸಚಿವ ಸ್ಥಾನ ನೀಡದಿರುವುದಕ್ಕೆ ಆಕ್ರೋಶ 
ನೂತನ ಸಚಿವ ಸಂಪುಟದಲ್ಲಿ ವಿಶೇಷವಾಗಿ ಪ್ರಭಾವಿ ನಾಯಕರಾಗಿದ್ದ ಸುರಪುರದ ಶಾಸಕ ರಾಜುಗೌಡರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಭರವಸೆಯಿತ್ತು. ಕೊನೆ ಘಳಿಗೆಯಲಿ ರಾಜುಗೌಡರಿಗೆ ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಅವರ ಅಭಿಮಾನಿ ಬಳಗದಲ್ಲಿ ಭಾರಿ ಬೇಸರ ಮೂಡಿಸಿದೆ. ಮೂರು ಬಾರಿ ಶಾಸಕರಾಗಿ ಜವಳಿ ಹಾಗೂ ಸಣ್ಣ ಕೈಗಾರಿಕೆ ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದರು. ಸಾವಿರಾರು ಕೋಟಿ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದರು. ಬಿಎಸ್‌ ವೈ ಸರಕಾರದಲ್ಲಿ ನಗರ ನೀರು ಸರಬರಾಜು ಮತ್ತು
ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ಸಾವಿರಾರು ಕೋಟಿ ಅನುದಾನ ತಂದು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಿದ್ದರು. ಈ ಎಲ್ಲ ಕಾರಣಗಳಿಂದ ಸಚಿವ ಸ್ಥಾನ ಸಿಗುತ್ತದೆ ಎಂಬ ನೀರಿಕ್ಷೆಯಲ್ಲಿ ಅಭಿಮಾನಿಗಳಿದ್ದರು. ಆದರೆ ಅದು ಹುಸಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next