ಯಾದಗಿರಿ: ಕೋವಿಡ್ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಲಾಕ್‌ಡೌನ್ ಆದೇಶವನ್ನು ಮೇ 3ರ ವರೆಗೆ ವಿಸ್ತರಿಸಲಾಗಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೂ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಹಲವು ಕಡೆ 750 ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾ ಕೇಂದ್ರದ ನೂತನ ಜಿಲ್ಲಾಸ್ಪತ್ರೆಯಲ್ಲಿ 100 ಬೆಡ್ ಸಾಮರ್ಥ್ಯದ ಕೋವಿಡ್ ಆಸ್ಪತ್ರೆ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 5 ಜ್ವರ ತಪಾಸಣಾ ಕೇಂದ್ರ ಮತ್ತು 6 ಆರ್ ಆರ್‌ಟಿ ತಂಡಗಳ ಮೂಲಕ ಜ್ವರ ತಪಾಸಣೆ ಮಾಡಲಾಗುತ್ತಿದೆ. ಉಸಿರಾಟದ ತೊಂದರೆ ಮತ್ತು ಜ್ವರ ಇರುವವರ ಮಾದರಿಗಳನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಶಂಕಿತ ವ್ಯಕ್ತಿಗಳ ಮಾದರಿಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆ, ಸುರಪುರ ಮತ್ತು ಭೀಮರಾಯನಗುಡಿಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಅನುಸರಿಸಿ ಸಂಗ್ರಹಿಸಲಾಗುತ್ತಿದೆ. ಅಲ್ಲದೇ ಜ್ವರ ತಪಾಸಣಾ ಕೇಂದ್ರ, ಖಾಸಗಿ ಆಸ್ಪತ್ರೆಗಳಲ್ಲಿ ಮತ್ತು ಆಶಾ ಕಾರ್ಯಕರ್ತೆಯರು ಮನೆಮನೆ ಸರ್ವೇ ಸಮಯದಲ್ಲಿ ಉಸಿರಾಟದ ತೊಂದರೆ ಮತ್ತು ತೀವ್ರತರದ ಜ್ವರ ಇದ್ದವರನ್ನು ಈ ಮೇಲಿನ ಕೇಂದ್ರಗಳಿಗೆ ಕಳುಹಿಸಿ ಮಾದರಿ ಸಂಗ್ರಹ ಮಾಡಲಾಗುತ್ತಿದೆ. ಸಾರ್ವಜನಿಕರು ಕೂಡ ಇಂತಹ ಲಕ್ಷಣಗಳು ಕಂಡುಬಂದಲ್ಲಿ ಸ್ವಯಂಪ್ರೇರಿತವಾಗಿ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ನೀಡುವುದು ಅವರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರುವಂತೆ ಮತ್ತು ಮುಖಗವಸು ಧರಿಸಿ ಕಾರ್ಯನಿರ್ವಹಿಸಬೇಕು. ಆಶಾ ಕಾರ್ಯಕರ್ತೆರಿಗೆ ಸುರಕ್ಷತಾ ಕಿಟ್‌ಗಳನ್ನು ನೀಡಲಾಗಿದೆ. ವೈದ್ಯಕೀಯ ಸೇವೆಗಳು, ಕೃಷಿ ಚಟುವಟಿಕೆ, ಮೀನುಗಾರಿಕೆ, ತರಕಾರಿ ಮತ್ತು ಹಣ್ಣು ಮಾರಾಟಕ್ಕೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಆದರೆ, ಸರ್ಕಾರ ವಿಧಿಸಿರುವ ಷರತ್ತುಗಳನ್ನು ಪಾಲಿಸುವುದು ಕಡ್ಡಾಯ ಎಂದು ತಿಳಿಸಿದರು.
ಜಿಲ್ಲಾದ್ಯಂತ ಬಿಪಿಎಲ್ ಮತ್ತು ಎಎವೈ ಕಾರ್ಡ್ ಹೊಂದಿರುವ ಪಡಿತರ ಫಲಾನುಭಾವಿಗಳಿಗಾಗಿ 2 ತಿಂಗಳುಗಳ ಆಹಾರ ಧಾನ್ಯ ಬಿಡುಗಡೆ ಮಾಡಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ ಶೇ.85.67ರಷ್ಟು ಜನರಿಗೆ ವಿತರಿಸಲಾಗಿದೆ. ಪ್ರತಿದಿನ 10 ಸಾವಿರ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ಗಳನ್ನು ಸ್ಲಂ- ಕಾರ್ಮಿಕರು-ಕಾಲೋನಿಗಳು- ಕ್ಯಾಂಪ್‌ಗ್ಳಲ್ಲಿ ವಾಸಿಸುತ್ತಿರುವ ಬಡಜನರಿಗೆ ವಿತರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಿಂದ ಹಾನಿಯಾದ ಬೆಳೆಗಳ ಸಮೀಕ್ಷೆಯನ್ನು ಜಂಟಿ ತನಿಖಾ ತಂಡದಿಂದ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದ 31 ಜನರನ್ನು ಬಂಧಿಸಲಾಗಿದ್ದು, ಒಟ್ಟು 43 ಎಫ್‌ಐಆರ್ ದಾಖಲಾಗಿದೆ. ಜಿಲ್ಲೆಯ ಗಡಿ ಭಾಗದಲ್ಲಿ ಸ್ಥಾಪಿಸಿರುವ ಒಟ್ಟು 16 ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಅನವಶ್ಯಕವಾಗಿ ಓಡಾಡುತ್ತಿದ್ದವರ ಒಟ್ಟು 1,283 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇಲ್ಲಿಯವರೆಗೆ 7,71,100 ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಸುದ್ದಿಗೋಷ್ಠಿಯಲ್ಲಿದ್ದರು.