Advertisement

ಕ್ರಿಸ್‌ಮಸ್‌ವಿಶ್ವಕ್ಕೆ ಶಾಂತಿ ಸಾಮರಸ್ಯ ನೀಡಲಿ

04:44 PM Dec 22, 2019 | |

ಯಾದಗಿರಿ: ವಿಶ್ವದ ಜನರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಕ್ರಿಸ್‌ಮಸ್‌ ಹಬ್ಬವು ಒಂದಾಗಿದೆ. ಬರುವ ದಿನಗಳಲ್ಲಿ ಹಬ್ಬವು ದೇಶದ ಜನರಲ್ಲಿ ಶಾಂತಿ, ಸಾಮರಸ್ಯ ಮೂಡಿಸಲಿ ಎಂದು ವಿಧಾನ ಪರಿಷತ್‌ ಸದಸ್ಯ ಐವಾನ್‌ ಡಿಸೋಜಾ ಹೇಳಿದರು.

Advertisement

ತಾಲೂಕಿನ ಸೈದಾಪುರ ಪಟ್ಟಣದ ಚರ್ಚ್‌ನಲ್ಲಿ ಕ್ರೈಸ್ತ ಯುವ ಬಳಗ ಹಮ್ಮಿಕೊಂಡಿದ್ದ ಕ್ರಿಸ್‌ಮಸ್‌ ಹಬ್ಬದ ಸಂತಸ ಸಮಾರಂಭದಲ್ಲಿ ಕೇಕ್‌ ಕತ್ತರಿಸಿ ಅವರು ಮಾತನಾಡಿದರು. ಭಾರತ ದೇಶ ವಿಶ್ವದಲ್ಲಿಯೇ ವಿಶಿಷ್ಟವಾಗಿದೆ. ಇಲ್ಲಿ ಎಲ್ಲ ವರ್ಗದ ಜನರು ಶಾಂತಿಯುತವಾಗಿ ಬಾಳುವ ಮೂಲಕ ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ ಪ್ರಸಕ್ತ ದಿನಗಳಲ್ಲಿ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಧರ್ಮದ ಹೆಸರಿನಲ್ಲಿ ಗೊಂದಲ ಮೂಡಿಸಿ ಎಲ್ಲಾ ವರ್ಗದ ಜನರಲ್ಲಿ ಆತಂಕ ಮೂಡಿಸುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಪ್ರತಿಯೊಬ್ಬರಲ್ಲಿ ಮೊದಲು ನಮ್ಮ ದೇಶ ಎಂಬ ಭಾವನೆ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ತಾನು ಕರ್ನಾಟಕದ ಎಲ್ಲಾ ಭಾಗಗಳಿಗೆ ಭೇಟಿ ನೀಡಿ ಅಲ್ಲಿನ ಜನರ ಸ್ಥಿತಿಗತಿ ಅರಿತಿದ್ದೇನೆ, ರಾಜ್ಯದಲ್ಲಿ ಈ ಹಿಂದೆ ಕ್ರೈಸ್ತ ಅಲ್ಪಸಂಖ್ಯಾತರಿಗೆ ಹೇಳಿಕೊಳ್ಳದಂತಹ ಯೋಜನೆಗಳು ಇರಲಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಸದನದಲ್ಲಿ ಜನರ ಸಮಸ್ಯೆಗಳನ್ನು ವಿವರಿಸಿದ ಮೇಲೆ ಅವರು, ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿ 200 ಕೋಟಿ ರೂಪಾಯಿ
ಅನುದಾನ ನೀಡಿದರು. ಇದರ ಪರಿಣಾಮ ಎಲ್ಲ ಕಡೆ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಚರ್ಚ್‌ಗಳ ದುರಸ್ತಿ ಕಾರ್ಯ, ಕಾಮಗಾರಿಗಳು ನಡೆದವು ಎಂದು ವಿವರಿಸಿದರು.

ಜನತೆ ತಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣ ನೀಡಿ ಅವರಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ. ಸರ್ಕಾರ ಕ್ರೈಸ್ತ ಸಮುದಾಯಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
ವಿದ್ಯಾವಂತ ಯುವಕರು ಅವುಗಳ ಲಾಭವನ್ನು ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಬರುವ ದಿನಗಳಲ್ಲಿ ನಿಗಮದಿಂದ ಸಮಾಜದ ವಿದ್ಯಾವಂತ ಯುವಕರು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ನಿರುದ್ಯೋಗ ಯುವಕರಿಗೆ ಸಣ್ಣ ಪುಟ್ಟ ಉದ್ಯೋಗ ಮಾಡಲು ಆರ್ಥಿಕ ಸಹಾಯ ದೊರಕಿಸಿಕೊಡಲು ಉದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ ಎಲ್ಲಿ ಕ್ರೈಸ್ತರಿಗೆ ಅನ್ಯಾಯವಾದರೆ ಅವರ ಪರ ಧ್ವನಿಯಾಗಿ ಸದನದಲ್ಲಿ ಮಾತನಾಡುವೆ ಎಂದರು.

Advertisement

ಇಲ್ಲಿರುವ ಚರ್ಚನ ಅಭಿವೃದ್ಧಿಗೆ ವಿಧಾನ ಪರಿಷತ ಸದಸ್ಯರ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ 2 ಲಕ್ಷ ರೂಪಾಯಿ ಅನುದಾನ ನೀಡುತ್ತೇನೆ ಎಂದು ಭರವಸೆ ನೀಡಿದರು. ಮುಖಂಡರಾದ ಶರಣಗೌಡ ವಣಿಕ್ಯಾಳ, ಜಾನ್‌ ವೆಸ್ಲಿ, ಕನಕ, ವಿಜಯ ಕುಮಾರ, ಫಾದರ್‌ ರಾಜು, ಮಲ್ಲಿಕಾರ್ಜುನರೆಡ್ಡಿ ಹತ್ತಿಕುಣಿ, ಅಭಿಮನ್ಯುಗೌಡ ನಗನೂರ, ಶೇಖಣ್ಣ ಹೋತಪೇಟ, ಸುರೇಶ ಆನಂಪಲ್ಲಿ, ಅರ್ಜುನ್‌ ಸೇರಿದಂತೆ ಸೈದಾಪುರ ಭಾಗದ ನೂರಾರು ಕ್ರೈಸ್ತ ಸಮುದಾಯದ ಜನತೆ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next