Advertisement

ಮಕ್ಕಳ ನೆರವಿಗೆ 1098ಕ್ಕೆ ಕರೆ ಮಾಡಿ: ಡಿಸಿ

06:01 PM Dec 18, 2019 | Naveen |

ಯಾದಗಿರಿ: ಸಂಕಷ್ಟ ಮತ್ತು ತುರ್ತು ಪರಿಸ್ಥಿತಿಯಲ್ಲಿರುವ ಮಕ್ಕಳು ಕಂಡು ಬಂದರೆ ಸಾರ್ವಜನಿಕರು ಮಕ್ಕಳ ಉಚಿತ ಸಹಾಯವಾಣಿ-1098 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಈ ಬಗ್ಗೆ ಜನರಲ್ಲಿ ಹೆಚ್ಚಿನ ತಿಳಿವಳಿಕೆ ಮೂಡಿಸಬೇಕು. ಜತೆಗೆ ಸಹಾಯವಾಣಿಗೆ ಬರುವ ಕರೆಗಳ ಕುರಿತಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್‌ ಸೂಚಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಚೈಲ್ಡ್‌ಲೈನ್‌ ಸಲಹಾ ಮಂಡಳಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳ ಸಹಾಯವಾಣಿಯಲ್ಲಿ 2015ರ ಜುಲೈ ತಿಂಗಳಿಂದ 2019ರ ಅಕ್ಟೋಬರ್‌ ವರೆಗೆ 2986 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 2018ರ ಸೆಪ್ಟೆಂಬರ್‌ ತಿಂಗಳಿನಿಂದ 2019ರ ಅಕ್ಟೋಬರ್‌ ವರೆಗೆ 1070 ಪ್ರಕರಣಗಳು ದಾಖಲಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದರಿಂದ ಸಹಾಯವಾಣಿ-1098 ಬಗ್ಗೆ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿರುವುದು ಕಂಡುಬರುತ್ತದೆ. ಬಂದ ಕರೆಗಳ ಅನುಸಾರ ಸಹಾಯವಾಣಿ ಕೇಂದ್ರದವರು ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡುವ ಜತೆಗೆ ಇಲಾಖೆಗಳಿಂದ ನಂತರದ ದಿನಗಳ ಪ್ರತಿಕ್ರಿಯೆ ಪಡೆಯುವಂತೆ ನಿರ್ದೇಶಿಸಿದರು.

ಶಹಾಪುರ, ಸುರಪುರ ಹಾಗೂ ಕೆಂಭಾವಿ ಬಸ್‌ ನಿಲ್ದಾಣಗಳಲ್ಲಿ ಮಕ್ಕಳು ಭಿಕ್ಷೆ ಬೇಡುತ್ತಿರುವ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಆಯಾ ಬಸ್‌ ನಿಲ್ದಾಣದಲ್ಲಿರುವ ನಿಯಂತ್ರಣಾಧಿಕಾರಿಗಳು ಮಕ್ಕಳ ಸಹಾಯವಾಣಿಗೆ ಕರೆ ಮಾಡಲು ನಿರ್ದೇಶನ ಕೊಡುವಂತೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಸಂತೋಷ ಗೋಗೇರಿ ಅವರಿಗೆ ಸೂಚಿಸಿದರು.

ಮಕ್ಕಳ ಸಹಾಯವಾಣಿ-1098 ಹಾಗೂ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿಗಳ ನಿಷೇಧ ಕುರಿತಂತೆ ಶಾಲೆ, ಅಂಗನವಾಡಿಗಳಲ್ಲಿ ಗೋಡೆಬರಹ ಬರೆಸಬೇಕು. ಜಿಲ್ಲೆಯ ಎಲ್ಲ 1,043 ಶಾಲೆಗಳಲ್ಲಿ ಎಸ್‌ಡಿಎಂಸಿ ಹಾಗೂ ಮಕ್ಕಳ ಹಕ್ಕುಗಳ ಕ್ಲಬ್‌ ರಚನೆ ಆಗಬೇಕು. ಇಲ್ಲವಾದಲ್ಲಿ ಸಿಆರ್‌ಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಮಕ್ಕಳ ಸಹಾಯವಾಣಿ ಕೇಂದ್ರದ ನಿರ್ದೇಶಕ ಫಾದರ್‌ ಜಿ. ಮಾತನಾಡಿ, ಮಕ್ಕಳ ಉಚಿತ ಸಹಾಯವಾಣಿ-1098 ಮೂಲಕ ಬಾಲ್ಯವಿವಾಹ, ಬಾಲ ಕಾರ್ಮಿಕ, ಶಾಲೆ ಬಿಟ್ಟ, ಶಾಲೆಯಿಂದ ಹೊರಗುಳಿದ, ಕಾಣೆಯಾದ, ವೈದ್ಯಕೀಯ ಸಹಾಯ, ಅನಾಥ, ಭಿಕ್ಷೆ ಬೇಡುವ ಮಕ್ಕಳು, ಆಶ್ರಮದ ವ್ಯವಸ್ಥೆಗಾಗಿ ಸೇರಿದಂತೆ ಮುಂತಾದ ಪ್ರಕರಣಗಳು ದಾಖಲಾಗಿರುವ ಮಾಹಿತಿ ನೀಡಿದರು.

Advertisement

ಮಕ್ಕಳ ಸ್ವಚ್ಛತೆ ಕುರಿತಂತೆ ಭಿತ್ತಿಪತ್ರ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಮಲ್ಲನಗೌಡ ಎಸ್‌.ಪಾಟೀಲ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ| ಹಣಮಂತ್ರಾಯ ಕರಡಿ, ಪ್ರಭಾರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಪ್ಪ ಪಾಟೀಲ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುವೀರಸಿಂಗ್‌ ಠಾಕೂರ್‌, ಮಕ್ಕಳ ಸಹಾಯವಾಣಿ ಸಂಯೋಜಕ ಶರಬಯ್ಯ ಎಸ್‌. ಕಲಾಲ ಹಾಗೂ ಸಲಹಾ ಮಂಡಳಿ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next