ಯಾದಗಿರಿ: ಜಿಲ್ಲೆಯಲ್ಲಿ ಯಾವುದೇ ಹಕ್ಕಿ ಜ್ವರದ ಪ್ರಕರಣಗಳು ಕಂಡು ಬಂದಿಲ್ಲ. ಸಾರ್ವಜನಿಕರು ಯಾವುದೇ ಭಯ ಹಾಗೂ ಆತಂಕಕ್ಕೆ ಒಳಪಡದೇ ಮುಂಜಾಗ್ರತೆ ವಹಿಸುವಂತೆ ಜಿಲ್ಲಾ ಧಿಕಾರಿ ಡಾ| ರಾಗಪ್ರಿಯ ಆರ್ ತಿಳಿಸಿದರು. ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಹಕ್ಕಿ ಜ್ವರ ನಿಯಂತ್ರಣ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಹಕ್ಕಿ ಜ್ವರದಿಂದ ಯಾವುದೇ ಪಕ್ಷಿಗಳು ಮರಣ ಹೊಂದಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಕ್ಕಿ ಜ್ವರದ ಲಕ್ಷಣಗಳು ಬಗ್ಗೆ ರೈತರಿಗೆ ತಿಳಿವಳಿಕೆ ನೀಡುವಂತೆ ಅವರು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ 2 ಕೋಳಿ ಪಾರ್ಮ್ಗಳಿದ್ದು, ಪ್ರತಿಯೊಂದರಲ್ಲೂ 10 ಸಾವಿರ ದಂತೆ ಕೋಳಿಗಳನ್ನು ಸಾಕಲಾಗಿದೆ. ಹಕ್ಕಿ ಜ್ವರದ ಬಗ್ಗೆ ಮುಂಜಾಗ್ರತೆ ವಹಿಸಿ ಜಿಲ್ಲೆಯ ಬೋನಾಳ ಪಕ್ಷಿಧಾಮ ಹಾಗೂ ಕೋಳಿ ಪಾರಂಗಳಿಂದ ಮಾದರಿಗಳನ್ನು ಪರೀಕ್ಷಿಸಲು ಲ್ಯಾಬ್ ಗೆ ಕಳುಹಿಸಲಾಗಿದೆ ಎಂದು ಪಶು ಇಲಾಖೆ ಅಧಿ ಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಮುಂಜಾಗೃತಾ ಕ್ರಮಗಳನ್ನು ಕ್ರಮಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು. ಕೋಳಿ ಮಾಂಸ ಹಾಗೂ ತತ್ತಿಯನ್ನು ಚೆನ್ನಾಗಿ ಬೇಯಿಸಿ ಸೇವಿಸಿದ್ದಲ್ಲಿ ಮನುಷ್ಯರಿಗೆ ಯಾವುದೇ ರೀತಿಯ ಆರೋಗ್ಯಕ್ಕೆ ತೊಂದರೆಯಾಗುವುದಿಲ್ಲ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ಪಶುಪಾಲನಾ ಇಲಾಖೆ, ಸಾರಿಗೆ ಇಲಾಖೆ
ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.