Advertisement

ಹಲವರಿಗೆ ಸೌಲಭ್ಯ-ಒಬ್ಬರಿಗೆ ದೌರ್ಭಾಗ್ಯ

12:24 PM Feb 13, 2020 | Naveen |

ಯಾದಗಿರಿ: ಜಿಲ್ಲೆಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿಗೆ ನಿಗಮದಲ್ಲಿ ಪದೇ ಪದೇ ಒಂದೇ ಕುಟುಂಬದ ವ್ಯಕ್ತಿಗಳಿಗೆ ಸೌಕರ್ಯ ದೊರೆಯುತ್ತಿವೆ ಹೊರತು ಅರ್ಹರಿರುವ ವ್ಯಕ್ತಿಗಳು ಅರ್ಜಿ ಸಲ್ಲಿಸಿದರೂ ಫಲಾನುಭವಿಗಳ ಆಯ್ಕೆಯಲ್ಲಿ ಗೋಲ್‌ಮಾಲ್‌ ನಡೆಯುತ್ತಿದೆ ಎನ್ನುವ ಆರೋಪ ಬಲವಾಗಿ ಕೇಳಿ ಬರುತ್ತಿದೆ.

Advertisement

ವಿಕಲಚೇತನರಾಗಿರುವ ಅಶೋಕ ಮೋನಪ್ಪ ಐಕೂರು ಎನ್ನುವವರು 2016ರಿಂದ 2019-20ರ ವರೆಗೆ ಅರ್ಜಿ ಸಲ್ಲಿಸಿದರೂ ಯಾವುದೇ ಸೌಕರ್ಯ ಸಿಕ್ಕಿಲ್ಲ. ಅವರಂತೆ ಅದೆಷ್ಟೋ ಅರ್ಹರಿಗೆ ಯೋಜನೆ ಲಾಭ ಸಿಗದೇ ಉಳ್ಳವರ ಪಾಲಾಗುತ್ತಿದೆ. ನಮಗಾಗಿರುವ ಅನ್ಯಾಯ ಯಾರು ಕೇಳುವವರಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಿಗಮದ ಫಲಾನುಭವಿಗಳ ಆಯ್ಕೆಯಲ್ಲಿನ ಅನ್ಯಾಯ ಸರಿಪಡಿಸುವುದು ಮತ್ತು ಆಯ್ಕೆಯಲ್ಲಿ ಅನ್ಯಾಯ ಮಾಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿ ಸೌಕರ್ಯ ವಂಚಿತ ಅಶೋಕ ಐಕೂರು ಜಿಲ್ಲಾಡಳಿತ ಭವನದ ಎದುರು ಅನಿರ್ದಿಷ್ಟ ಧರಣಿ ಆರಂಭಿಸಿದ್ದಾರೆ.

ನಿಗಮದಿಂದ ಸಿಗುವ ನೇರ ಸಾಲ, ಸಂಪ್ರದಾಯಿಕ ಯೋಜನೆಗಳಿಗೆ ಪ್ರೋತ್ಸಾವ ನೀಡುವ ಸಾಲ ಸೌಕರ್ಯಗಳ ಫಲಾನುಭವಿಗಳ ಆಯ್ಕೆಯಲ್ಲಿ ಅವ್ಯವಹಾರದ ವಾಸನೆ ಎದ್ದಿದೆ. 2014ರಿಂದ 19-20ನೇ ಸಾಲಿನ ವರೆಗೆ ಸಾಲ ಸೌಕರ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದ ಹಲವರನ್ನು ಬಿಟ್ಟು ಅಧಿಕಾರಿ ಮತ್ತು ಹೊರಗುತ್ತಿಗೆ ಸಿಬ್ಬಂದಿ ಒಂದೇ ಕುಟುಂಬದ 3-4 ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ದಾಖಲೆಗಳಿಂದ ಬಯಲಾಗಿದೆ.

ದಾಖಲೆಗಳ ಪ್ರಕಾರ ಒಂದೇ ಕುಟುಂಬದ 23 ಜನ ಫಲಾನುಭವಿಗಳು ವಿವಿಧ ಆರ್ಥಿಕ ವರ್ಷಗಳಲ್ಲಿ ಪದೇ ಪದೇ ಸಾಲ ಪಡೆದಿದ್ದಾರೆ. ವಯೋಮಿತಿ ಮೀರಿದ ಒಬ್ಬರು ಹಾಗೂ ದಾಖಲೆಯಿಲ್ಲದ ಇಬ್ಬರು ವ್ಯಕ್ತಿಗಳು ಸಾಲ ಪಡೆದಿರುವುದು ಬಯಲಾಗಿದೆ. ನಿಗಮದ ಸೌಕರ್ಯ ಪಡೆಯಲು ಪ್ರತಿವರ್ಷ ಅಂದಾಜಿನ ಪ್ರಕಾರ 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುತ್ತವೆ. ಆದರೆ ಅದರಲ್ಲಿ ಕೇವಲ 200ರಿಂದ 250 ಜನರಿಗೆ ಸೌಕರ್ಯ ಸಿಗುತ್ತಿದೆ. ಅದರಲ್ಲಿಯೂ ಅನ್ಯಾಯವಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಆಯ್ಕೆ ಸಮಿತಿ ಅಧ್ಯಕ್ಷರು ಎಂದು ನಮೂದಿಸಲಾಗಿದೆ.

Advertisement

ಆದರೇ ಆಯ್ಕೆ ಪಟ್ಟಿಯಲ್ಲಿ ಅಧ್ಯಕ್ಷರ ಸಹಿಯೇ ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ನಿಗಮದ ಅಧಿಕಾರಿಗಳು ಫಲಾನುಭವಿಗಳ ಆಯ್ಕೆಯಲ್ಲಿ ಅನ್ಯಾಯ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಮೇಲ್ಮನವಿ ಪ್ರಾಧಿಕಾರ ಕಲಬುರಗಿಯ ನಿಗಮದ ಕಚೇರಿಯಾಗಿರುವುದರಿಂದ ಅಲ್ಲಿಗೆ ಮೇಲ್ಮನವಿ ಸಲ್ಲಿಸಿ ಎಂದು ಹಿಂಬರಹ ನೀಡಲಾಗಿದ್ದು ಜಿಲ್ಲೆಯ ನಿಗಮದ ಬಗ್ಗೆ ದೂರು ಬಂದಾಗ ಅಧಿಕಾರಿಗಳು ಕನಿಷ್ಟ ವಿಚಾರಿಸಲೂ ಮುಂದಾಗಿಲ್ಲ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.

ಸರ್ಕಾರ ಅರ್ಹ ವ್ಯಕ್ತಿಗಳಿಗೆ ಸೌಕರ್ಯ ದೊರೆತು ಅದರಿಂದ ಜೀವನ ನಡೆಸಲು ಸಹಾಯವಾಗಲಿ ಎಂದು ಹಲವು ಯೋಜನೆ ಅನುಷ್ಠಾನಗೊಳಿಸುತ್ತಿದೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅರ್ಹರಿಗೆ ಸಿಗಬೇಕಾದ ಯೋಜನೆಗಳ ಲಾಭ ಸಿಗದಂತಾಗಿದೆ.

ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಲ್ಲಿ ಒಂದೇ ಕುಟುಂಬದ ಹಲವು ವ್ಯಕ್ತಿಗಳು ಹಲವು ಬಾರಿ ಸಾಲ ಪಡೆದಿರುವುದು ಮಾಹಿತಿ ಹಕ್ಕಿನಡಿ ಕೇಳಿರುವ ದಾಖಲೆಗಳಿಂದ ತಿಳಿದಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ನಾನು 2016ರಿಂದ 2019-20ರ ವರೆಗೆ ಸಂಪ್ರದಾಯಿಕ ಯೋಜನೆ, ನೇರ ಸಾಲಕ್ಕೆ ಅರ್ಜಿ ಸಲ್ಲಿಸುತ್ತ ಬಂದಿದ್ದೇನೆ. ಮೇಲಾಗಿ ವಿಕಲಚೇತನನಾಗಿದ್ದೇನೆ. ಸರ್ಕಾರಿ ಜಾರಿಗೊಳಿಸಿರುವ ಯೋಜನೆ ಅರ್ಹರಿಗೆ ನೀಡದೇ ಅಧಿಕಾರಿಗಳು ಫಲಾನುಭವಿಗಳ ಆಯ್ಕೆಯಲ್ಲಿ ಅನ್ಯಾಯ ಮಾಡಿದ್ದಾರೆ. ಸೂಕ್ತ ನ್ಯಾಯ ಸಿಗುವವರೆ ಧರಣಿ ಹಿಂಪಡೆಯಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮವಹಿಸಬೇಕು. ಅನ್ಯಾಯವಾಗಿರುವ ಇನ್ನಷ್ಟು ಜನರು ಧರಣಿಯಲ್ಲಿ ಭಾಗವಹಿಸಲಿದ್ದಾರೆ.
ಅಶೋಕ ಐಕೂರ,
ಧರಣಿ ನಿರತ ವಿಕಲಚೇತನ ವ್ಯಕ್ತಿ

„ಅನೀಲ ಬಸೂದೆ

Advertisement

Udayavani is now on Telegram. Click here to join our channel and stay updated with the latest news.

Next