Advertisement

ಮನೆ ಸುತ್ತಲೂ ಸ್ವಚ್ಛತೆ ಕಾಪಾಡಿ

02:52 PM Jul 01, 2019 | Naveen |

ಯಾದಗಿರಿ: ಮಲೇರಿಯಾ, ಚಿಕೂನ್‌ ಗುನ್ಯಾ, ಡೆಂಘೀ, ಮೆದುಳು ಜ್ವರ ಹಾಗೂ ಆನೆಕಾಲು ರೋಗಗಳು ಸೊಳ್ಳೆ ಕಡಿತದಿಂದ ಹರಡುತ್ತವೆ. ಮನೆ ಸುತ್ತಮುತ್ತ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಮೂಲಕ ಈ ರೋಗಗಳಿಂದ ದೂರವಿರಬಹುದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಸೂರ್ಯಪ್ರಕಾಶ ಎಂ. ಕಂದಕೂರ ಸಲಹೆ ನೀಡಿದರು.

Advertisement

ನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿಂತ ನೀರಿನ ತಾಣಗಳು ಸೊಳ್ಳೆ ಉತ್ಪತ್ತಿ ಕೇಂದ್ರವಾಗಿರುತ್ತವೆ. ಆದ್ದರಿಂದ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಗ್ರಾಮಗಳಲ್ಲಿನ ತಗ್ಗುಗಳನ್ನು ಮಣ್ಣಿನಿಂದ ಮುಚ್ಚಿಸಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮಲೇರಿಯಾ ಒಂದು ಪ್ರಾಥಮಿಕ ಕಾಯಿಲೆಯಾಗಿದ್ದು, ಅನಾಫಿಲೀಸ್‌ ಎಂಬ ಹೆಣ್ಣು ಸೊಳ್ಳೆಯು ಒಬ್ಬರಿಂದ ಒಬ್ಬರಿಗೆ ಈ ರೋಗ ಹರಡುತ್ತದೆ. ಜ್ವರ, ಚಳಿ, ತಲೆನೋವು, ವಾಂತಿ, ಮೈ-ಕೈ ನೋವು ರೋಗದ ಲಕ್ಷಣಗಳಾಗಿವೆ. ಯಾವುದೇ ಜ್ವರ ಕಂಡು ಬಂದಲ್ಲಿ ಸಾರ್ವಜನಿಕರು ಹತ್ತಿರದ ಆರೋಗ್ಯ ಸಂಸ್ಥೆಗೆ ಹೋಗಿ ಮಲೇರಿಯಾ ಪರೀಕ್ಷೆಯನ್ನು ಮಾಡಿಸಿ, ತ್ವರಿತವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮಲೇರಿಯಾ ರೋಗದ ಚಿಕಿತ್ಸೆಗೆ ಅಗತ್ಯವಾದ ಔಷಧಗಳು ಸರ್ಕಾರಿ ಆಸ್ಪತ್ರೆ, ಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪ ಕೇಂದ್ರಗಳಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಆನೆಕಾಲು ರೋಗಕ್ಕೆ ಕಾರಣವಾಗುವ ವೈರಸ್‌ ಮನುಷ್ಯನ ರಕ್ತದಲ್ಲಿ ಮಾತ್ರ ಜೀವಿಸುತ್ತದೆ. ಸರಕಾರದ ವತಿಯಿಂದ ಪ್ರತಿ ವರ್ಷ ನೀಡಲಾಗುವ ಡಿಇಸಿ ಮಾತ್ರೆಗಳನ್ನು ಐದು ವರ್ಷಗಳ ವರೆಗೆ ತೆಗೆದುಕೊಂಡರೆ ಈ ರೋಗ ಬರದಂತೆ ಎಚ್ಚರಿಕೆ ವಹಿಸಬಹುದು. ಸೊಳ್ಳೆಯ ಪರದೆ, ಮುಲಾಮು, ಲಿಕ್ವಿಡೆಟರ್‌, ಬೇವಿನ ಮರದ ಸೊಪ್ಪಿನ ಹೊಗೆ ಮಾಡುವುದರಿಂದ ಸೊಳ್ಳೆ ಕಡಿತದಿಂದ ತಪ್ಪಿಸಿಕೊಂಡು ರೋಗಗಳಿಂದ ದೂರ ಇರಬಹುದು. ವೃದ್ಧರು, ಗರ್ಭಿಣಿಯರು, ಬಾಣಂತಿಯರು, ಸಣ್ಣ ಮಕ್ಕಳು ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ ತಪ್ಪದೇ ಬಳಸಬೇಕು ಎಂದು ಹೇಳಿದರು.

Advertisement

ನೀರು ಸಂಗ್ರಹಿಸುವ ತೊಟ್ಟಿ, ಬ್ಯಾರಲ್, ಪಾತ್ರೆಗಳನ್ನು ವಾರಕ್ಕೆ ಎರಡು ಬಾರಿ ಸ್ವಚ್ಛವಾಗಿ ತಿಕ್ಕಿ ತೊಳೆದು ಬಿಸಿಲಿನಲ್ಲಿ ಒಣಗಿಸಿದ ನಂತರ ನೀರನ್ನು ತುಂಬಬೇಕು. ಅದೇ ರೀತಿ ಏರ್‌ಕೂಲರ್‌ನಲ್ಲಿ ಸಂಗ್ರಹವಾದ ನೀರು ಮತ್ತು ಹೂವಿನ ಕುಂಡಲಿಗಳಲ್ಲಿ ಸಂಗ್ರಹಿಸಿದ ನೀರನ್ನು ಕೂಡ ಬದಲಾಯಿಸಬೇಕು ಎಂದು ಸಲಹೆ ನೀಡಿದರು.

ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ನೆಹರೂ ರಾಠೊಡ್‌, ತಾಲೂಕು ಆರೋಗ್ಯ ಅಧಿಕಾರಿ ಡಾ| ಹಣಮಂತರೆಡ್ಡಿ, ಹಿರಿಯ ಆರೋಗ್ಯ ಸಹಾಯಕರಾದ ಪರಮರೆಡ್ಡಿ ಕಂದಕೂರ, ಶರಣಯ್ಯ, ಸಮಾಲೋಚಕ ಬಸವರಾಜ ಕಾಂತಾ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next