ಯಾದಗಿರಿ: ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಜನರ ನಿದ್ದೆಗೆಡಿಸಿದ್ದ ಮಂಗಗಳು ಇದೀಗ ಪೌಷ್ಟಿಕ ಆಹಾರ ಸಿಗುವ ಅಂಗನವಾಡಿ ಕೇಂದ್ರಗಳಲ್ಲಿ ತನ್ನ ದರ್ಬಾರ್ ಮುಂದುವರೆಸಿವೆ.
ಕೆಲ ತಿಂಗಳ ಹಿಂದೆ ಮಂಗಗಳು ಮೆನೆಗಳಿಗೆ ನುಗ್ಗಿ ಅಡುಗೆ ಖಾಲಿ ಮಾಡುತ್ತಿದ್ದವು. ಆದರೆ ಇದೀಗ ನೇರ ಅಂಗನವಾಡಿ ಕೇಂದ್ರಗಳಿಗೆ ನುಗ್ಗಿ ಆಹಾರವನ್ನು ತಿನ್ನುತ್ತಿವೆ. ಇಲ್ಲಿನ ಅಂಗನವಾಡಿ ಕೇಂದ್ರ 1ರ ಮೇಲ್ವಿಚಾರಕಿ ಮತ್ತು ಸಹಾಯಕಿ ನಿತ್ಯ ಮಂಗಗಳು ಒಳನುಸುಳದಂತೆ ಕಾಯುವುದೇ ಇವರ ಕೆಲಸವಾಗಿದೆ. ಮಂಗಗಳ ಹೆದರಿಕೆಯಿಂದ ಪಾಲಕರು ಪುಟ್ಟ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಲು ಹಿಂಜರಿಯುತ್ತಿದ್ದಾರೆ.
ಸುಮಾರು 6 ತಿಂಗಳಿಂದ ಬೀಡುಬಿಟ್ಟಿರುವ ಮಂಗಗಳು ಗ್ರಾಮದಲ್ಲಿನ ಕಂಡ ಕಂಡವರ ಕೈಯಲ್ಲಿರುವ ತಿನುಸುಗಳನ್ನು ದೋಚಿಕೊಂಡು ಹೋಗುತ್ತಿರುವುದು ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ. 300ರಷ್ಟು ಮಂಗಗಳು ಕಾಡಿನಿಂದ ನಾಡಿಗೆ ವಲಸೆ ಬಂದಿದ್ದು, ಗ್ರಾಮಸ್ಥರ ನಿದ್ದೆಗೆಡಿಸಿವೆ.
ಗ್ರಾಮದಲ್ಲಿ ಮಕ್ಕಳು ಏನಾದರೂ ತಿನ್ನುವ ಆಹಾರ ಕೈಯಲ್ಲಿ ಹಿಡಿದುಕೊಂಡು ಹೋದರೆ ಸಾಕು ಬೆನ್ನತ್ತಿ ಕೈಯಿಂದ ಕಸಿದು ಪರಾರಿಯಾಗುವ ಮಂಕಿಗಳ ಕಾಟಕ್ಕೆ ಇಲ್ಲಿನ ಜನ ಬೇಸತ್ತಿದ್ದಾರೆ. ಕೈಯಲ್ಲಿನ ವಸ್ತುವನ್ನು ಬಿಟ್ಟುಕೊಡದಿದ್ದರೆ ಹಲ್ಲೆಗೂ ಮುಂದಾಗುತ್ತಿವೆ ಎಂದು ಜನರು ಭಯದಲ್ಲಿಯೇ ಕಾಲಕಳೆಯುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.
ಬೆಂಡೆಬೆಂಬಳಿಯಲ್ಲಿ ನೂರಾರು ಮಂಗಗಳು ಬೀಡು ಬಿಟ್ಟಿರುವುದು ಸಾರ್ವನಿಕರಲ್ಲಿ ಆತಂಕ ಮನೆ ಮಾಡಿದೆ. ಇದೀಗ ಅಂಗನವಾಡಿ ಕೇಂದ್ರಕ್ಕೆ ನುಗ್ಗಿ ಮಕ್ಕಳ ಆಟಿಕೆ ಸಾಮಗ್ರಿಗಳ ಮೇಲೆ ಕುಣಿದು ಆಹಾರವನ್ನು ತಿನ್ನಲು ಮುಂದಾಗಿವೆ.
•
ಸೂಗಣ್ಣ ಸೂಗರೆಡ್ಡಿ, ನಿವೃತ್ತ ಶಿಕ್ಷಕ
ಗ್ರಾಮದಲ್ಲಿ ಮಂಗಗಳ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಗೋಳು ಯಾರಿಗೆ ಹೇಳಿಕೊಳ್ಳಬೇಕು ಎನ್ನುವುದು ತೋಚುತ್ತಿಲ್ಲ. ಗ್ರಾಪಂ, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮಂಗಗಳಿಂದ ಮುಕ್ತಿ ಕೊಡಿಸಬೇಕು.
•
ನಿಂಗಣ್ಣ ಜಡಿ, ರೈತ ಮುಖಂಡ