ಯಾದಗಿರಿ: ತಾಲೂಕಿನ ಯರಗೋಳ ಗ್ರಾಮದಲ್ಲಿ ಗ್ರಾಮೀಣ ಪೊಲೀಸ್ ಠಾಣೆ, ಬಾಲ ಕಾರ್ಮಿಕ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಹಾಗೂ ಇತರೆ ಇಲಾಖೆ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿ ಶಾಲೆ ಬಿಟ್ಟ ಮಕ್ಕಳ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಪತ್ತೆಯಾದ 6ರಿಂದ 18 ವರ್ಷದೊಳಗಿನ 20 ಮಕ್ಕಳ ವರದಿ ಪಡೆದು ಶಾಲೆಗೆ ದಾಖಲಿಸಿದರು.
ಅನಿರೀಕ್ಷಿತ ದಾಳಿ ನಡೆಸಿದ ಅಧಿಕಾರಿಗಳು 1 ಟ್ರ್ಯಾಕ್ಟರ್, 2 ಟಂಟಂ ವಾಹನಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಜನರನ್ನು ಕರೆದುಕೊಂಡು ಹೋಗುತ್ತಿರುವುದು ಕಂಡು ವಿಚಾರಣೆಗೆ ಒಳಪಡಿಸಿದರು. ಅಲ್ಲದೇ ವಾಹನ ಚಾಲಕರು ಮತ್ತು ಮಕ್ಕಳ ಮಾಹಿತಿ ಪಡೆದರು. ಪೊಲೀಸ್ ಇಲಾಖೆ ಸಿಬ್ಬಂದಿ ವಾಹನ ಜಪ್ತಿ ಮಾಡಿ ದಂಡ ವಿಧಿಸುವುದರ ಜತೆಗೆ 1988ರ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಸಂಬಂಧಿಸಿದ ವಾಹನ ಚಾಲಕರ ಚಾಲನೆ ಪರವಾನಿಗೆ ರದ್ದುಪಡಿಸಲು ಕ್ರಮ ಕೈಗೊಂಡಿದ್ದಾರೆ.
ಜಿಲ್ಲೆ ಮತ್ತು ತಾಲೂಕಿನಾದ್ಯಂತ 1986ರ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಕಲಂ 17ರಡಿ ನಿರೀಕ್ಷಕರಾಗಿ ನೇಮಕಗೊಂಡಿರುವ ಮತ್ತು 1961ರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ ಕಲಂ 26 (2)ರಡಿ ಹೆಚ್ಚುವರಿ ನಿರೀಕ್ಷಕರಾಗಿ ನೇಮಕವಾಗಿರುವ ಅಧಿಕಾರಿಗಳೊಂದಿಗೆ ತನಿಖಾ ತಂಡ ರಚಿಸಿಕೊಂಡು ದಾಳಿ ನಡೆಸಲಾಗುತ್ತಿದೆ. ತಂಡಗಳು ಅಂಗಡಿ, ಹೋಟೆಲ್, ರೆಸ್ಟೋರೆಂಟ್, ಗ್ಯಾರೇಜ್, ಬಾರ್‌ಅಂಗಡಿ ಹಾಗೂ ಇನ್ನಿತರ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಅಪಾಯಕಾರಿ ಮತ್ತು ಅಪಾಯಕಾರಿ ಅಲ್ಲದ ಬಾಲಕಾರ್ಮಿಕ ಮಕ್ಕಳು ಮತ್ತು ಶಾಲೆಬಿಟ್ಟ ಮಕ್ಕಳನ್ನು ಪತ್ತೆ ಹಚ್ಚಿ, 1986ರ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಕಲಂ 17 ರಡಿ ನಿರೀಕ್ಷಕರಾಗಿ ನೇಮಕವಾಗಿರುವ ಅಧಿಕಾರಿಗಳಿಂದ ಇನ್ನಿತರೆ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಬಾಲಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಿ ಅಂಗಡಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಶಾಲೆ ಬಿಟ್ಟ ಮಕ್ಕಳನ್ನು ನೇರವಾಗಿ ಕಡ್ಡಾಯ ಶಿಕ್ಷಣ ಕಾಯ್ದೆ-2009ರ ಅನ್ವಯ ಶಿಕ್ಷಣ ಇಲಾಖೆ ವತಿಯಿಂದ ಸರ್ವಶಿಕ್ಷಣ ಅಭಿಯಾನಡಿ ಸಂಬಂಧಿಸಿದ ಶಾಲಾ ಮುಖ್ಯಶಿಕ್ಷಕ ಮೂಲಕ ಹತ್ತಿರದ ಸರ್ಕಾರಿ, ಖಾಸಗಿ ಶಾಲೆಗಳಿಗೆ ದಾಖಲಿಸುವ ಕಾರ್ಯದಲ್ಲಿ ತೊಡಗಿವೆ.
ಪತ್ತೆಯಾದ ಬಾಲಕಾರ್ಮಿಕರಿಗೆ ವಸತಿ ಅವಶ್ಯಕತೆ ಇದ್ದಲ್ಲಿ ಅಂತಹ ಮಕ್ಕಳನ್ನು ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆಯಿಂದ ಹಾಗೂ ಸರಕಾರದಿಂದ ನಡೆಯುವ ವಸತಿ ಶಾಲೆಗಳಲ್ಲಿ ಶಿಕ್ಷಣದ ಜತೆ ವಸತಿ ಕಲ್ಪಿಸಲಾಗುತ್ತದೆ.
ದಾಳಿಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಾದ ಶಿವಶಂಕರ ಬಿ.
ತಳವಾರ, ರಘುವೀರಸಿಂಗ್ ಠಾಕೂರ್, ವಿಠ್ಠಲ, ಗುರುನಾಥ ರೆಡ್ಡಿ, ನಾಗಪ್ಪ, ದೇವಪ್ಪ, ಚಂದ್ರಶೇಖರ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.