ನವದೆಹಲಿ: ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಕ್ಟೋಬರ್ 11 ಮತ್ತು 12ರಂದು ಭಾರತ ಪ್ರವಾಸ ಕೈಗೊಳ್ಳಲಿದ್ದು, ಚೆನ್ನೈನಲ್ಲಿ ನಡೆಯಲಿರುವ 2ನೇ ಔಪಚಾರಿಕ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಡನೆ ಚರ್ಚೆ ನಡೆಸಲಿದ್ದಾರೆ ಎಂದು ವರದಿ ತಿಳಿಸಿದೆ.
ಚೆನ್ನೈ ಸಮೀಪದ ಮಾಮಲ್ಲಾಪುರಂನಲ್ಲಿ ನಡೆಯಲಿರುವ ಔಪಚಾರಿಕ ಸಭೆಯಲ್ಲಿ ಅಕ್ಟೋಬರ್ 11, 12ರಂದು ಕ್ಸಿ ಪಾಲ್ಗೊಳ್ಳಲಿದ್ದಾರೆ. ಅಕ್ಟೋಬರ್ 13ರಂದು ಕ್ಸಿ ನೇಪಾಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುಯಾಯಿಂಗ್ ಬುಧವಾರ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಸಿ ನಡುವೆ ನಡೆಯುತ್ತಿರುವ ಎರಡನೇ ಔಪಚಾರಿಕ ಶೃಂಗ ಸಭೆ ಇದಾಗಿದೆ. ಕಳೆದ ವರ್ಷ ಚೀನಾದ ವುಹಾನ್ ನಲ್ಲಿ ಉಭಯ ನಾಯಕರ ನಡುವೆ ಮೊದಲ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ 2017ರಲ್ಲಿ ಡೋಕ್ಲಾಮ್ ವಿಚಾರವಾಗಿ ಉಭಯ ದೇಶಗಳ ಸೈನಿಕರ ನಡುವೆ ನಡೆದಿದ್ದ ಸಂಘರ್ಷ ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಚರ್ಚಿಸುವ ಮೂಲಕ ಡೋಕ್ಲಾಮ್ ಸಂಘರ್ಷಕ್ಕೆ ತೆರೆ ಬೀಳುವಂತಾಗಿತ್ತು.
ಕ್ಸಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಚೀನಾ ಬುಧವಾರ ಘೋಷಿಸಿದ ಬೆನ್ನಲ್ಲೇ ಕಾಕತಾಳೀಯ ಎಂಬಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಆರ್ಮಿ ಮುಖ್ಯಸ್ಥ ಜನರಲ್ ಖ್ವಾಮರ್ ಜಾವೇದ್ ಬಾಜ್ವಾ ಕೂಡಾ ಮಂಗಳವಾರ ಚೀನಾಕ್ಕೆ ಭೇಟಿ ನೀಡಿದ್ದರು.
ಖಾನ್ ಮಂಗಳವಾರ ಚೀನಾಕ್ಕೆ ಭೇಟಿ ನೀಡಿದ್ದು ಚೀನಾ ಪ್ರಧಾನಿ ಲೀ ಜತೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಬುಧವಾರ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಜತೆ ಚರ್ಚೆ ನಡೆಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.