ಬಾಗಲಕೋಟೆ: ದೇಶದ ಉಪ ರಾಷ್ಟ್ರಪತಿಗಳ ನಿರ್ದೇಶನ, ರಾಜ್ಯದ ಜಲ ಸಂಪನ್ಮೂಲ ಸಚಿವರಿಂದ ಬರೋಬ್ಬರಿ ಏಳು ಮನವಿ ಪತ್ರಗಳಿಗೂ ಮಹಾರಾಷ್ಟ್ರ ಸರ್ಕಾರ, ಉತ್ತರ ಕರ್ನಾಟಕದ ಬರ ಬವಣೆಗೆ ಸ್ಪಂದಿಸಿಲ್ಲ. ಹೀಗಾಗಿ ಮಹಾರಾಷ್ಟ್ರದ ಮೊಂಡುತನಕ್ಕೆ ಕೃಷ್ಣೆಯ ನೆಲದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಹೌದು. ರಾಜ್ಯದ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ, ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 2 ಟಿಎಂಸಿ ಅಡಿ ನೀರು ಬಿಡುವಂತೆ ಕಳೆದ ಮೂರು ತಿಂಗಳಲ್ಲಿ ಒಟ್ಟು ಏಳು ಪತ್ರಗಳನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಬರೆದಿದ್ದಾರೆ.
ಅಲ್ಲದೇ ದೇಶದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೂ, ಈಚೆಗೆ ಬೆಳಗಾವಿಗೆ ಬಂದಾಗ, ರಾಜ್ಯಸಭೆ ಸದಸ್ಯ ಪ್ರಭಾಕರ ಕೋರೆ ನೇತೃತ್ವದ ಬಿಜೆಪಿ ಜನಪ್ರತಿನಿಧಿಗಳ ಮನವಿ ಮೇರೆಗೆ ಮಹಾರಾಷ್ಟ್ರ ಸಿಎಂಗೆ ದೂರವಾಣಿಯಲ್ಲಿ ಮಾತನಾಡಿ, ಕೃಷ್ಣಾ ನದಿಗೆ ನೀರು ಬಿಡಲು ಕೋರಿದ್ದರು. ಆದರೂ, ಮಹಾರಾಷ್ಟ್ರ ಮಾತ್ರ ಸ್ಪಂದಿಸಿಲ್ಲ. ಮತ್ತೂಂದೆಡೆ ಮಳೆಗಾಲ ಆರಂಭಗೊಂಡರೂ, ನದಿ, ಹಳ್ಳ-ಕೊಳ್ಳಕ್ಕೆ ನೀರು ಬರುವಂತಹ ಮಳೆಯಾಗಿಲ್ಲ. ಇದರಿಂದ ಕೃಷ್ಣೆಯ ನೆಲದಲ್ಲಿ ನೀರಿನ ಸಮಸ್ಯೆ ಇನ್ನೂ ಮುಂದುವರಿದಿದೆ.
ಒಪ್ಪಂದ ಪತ್ರ ಕೊಟ್ಟಿಲ್ಲ: ಜಲ ಸಂಪನ್ಮೂಲ ಸಚಿವ ಶಿವಕುಮಾರ ಮತ್ತು ಉಪ ರಾಷ್ಟ್ರಪತಿಗಳ ನಿರ್ದೇಶನಕ್ಕೆ ಮಹಾರಾಷ್ಟ್ರ ಸಿಎಂ ನೀರು ಬಿಡುವುದಾಗಿ ಹೇಳಿದರೆ ಹೊರತು, ವಾಸ್ತವದಲ್ಲಿ ಕೊಯ್ನಾ ಜಲಾಶಯ ನೀರನ್ನು ಕೃಷ್ಣೆಗೆ ಬಿಡಲು ಆದೇಶ ಮಾಡಲಿಲ್ಲ. ಅದಕ್ಕೂ ಮುಂಚೆ, ನಾವು ಕೊಯ್ನಾದಿಂದ ನೀರು ಕೃಷ್ಣಾ ನದಿಗೆ ನೀರು ಬಿಡುತ್ತೇವೆ, ನೀವು ಆಲಮಟ್ಟಿ ಜಲಾಶಯದಿಂದ ಇಂಡಿ ಕಾಲುವೆ ಮೂಲಕ ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಜತ್ತ ಭಾಗಕ್ಕೆ ನೀರು ಕೊಡಬೇಕೆಂಬ ಷರತ್ತು ಹಾಕಿತ್ತು. ಈ ಷರತ್ತಿಗೆ ಕರ್ನಾಟಕ ಒಪ್ಪಿಕೊಂಡರೂ ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳು, ಮಹಾರಾಷ್ಟ್ರದೊಂದಿಗೆ ಒಪ್ಪಂದ ಮಾಡಿಕೊಂಡು, ಒಡಂಬಡಿಕೆ ಪತ್ರ ವಿನಿಮಯ ಮಾಡಿಕೊಳ್ಳಲಿಲ್ಲ. ಹೀಗಾಗಿ ಮಹಾರಾಷ್ಟ್ರ ನೀರು ಬಿಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಮೂರು ತಿಂಗಳಿಂದ ಕೃಷ್ಣಾ ನದಿ ಬತ್ತಿ ಹೋಗಿದ್ದರಿಂದ ಜಮಖಂಡಿ, ಬೀಳಗಿ, ಅಥಣಿ ಸೇರಿದಂತೆ ಬಾಗಲಕೋಟೆ ಜಿಲ್ಲೆಯಲ್ಲಿ ಸುಮಾರು 470 ಕೋಟಿ ಮೊತ್ತದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಕೃಷ್ಣಾ ನದಿಗೆ ನೀರು ಬಿಟ್ಟಿದ್ದರೆ, ನದಿ ಅಕ್ಕ-ಪಕ್ಕದ ಕೊಳವೆ ಬಾವಿ, ತೆರೆದ ಬಾವಿಗಳ ಅಂತರ್ಜಲ ಹೆಚ್ಚಿ ನೀರು ದೊರೆಯುತ್ತಿತ್ತು. ಇದನ್ನು ನಂಬಿಯೇ ರೈತರು, ಬೇಸಿಗೆ ಅವಧಿಯ ಕಬ್ಬು ಸಹಿತ ವಿವಿಧ ಬೆಳೆ ಬೆಳೆಯುತ್ತಿದ್ದರು. ಈ ಬಾರಿ ನದಿ ಸಂಪೂರ್ಣ ಬತ್ತಿದ್ದು, ಇಷ್ಟೊಂದು ಪ್ರಮಾಣದ ಬೆಳೆ ಹಾನಿಯಾಗಿದೆ ಎನ್ನಲಾಗಿದೆ.
•ವಿಶೇಷ ವರದಿ