ಬೆಂಗಳೂರು: ಸಾಹಿತಿಗಳು, ಕವಿಗಳು, ಬರಹಗಾರರು ಯಾವತ್ತೂ ಪ್ರಶಸ್ತಿಗಳ ಹಿಂದೆ ಹೋಗದೆ ಸಾಹಿತ್ಯ ಕೃಷಿಯತ್ತ ಗಮನ ನೆಟ್ಟಿರಬೇಕು ಎಂದು ನಿತ್ಯೋತ್ಸವ ಕವಿ ನಾಡೋಜ ಕೆ.ಎಸ್. ನಿಸಾರ್ ಅಹ್ಮದ್ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಸಾಧಕರೊಡನೆ ಸಂವಾದ’ ಕಾರ್ಯಕ್ರಮದಲ್ಲಿ ಸಾಧಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಾನು ಮಾಡಿದ ಸಾಹಿತ್ಯ ಸೇವೆಗೆ ಇಂದು ಅನೇಕ ಪ್ರಶಸ್ತಿಗಳು ನನ್ನನ್ನು ಹುಡುಕಿಕೊಂಡು ಬಂದಿವೆ. ಒಬ್ಬ ಸಾಹಿತಿಗೆ ಪ್ರಶಸ್ತಿಗಳು ಅಥವಾ ಬಿರುದುಗಳು ಬರವಣಿಗೆಗೆ ಸಾಣೆ ಇದ್ದಂತೆ. ಅದರಿಂದ ಬರಹಗಾರನಲ್ಲಿ ಧೈರ್ಯ, ಆತ್ಮಸ್ಥೈರ್ಯ ಬರುತ್ತದೆ. ಆದರೆ, ಪ್ರಶಸ್ತಿ-ಬಿರುದುಗಳೇ ಮುಖ್ಯವಲ್ಲ. ನನ್ನನ್ನು ಒಳಗೊಂಡಂತೆ ಯಾವೊಬ್ಬ ಸಾಹಿತಿ, ಬರಹಗಾರ, ಕವಿ ಯಾವತ್ತೂ ಪ್ರಶಸ್ತಿಗಳ ಬೆನ್ನುಹತ್ತಿ ಹೋಗಬಾರದು ಎಂದು ನಿಸಾರ್ ಅಹ್ಮದ್ ಕಿವಿಮಾತು ಹೇಳಿದರು.
ಎಪ್ಪತ್ತರ ದಶಕದಲ್ಲಿ ನಡೆಯುತ್ತಿದ್ದ ಕವಿಗೋಷ್ಠಿಗಳು ಇಂದು ನಡೆಯುತ್ತಿಲ್ಲ. ಅಲ್ಲಲ್ಲಿ ಗೋಷ್ಠಿಗಳು ನಡೆದರೂ ಅದಕ್ಕೆ ಮನ್ನಣೆ ಸಿಗುತ್ತಿಲ್ಲ. ಇದಕ್ಕೆ ಬಹುಮಟ್ಟಿಗೆ ಟಿವಿ ಮಾಧ್ಯಮ ಕಾರಣ ಆಗಿರಬೇಕು ಅನ್ನೋದು ನನ್ನ ಭಾವನೆ. ಆದ್ದರಿಂದ ಕವಿಗೋಷ್ಠಿಗಳನ್ನು ಹೆಚ್ಚೆಚ್ಚು ಆಯೋಜಿಸುವ ಮೂಲಕ ಯುವ ಹಾಗೂ ಉದಯೋನ್ಮುಖ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವ ಅವಶ್ಯಕತೆ ಇದೆ ಎಂದು ಹೇಳಿದರು.
“ಜಲಪಾತ’ ಮೊದಲ ಪದ್ಯ: “ನಾನು ಹೈಸ್ಕೂಲ್‌ನಲ್ಲಿದ್ದಾಗ ನಾಲ್ಕೈದು ಮಂದಿ ಸಾಹಿತ್ಯಾಸಕ್ತ ಗೆಳೆಯರು ಸೇರಿ “ವನಸುಮ’ ಹೆಸರಲ್ಲಿ ಹಸ್ತ ಪತ್ರಿಕೆ ಹೊರತರಲು ತೀರ್ಮಾನಿಸಿದೆವು. ಆಗ ಜಲಪಾತ ನೋಡದೇ ಅದರ ಕುರಿತು “ಜಲಪಾತ’ ಎಂಬ ಪದ್ಯ ಬರೆದೆ. ಅದೇ ನನ್ನ ಮೊದಲ ಪದ್ಯ ಆಗಿತ್ತು.
ಕವಿ ಮೈಸೂರು ಅನಂತಸ್ವಾಮಿ ಅವರು ಆಕಾಶವಾಣಿಗೆ ಒಂದು ಹಾಡು ಹಾಡಬೇಕಿತ್ತು. ಅದಕ್ಕೆ ಒಂದು ಕವಿತೆ ಬರೆದುಕೊಡುವಂತೆ ನನ್ನಲ್ಲಿ ಕೇಳಿದರು. ಆಗ, ಅವರಿಗಾಗಿ ಬರೆದದ್ದೇ ನಿತ್ಯೋತ್ಸವ,’ ಎಂದು ನಿಸಾರ್ ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಡಾ. ಮನು ಬಳಿಗಾರ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಮತ್ತಿತರರು ಇದ್ದರು.