ಪೆಟ್ರೋಲು ಮತ್ತು ಡೀಸೆಲ್‌ನಷ್ಟು ವಿದೇಶಿ ಅವಲಂಬನೆ ಅಡುಗೆ ಅನಿಲಕ್ಕಿಲ್ಲ. ದೇಶದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಎಲ್‌ಪಿಜಿ ಉತ್ಪಾದನೆಯಾಗುತ್ತಿದೆ.
ಅಡುಗೆ ಅನಿಲ ಬೆಲೆಯನ್ನು 7 ರೂಪಾಯಿ ಹೆಚ್ಚಿಸುವ ಮೂಲಕ ಕೇಂದ್ರ ಸರಕಾರ ಈ ತುಟ್ಟಿಯ ದಿನಗಳಲ್ಲಿ ಜನಸಾಮಾನ್ಯರಿಗೆ ಇನ್ನೊಂದು ಬರೆ ಹಾಕಿದೆ. ಮುಂಬರುವ ಮಾರ್ಚ್ ತಿಂಗಳಿಗಾಗುವಾಗ ಅಂದರೆ, ಪ್ರಸಕ್ತ ಹಣಕಾಸು ವರ್ಷ ಮುಗಿಯುವುದರೊಳಗೆ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದುಪಡಿಸಲು ಸರಕಾರ ನಿರ್ಧರಿಸಿದ್ದು, ಇದಕ್ಕಾಗಿ ಪ್ರತಿ ತಿಂಗಳು 4 ರೂಪಾಯಿಯಂತೆ ಬೆಲೆ ಹೆಚ್ಚಿಸಲು ಕಳೆದ ಜುಲೈಯಲ್ಲಿ ತೀರ್ಮಾನಿಸಿತ್ತು. ಅಂದರೆ ಕಳೆದ ವರ್ಷದ ಜುಲೈಯಿಂದೀಚೆಗೆ ಒಂದು ವರ್ಷದಲ್ಲಿ 68 ರೂ. ಏರಿಕೆ ಮಾಡಿದಂತಾಗಿದೆ. ಹಾಗೆಂದು ಪ್ರತಿ ತಿಂಗಳು ಗ್ಯಾಸ್ ಬೆಲೆ ಏರಿಸುವುದು ಮೋದಿ ಸರಕಾರದ ನಿರ್ಧಾರವೇನೂ ಅಲ್ಲ. ಹಿಂದಿನ ಯುಪಿಎ ಸರಕಾರ 2 ರೂ. ಹೆಚ್ಚಿಸುವ ಪದ್ಧತಿ ಪ್ರಾರಂಭಿಸಿತ್ತು. 2 ರೂಪಾಯಿಯಂತೆ ಹೆಚ್ಚಿಸುತ್ತಾ ಹೋದರೆ ಸಬ್ಸಿಡಿ ರದ್ದಾಗಲು ದೀರ್ಘ ಸಮಯ ಹಿಡಿಯುವುದರಿಂದ ಈಗಿನ ಸರಕಾರ 4 ರೂ. ಹೆಚ್ಚಿಸಲು ತೀರ್ಮಾನ ಕೈಗೊಂಡಿದೆ. ಕಳೆದ ಆ.1ರಂದು ಮಾಡಿದ ಬೆಲೆ ಪರಿಷ್ಕರಣೆಯಲ್ಲಿ ತೈಲ ಕಂಪೆನಿಗಳು 2.31 ರೂ. ಮಾತ್ರ ಹೆಚ್ಚಿಸಿದ್ದ ಕಾರಣ ಬಾಕಿಯುಳಿದಿರುವ ಮೊತ್ತವನ್ನು ಸಮತೋಲನಗೊಳಿಸುವ ಉದ್ದೇಶದಿಂದ ಈಗ ಒಂದೇಟಿಗೆ 7 ರೂ. ಹೆಚ್ಚಿಸಿದೆ.
ಪೆಟ್ರೋಲು ಮತ್ತು ಡೀಸೆಲ್ ಸಬ್ಸಿಡಿಯನ್ನು ರದ್ದುಗೊಳಿಸಿದ ಬಳಿಕ ಇದೀಗ ಎಲ್‌ಪಿಜಿ ಸಬ್ಸಿಡಿಯನ್ನೂ ರದ್ದುಗೊಳಿಸಿ ಮೂರೂ ಇಂಧನಗಳ ಬೆಲೆಯನ್ನು ಮಾರುಕಟ್ಟೆ ಬೆಲೆಗೆ ಸರಿದೂಗಿಸುವ ತಂತ್ರವಿದು. ಪೆಟ್ರೋಲು ಮತ್ತು ಡೀಸಿಲ್ ಬೆಲೆಯನ್ನು ನಿತ್ಯ ಪರಿಷ್ಕರಿಸುವ ಪದ್ಧತಿ ಜಾರಿಗೆ ಬಂದ ಅನಂತರ ಚಿಕ್ಕ ಪ್ರಮಾಣದಲ್ಲಿ ನಿತ್ಯ ಬೆಲೆ ಏರುತ್ತಾ ಇದೆ. ಜಿಎಸ್‌ಟಿ ಜಾರಿಗೆ ಬಂದ ಅನಂತರ ಸುಮಾರು 3 ರೂಪಾಯಿ ಕಡಿಮೆಯಾದದ್ದು ಹೊರತುಪಡಿಸಿದರೆ ಅನಂತರ ಡೀಸೆಲ್, ಪೆಟ್ರೋಲು ಬೆಲೆ ಏರುತ್ತಾ ಹೋಗಿದೆ. ಪೆಟ್ರೋಲು ಬೆಲೆಯಲ್ಲಿ ಸುಮಾರು 6 ರೂಪಾಯಿ ಏರಿಕೆಯಾಗಿದ್ದು, ಪೈಸೆಗಳ ಲೆಕ್ಕದಲ್ಲಿ ಹೆಚ್ಚುತ್ತಾ ಹೋಗಿರುವುದರಿಂದ ದೊಡ್ಡ ಸುದ್ದಿಯಾಗಿಲ್ಲ. ಇಂಧನಗಳ ಬೆಲೆಗೆ ಸಂಬಂಧಿಸಿದಂತೆ ಯಾವ ಸರಕಾರ ಬಂದರೂ ಜನಸಾಮಾನ್ಯರ ಗೋಳು ತಪ್ಪುವುದಿಲ್ಲ. ಭಾರತ ಅತ್ಯಧಿಕ ಪಳೆಯುಳಿಕೆ ಇಂಧನ ಬಳಸುವ ದೇಶಗಳ ಸಾಲಿನಲ್ಲಿದೆ. ಶೇ. 90ರಷ್ಟು ಆಮದು ಇಂಧನ ಅವಲಂಬಿಸಿರುವುದರಿಂದ ದುಬಾರಿ ಬೆಲೆಯಿರುವುದು ಸಹಜ. ಸಾಮಾನ್ಯವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಕಚ್ಚಾತೈಲ ಬೆಲೆ ವ್ಯತ್ಯಯವನ್ನು ಹೊಂದಿಕೊಂಡು ದೇಶದಲ್ಲಿ ಇಂಧನ ಬೆಲೆ ನಿರ್ಧರಿಸಲ್ಪಡುತ್ತದೆ. ಆದರೆ ಕಚ್ಚಾತೈಲ ಬೆಲೆ ದಾಖಲೆ ಕುಸಿತ ಕಂಡರೂ ಸರಕಾರ ಇಂಧನ ಬೆಲೆಯನ್ನು ಕಡಿಮೆ ಮಾಡದೆ ಇರುವುದು ಸರಿಯಲ್ಲ. ಪೆಟ್ರೋಲು ಮತ್ತು ಡೀಸೆಲ್‌ನಷ್ಟು ವಿದೇಶಿ ಅವಲಂಬನೆ ಅಡುಗೆ ಅನಿಲಕ್ಕಿಲ್ಲ.
ದೇಶದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಎಲ್‌ಪಿಜಿ ಉತ್ಪಾದನೆಯಾಗುತ್ತಿದೆ. ಭೂಗರ್ಭದಲ್ಲಿನ ದಾಸ್ತಾನನ್ನು ಪೂರ್ಣ ಉಪಯೋಗಿಸಲು ಸಾಧ್ಯವಾದರೆ ಎಲ್‌ಪಿಜಿ-ಎಲ್‌ಎನ್‌ಜಿ ಆಮದು ಅಗತ್ಯವೇ ಇಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ತಂತ್ರಜ್ಞಾನ, ಬಂಡವಾಳ ಕೊರತೆಯಿಂದ ಈ ಕ್ಷೇತ್ರದಲ್ಲಿ ಭಾರತ ಹಿಂದುಳಿದಿದೆ. ದೇಶದಲ್ಲಿ ಅಂದಾಜು 18.12 ಕೋಟಿ ಸಬ್ಸಿಡಿ ಗ್ಯಾಸ್ ಬಳಸುವವರಿದ್ದಾರೆ. ಈ ಪೈಕಿ 2.5 ಕೋಟಿ ಮಂದಿ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯ ಮಹಿಳೆಯರು. ಬೆಲೆ ಏರಿಕೆಯ ನೇರ ಬರೆ ಬೀಳುವುದು ಇವರಿಗೆ. ಗ್ಯಾಸ್ ಮೇಲಿನ ಸಬ್ಸಿಡಿ ರದ್ದುಪಡಿಸಿದರೆ ಶ್ರೀಮಂತರೂ ಬಡವರೂ ಒಂದೇ ಬೆಲೆ ತೆರಬೇಕಾಗುತ್ತದೆ. ಇದು ನಿಜವಾಗಿಯೂ ಬಡವರಿಗೆ ಮಾಡುವ ಅನ್ಯಾಯ. ಒಂದೆಡೆ ಸರಕಾರ ಸೀಮೆಎಣ್ಣೆ, ಸೌದೆ ಮುಂತಾದ ಮಾಲಿನ್ಯಕಾರಕಗಳ ಬಳಕೆ ಕಡಿಮೆಗೊಳಿಸಲು ತುಲನಾತ್ಮಕವಾಗಿ ಸ್ವತ್ಛ ಇಂಧನವಾದ ಅಡುಗೆ ಅನಿಲದ ಉಪಯೋಗವನ್ನು ಪ್ರೋತ್ಸಾಹಿಸುತ್ತದೆ.
ಇನ್ನೊಂದೆಡೆ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದುಪಡಿಸಲು ಮುಂದಾಗಿದೆ. ಪ್ರಸ್ತುತ ಸಬ್ಸಿಡಿ ಎಂದು ಸಿಗುತ್ತಿರುವುದು 86 ರೂಪಾಯಿ ಮಾತ್ರ. ಇದೂ ರದ್ದಾದರೆ ಎಲ್ಲರೂ ಸುಮಾರು 525 ರೂಪಾಯಿ ಕೊಟ್ಟು ಗ್ಯಾಸ್ ಖರೀದಿಸಬೇಕಾಗುತ್ತದೆ. ಎಲ್‌ಪಿಜಿ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸುವ ಬದಲು ಸಬ್ಸಿಡಿ ಪಡೆದುಕೊಳ್ಳಲು ಆದಾಯ ಮಿತಿ ಹೇರಿದ್ದರೆ ಒಳ್ಳೆಯದಿತ್ತು. ಮೋದಿ ಮನವಿಗೆ ಓಗೊಟ್ಟು ಸುಮಾರು ಒಂದು ಕೋಟಿ ಶ್ರೀಮಂತ ಬಳಕೆದಾರರು ಗ್ಯಾಸ್ ಸಬ್ಸಿಡಿ ತ್ಯಜಿಸಿದ್ದಾರೆ. ಇದೇ ಹಾದಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಮೂಲಕ ಬಡವರ ಬವಣೆಯನ್ನು ತಪ್ಪಿಸಬಹುದಿತ್ತು.