Advertisement

ಸತತ ಮೂರನೇ ವರ್ಷವೂ ಭೀಕರ ಬರದ ಬರೆ!

11:51 AM Jul 31, 2017 | |

ಶಿರಾಳಕೊಪ್ಪ: ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲಕ್ಕೆ ತುತ್ತಾಗಿದ್ದ ಶಿಕಾರಿಪುರ ತಾಲೂಕಿನಲ್ಲಿ ಈ ವರ್ಷ ವಾಡಿಕೆಗಿಂತ ಶೇ.23ರಷ್ಟು ಅತಿ ಕಡಿಮೆ ಮಳೆ ಆಗಿದೆ. ಪ್ರಸಕ್ತ ವರ್ಷ ಮಳೆಗಾಲದಲ್ಲಿಯೇ ಭೀಕರ ಬರದ ಛಾಯೆ ಕಂಡು ಬರುತ್ತಿದ್ದು ಇದರಿಂದ ತಾಲೂಕಿನ ಜನತೆ 
ಚಿತಾಕ್ರಾಂತರಾಗಿದ್ದಾರೆ.

Advertisement

ತಾಲೂಕಿನ ಐತಿಹಾಸಿಕ ಕೆರೆಗಳಲ್ಲಿ ಗುಬ್ಬಿಗೂ ಕುಡಿಯಲು ನೀರಿಲ್ಲದೇ ಕೆರೆ‌ಯಂಗಳದಲ್ಲಿ ದನಕರುಗಳು ಹಾಗು ಕುರಿಗಳು ಹಸಿರನ್ನು ಮೇಯುತ್ತಿವೆ. ಮಳೆ ಗಾಲದಲ್ಲಿಯಾದರೂ ಕೊಳವೆ ಬಾಯಿಂದ ನೀರು ಪಡೆದು ನಾಟಿ ಮಾಡಬಹುದೆಂದು ಲೆಕ್ಕ ಕಾಕುತ್ತಿದ್ದ ರೈತರು ಕೊಳವೆಬಾವಿಗಳಲ್ಲಿ ನೀರು ಬತ್ತಿದ್ದರಿಂದ ದಿಕ್ಕು ಕಾಣದಂತಾಗಿದ್ದಾರೆ. ಜುಲೈ ತಿಂಗಳಲ್ಲಿ ಭತ್ತದ ನಾಟಿಕಾರ್ಯ ಮುಗಿಯಬೇಕಾಗಿತ್ತು. ಆದರೆ ತಾಲೂಕಿನಲ್ಲಿ 20ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಭೂಮಿಯಲ್ಲಿ ಜುಲೈ ಕೊನೆಗೆ ಕೃಷಿ ಇಲಾಖೆಯ ಮಾಹಿತಿಯಂತೆ ಕೇವಲ 25 ಹೆಕ್ಟೇರ್‌ನಲ್ಲಿ ಮಾತ್ರ ನಾಟಿ ಮಾಡಲಾಗಿದೆ. ಕಳೆದ ವರ್ಷ ಕೃಷಿ ಇಲಾಖೆಯ ಮಾಹಿತಿಯಂತೆ ವಾಡಿಕೆಗಿಂತ ಶೇ.8ರಷ್ಟು ಕಡಿಮೆ ಮಳೆ ಆಗಿತ್ತು, ಆದರೆ ಪ್ರಸಕ್ತ ವರ್ಷ ಜುಲೈ ತಿಂಗಳ ಅಂತ್ಯಕ್ಕೆ ಶೇ.23ರಷ್ಟು ಕಡಿಮೆ ಆಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹಲವಾರು ವರ್ಷಗಳಿಂದ ಮಳೆಪ್ರಮಾಣ ಕಡಿಮೆ ಆಗುತ್ತಿರುವದನ್ನು ಗಮನಿಸಿ ರೈತರು ತಾಲೂಕಿನಲ್ಲಿ ಭತ್ತ ಬಿತ್ತುವ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದು, ಈ ವರ್ಷ ಅದು ಇನ್ನೂ ಹೆಚ್ಚಾಗಿದೆ ಎಂಬ ಮಾತು ಕೇಳಿ ಬರುತ್ತಿವೆ.  ತಾಲೂಕಿನ ಉಡಗಣಿ- ತಾಳಗುಂದ ಹೋಬಳಿಯಲ್ಲಿ ವಿಶೇಷವಾಗಿ ಕೊಳವೆಬಾವಿ ನಂಬಿ ಭತ್ತ ಬೆಳೆಯುತ್ತಿದ್ದ ರೈತರು ಸಸಿ ಅಗೆ ಹಾಕಿ ಕೊಳವೆಬಾವಿಯಲ್ಲಿ ನೀರು ಬತ್ತಿ ದಿಕ್ಕು ಕಾಣದಂತಾಗಿದ್ದಾರೆ. ಸುಡುಬಿಸಿಲು ಪ್ರತಿದಿನ ಹೆಚ್ಚಾಗುತ್ತಿದ್ದು, ಮೆಕ್ಕೆಜೋಳ ಬಿತ್ತೋಣವೆಂದರೆ ಹದವಿಲ್ಲದಂತಾಗಿದೆ.

ಮೆಕ್ಕೆಜೋಳ ಬಿತ್ತಿದ ರೈತರಲ್ಲೂ ಆತಂಕ: ಪ್ರಾರಂಭದಲ್ಲಿ ಸಾಕಷ್ಟು ಮಳೆಬೀಳಬಹುದೆಂದು ಲೆಕ್ಕಾಚಾರದಲ್ಲಿದ್ದ ರೈತರು ಮಳೆ ಕೈಕೊಟ್ಟರೆ ಹೇಗೆ ಎಂದು ಭತ್ತದ ಗದ್ದೆಯಲ್ಲಿಯೂ ಮೆಕ್ಕೆಜೋಳ ಬಿತ್ತಿದ್ದರು. ಈಗ ಚೆನ್ನಾಗಿ ಬೆಳೆದಿರುವ ಜೋಳಕ್ಕೆ ಕುಂಟಿ ಹೊಡೆದು ಕಳೆತೆಗೆದು ರಸಗೊಬ್ಬರ ಹಾಕಿರುವ ರೈತರು ಪ್ರತಿದಿನ ಬೇಸಿಗೆ ಬಿಸಿಲಿನಂತೆ ಬೀಳುತ್ತಿರುವ ಬಿಸಿಲಿನಿಂದ ಉತ್ತಮವಾಗಿ ಬೆಳೆದಿರುವ ಜೋಳ ಎಲ್ಲಿ ಸುಟ್ಟುಹೋಗುತ್ತವೆಯೋ ಎಂಬ ಆತಂಕವನ್ನೂ ಎದುರಿಸುತ್ತಿದ್ದಾರೆ. 

ಐತಿಹಾಸಿಕ ಕೆರೆಯಲ್ಲಿ ಗುಬ್ಬಿ ಕುಡಿಯಲು ನೀರಿಲ್ಲ:
ಶಿಕಾರಿಪುರ ತಾಲೂಕಿನ ತಾಳಗುಂದ ಹೋಬಳಿಯ ಇತಿಹಾಸ ಪ್ರಸಿದ್ಧ ತಾಳಗುಂದ ಪ್ರಣವಲಿಂಗೇಶ್ವರ ದೇವಾಲದ ಕೆರೆ ಹಾಗೂ ಮತ್ತೂಂದು ಐತಿಹಾಸಿಕ ಕೆರೆ ಹಾಗೂ ಹಲವಾರು ವಿದ್ಯಾವಂತರು ಪಿಎಚ್‌ಡಿ ಪಡೆಯಲು ಬಳಸಿಕೊಂಡಂತಹ ಬಂದಳಿಕೆ ಕೆರೆಯಲ್ಲಿ ಹನಿ ನೀರಿಲ್ಲದಂತಾಗಿದೆ. ಕೆರೆದಡದಲ್ಲಿ ಇರುವ ನರಸಾಪುರ ಗ್ರಾಮದಲ್ಲಿ ಕುಡಿಯುವ ನೀರಿಗೆ ಮಳೆಗಾಲದಲ್ಲಿ ಹಾಹಾಕಾರ ಉಂಟಾಗಿ ನೀರು ಕೊಡುವಂತೆ ಪ್ರತಿಭಟನೆಯನ್ನು ಸಹ ಮಾಡಲಾಗಿದೆ.

Advertisement

ತಾಲೂಕಿನ ಹೊಸೂರು ಹೋಬಳಿಯಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದ್ದು,ವಾಡಿಕೆಗಿಂತ ಶೇ.40ಕ್ಕಿಂತ ಕಡಿಮೆ ಮಳೆ ಆಗಿದೆ. ತಾಲೂಕಿನಲ್ಲಿ ಸಾಕಷ್ಟು ರೈತರು ತೋಟ ಮಾಡಿದ್ದರು. ಕಳೆದ ವರ್ಷ ಹರಸಾಹಸಪಟ್ಟು ತೋಟ ಉಳಿಸಿಕೊಂಡವರು ಈ ವರ್ಷದ ಬರದ ಛಾಯೆಯನ್ನು ನೋಡಿ ಹತಾಶರಾಗಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ಕೃಷಿ ಕಾರ್ಮಿಕರು ಮುಂಬರುವ ದಿನಗಳಲ್ಲಿ ಜೀವನ ನಿರ್ವಹಣೆ ಅತಿ ದುರ್ಲಭವಾಗಬಹುದು ಎಂದು ಚಿಂತನೆ ನಡೆಸಿದ್ದು, ಈಗಲೇ ಬೇರೆ ಕಡೆ ಕೆಲಸ ಕಾರ್ಯ ಹುಡುಕಿಕೊಂಡು ಹೋಗುವ ಬಗ್ಗೆ ಹಳೇಮುತ್ತಿಗೆ, ಮಂಚಿಕೊಪ್ಪ ಹಾಗೂ ಇತರ ಕಡೆಗಳ ಜನತೆ ಚಿಂತಿಸುತ್ತಿದ್ದಾರೆ. 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next