ನವದೆಹಲಿ: ಕುಸ್ತಿ ಫೆಡರೇಶನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ದೆಹಲಿಯಲ್ಲಿ ಭಾರತೀಯ ಕುಸ್ತಿಪಟುಗಳು ನಡೆಸುತ್ತಿರುವ ಧರಣಿ ದೇಶಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ತಮ್ಮ ಮೇಲಿನ ಯಾವುದಾದರೂ ಒಂದು ಆರೋಪ ಸಾಬೀತಾದರೂ ನಾನು ನೇಣಿಗೆ ಶರಣಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಮಾತನಾಡಿದ ಬ್ರಿಜ್ ಭೂಷಣ್, ʻಕುಸ್ತಿಪಟುಗಳು ನನಗೆ ಮಕ್ಕಳಿದ್ದಂತೆ. ನಾನು ಯಾವತ್ತೂ ಅವರನ್ನು ತೆಗಳುವ ಮಾತುಗಳನ್ನಾಡುವುದಿಲ್ಲ. ಏಕೆಂದರೆ ಅವರ ಸಾಧನೆಗಳಲ್ಲಿ ನನ್ನ ರಕ್ತದ, ಬೆವರಿನ ಫಲವೂ ಇದೆ ಎಂದು ಹೇಳಿದ್ದಾರೆ. ಹಾಗಾಗಿ ನನ್ನ ವಿರುದ್ಧದ ಆರೋಪಗಳಲ್ಲಿ ಯಾವುದಾದರೂ ಒಂದಾದರೂ ಸಾಬೀತಾದರೆ ನಾನು ನೇಣಿಗೆ ಶರಣಾಗುವುದು ಖಂಡಿತʼ ಎಂದು ಹೇಳಿದ್ದಾರೆ.
ʻಕುಸ್ತಿಪಟುಗಳು ಸರ್ಕಾರದ ಬಳಿ ನನ್ನನ್ನು ನೇಣುಗಂಬಕ್ಕೆ ಏರಿಸಬೇಕೆಂದು ಪಟ್ಟು ಹಿಡಿಯಲು ಪ್ರಾರಂಭಿಸಿ ಸುಮಾರು ನಾಲ್ಕು ತಿಂಗಳಾಗಿದೆ. ಆದರೆ ಸರ್ಕಾರ ನನ್ನನ್ನು ನೇಣಿಗೇರಿಸುತ್ತಿಲ್ಲ. ಅದಕ್ಕಾಗಿ ಅವರು ತಮ್ಮ ಪದಕಗಳನ್ನು ಪವಿತ್ರ ಗಂಗೆಗೆ ಎಸೆಯಲು ತೀರ್ಮಾನಿಸಿದ್ದರು. ತಮ್ಮ ಪದಕಗಳನ್ನು ಗಂಗೆಗೆ ಎಸೆಯುವುದರಿಂದ ಬ್ರಿಜ್ ಭೂಷಣ್‌ನನ್ನು ಗಲ್ಲಿಗೇರಿಸುವುದಿಲ್ಲ. ಬದಲಾಗಿ ನನ್ನ ಮೇಲಿನ ಆರೋಪಗಳಲ್ಲಿ ಒಂದನ್ನಾದರೂ ಸಾಬೀತುಪಡಿಸಿ ಅದನ್ನು ಕೋರ್ಟಿಗೆ ಹಾಜರುಪಡಿಸಿ. ಅದನ್ನು ನಾನು ಒಪ್ಪಿಕೊಳ್ಳುವೆʼ ಎಂದು ಉತ್ತರ ಪ್ರದೇಶದ ಕೈಸರ್‌ಗಂಜ್‌ನ ಸಂಸದನೂ, ಕುಸ್ತಿ ಫೆಡರೇಷನ್ ಅಧ್ಯಕ್ಷನೂ ಆಗಿರುವ ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.
Related Articles
ಇದನ್ನೂ ಓದಿ: Engagement: ಸೆಲ್ಫಿ ಕೇಳಿದ ಅಭಿಮಾನಿಯೊಂದಿಗೇ ಮಾಜಿ ವಿಂಬಲ್ಡನ್ ಚಾಂಪಿಯನ್ ನಿಶ್ಚಿತಾರ್ಥ!