ಹರಿದ್ವಾರ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ, ಕುಸ್ತಿ ಫೆಡರೇಶನ್‌ನ ಅಧ್ಯಕ್ಷ ಬ್ರಿಜ್ ಭೂಷಣ್ ರಾಜೀನಾಮೆ ಮತ್ತು ಬಂಧನಕ್ಕೆ ಆಗ್ರಹಿಸಿ ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟಕ್ಕೆ ಅಂತಾರಾಷ್ಟ್ರೀಯ ಕುಸ್ತಿ ಒಕ್ಕೂಟ ಬೆಂಬಲ ಸೂಚಿಸಿದೆ. ರವಿವಾರ ಪ್ರತಿಭಟನಕಾರರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿದೆ.
ಕೂಡಲೇ ಪ್ರಕರಣದ ಕುರಿತು ನಿಷ್ಪಕ್ಷ ತನಿಖೆ ನಡೆಸಬೇಕು. ತತ್‌ಕ್ಷಣವೇ ಕುಸ್ತಿ ಫೆಡರೇಷನ್‌ಗೆ ಚುನಾವಣೆ ನಡೆಸಬೇಕು. ತಪ್ಪಿದಲ್ಲಿ ಫೆಡರೇಷನ್‌ನ ಮಾನ್ಯತೆ ರದ್ದುಮಾಡಲಾಗುವುದು ಎಂದು ಎಚ್ಚರಿಸಿದೆ.
ಸ್ವಾಭಿಮಾನದ ಹೋರಾಟ
ಇದಕ್ಕೂ ಮುನ್ನ ಮಂಗಳವಾರ, “ಸ್ವಾಭಿಮಾನದೊಂದಿಗೆ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ. ನಮ್ಮ ಪದಕಗಳನ್ನೆಲ್ಲ ಗಂಗಾ ನದಿಯಲ್ಲಿ ವಿಸರ್ಜಿಸಲಿದ್ದೇವೆ’ ಎಂದು ಘೋಷಿಸಿದ್ದ ಕುಸ್ತಿಪಟುಗಳು ಹರಿದ್ವಾರಕ್ಕೆ ಆಗಮಿಸಿದ್ದರು. ಆದರೆ ಖಾಪ್ ಸದಸ್ಯರು ರೈತ ನಾಯಕರು ಕುಸ್ತಿಪಟುಗಳ ಮನವೊಲಿಸಿ ಪದಕಎಸೆಯದಂತೆ ತಡೆದರು. ಕೇಂದ್ರಕ್ಕೆ 5 ದಿನಗಳ ಗಡುವು ಕೊಟ್ಟರು.