Advertisement

ವ್ಹಾವ್‌, ದೂಧ್‌! ಹಾಲು ಚೆಲ್ಲುವ ಹಾದಿಯ ರಸಗವಳ

09:35 AM Jul 25, 2017 | |

ದೂಧ್‌ ಸಾಗರ್‌ ಫಾಲ್ಸ್‌ ಹತ್ತಿರ ಬರುತ್ತಿದ್ದಂತೆಯೇ ನೀರಿನ ಭೋರ್ಗರೆತ ಜೋರಾಗಿ ಕೇಳುತ್ತಿತ್ತು. ಆ ಶಬ್ದ, “ಇಳಿಯಲು ಸಿದ್ಧರಾಗಿ’ ಎಂಬ ಅಲಾರಂ! ಇನ್ನೊಂದು ಸುರಂಗ ಬಾಕಿಯಿರುವಂತೆ ಚಿಕ್ಕದೊಂದು ತಾಲ್ಕಾಲಿಕ ನಿಲ್ದಾಣದಲ್ಲಿ ರೈಲು ನಿಂತಿತು. ಆಗ ದೂಧ್‌ಸಾಗರ್‌ ನೋಡಲು ಬಂದಿದ್ದವರ ಬಾಯಿಯಲ್ಲೆಲ್ಲ “ವ್ಹಾವ್‌’ ಎಂಬ ಉದ್ಗಾರ…

Advertisement

ವಡಾಪಾವ್‌ ವಡಾಪಾವ್‌, ಗರ್‌ಮಾ ಗರಮ್‌ ವಡಾಪಾವ್‌- ಹೀಗೊಬ್ಬ ಪಾವ್‌ವಾಲಾನ ಕೂಗು ಕಿವಿಗಪ್ಪಳಿಸಿದಾಗ, ಒಮ್ಮೆಲೇ ಎಚ್ಚರವಾಯಿತು. ಎಲ್ಲಿದ್ದೇನೆಂದೇ ತಿಳಿಯಲಿಲ್ಲ. ಸುತ್ತ ಒಮ್ಮೆ ಕಣ್ಣಾಡಿಸಿದಾಗ ಕಂಡದ್ದು, ಎದುರಿಗೆ ಖಾಲಿ ಇರುವ ಸೀಟುಗಳು, ಪಕ್ಕದ ಕಿಟಕಿಯಿಂದಾಚೆಗಿನ “ಲೋಡ್‌ ಜಂಕ್ಷನ್‌’ ಎಂದು ಮೂರು ಭಾಷೆಯಲ್ಲಿ ಬರೆದಿದ್ದ ಬೋರ್ಡು! ಆಗ ವಾಸ್ತವ ಸ್ಥಿತಿ ತಿಳಿಯಿತು; ನಾನಿರುವುದು ವಾಸ್ಕೋ-ಡಿ-ಗಾಮ ಎಕ್ಸ್‌ಪ್ರೆಸ್‌ ರೈಲಿನಲ್ಲಿ. ನಿನ್ನೆ ತಡರಾತ್ರಿ ದೂಧ್‌ಸಾಗರ್‌ ನೋಡಲೆಂದು ಕಾಲೇಜು ಸ್ನೇಹಿತರ ಜತೆ ಬಂದಿದ್ದೇನೆಂದು!

ಕಾಲೇಜಿನ ಅಂತಿಮ ವರ್ಷವಾಗಿದ್ದರಿಂದ ಕಾಲೇಜು ಸ್ನೇಹಿತರೆಲ್ಲಾ ಸೇರಿ ದೂಧ್‌ಸಾಗರ ಫಾಲ್ಸ್‌ಗೆ ಟ್ರಿಪ್‌ ಹೋಗುವ ಕನಸು ಈಡೇರಿತ್ತು. ಕನ್ನಡದ “ಮೈನಾ’, ಹಿಂದಿಯ “ಚೆನ್ನೈ ಎಕ್ಸ್‌ಪ್ರೆಸ್‌’ ಸಿನಿಮಾಗಳು ನಮಗೆ ಅಷ್ಟೊಂದು ಹುಚ್ಚು ಹಿಡಿಸಿ, ಈ ಜಲಪಾತದ ಬುಡಕ್ಕೆ ಕರೆದೊಯ್ದಿದ್ದವು. ನಮ್ಮ ಗುಂಪಿನಲ್ಲಿ ಎಲ್ಲರೂ ಈ ಪಯಣಕ್ಕೆ ಹೊಸಬರೇ. ಆದರೆ, ನನಗೊಬ್ಬನಿಗೆ ಎರಡು ಸಲ ಇಲ್ಲಿಗೆ ಬಂದ ಅನುಭವವಿತ್ತು. ಈ ನನ್ನ ಅನುಭವ ಅಲ್ಲಿ ಎಷ್ಟು ದುರ್ಬಳಕೆ ಆಯಿತೆಂದರೆ, ಒಬ್ಬ ಸ್ನೇಹಿತನಂತೂ “ಸಾರ್‌, ಇಲ್ಲಿ ಟಾಯ್ಲೆಟ್‌ ಎಲ್ಲಿದೆ? ನನಗೆ ಕರಕೊಂಡು ಹೋಗಿ. ನಂಗೆ ದಾರಿ ಗೊತ್ತಿಲ್ಲ’ ಎಂದ. ಮತ್ತೂಬ್ಬ, ಪ್ರತಿ ಸ್ಟೆಷನ್‌ ಬಂದಾಗಲೂ “ಇದ್ಯಾವ ಊರು? ಮುಂದಿನ ಸ್ಟೇಷನ್‌ ಯಾವುದು? ಇನ್ನೆಷ್ಟು ದೂರ?’ ಅಂತೆಲ್ಲ ಮೆದುಳಿಗೇ ಕೈಹಾಕಿಬಿಟ್ಟ. ದಾರಿಯುದ್ದಕ್ಕೂ ಏನೇನೋ ತಮಾಷೆ. “ಯಾಕೆ ರೈಲು ಇಷ್ಟು ನಿಧಾನ ಹೋಗುತ್ತಿದೆ?’ ಅಂತ ಒಬ್ಬ ಕೇಳಿದಾಗ, ಮತ್ತೂಬ್ಬನ ಆನ್ಸರ್‌ “ಆ ಕೆಂಪು ಚೈನ್‌ ಎಳೆದರೆ, ಫಾಸ್ಟ್‌ ಹೋಗುತ್ತೆ ಕಣೋ…’ ಅಂತ! ಸದ್ಯ ನಕ್ಕೂ ನಕ್ಕು ಹಲ್ಲು ಬಿದ್ದು ಹೋಗಲಿಲ್ಲ!

ಲೋಂಡಾದಲ್ಲಿ ಎದ್ದ ಮೇಲೆ, ಸ್ನೇಹಿತರನ್ನೆಲ್ಲ ಹುಡುಕಲು ಮುಂದಾದೆ. ಅವರ ಸೀಟ್‌ಗಳು ಖಾಲಿ ಇದ್ದಿದ್ದರಿಂದ ಗಾಬರಿಯಾಗಿ ರೈಲು ಇಳಿದು ನೋಡಿದರೆ, ಪಕ್ಕದ ರೈಲ್ವೆ ಕ್ಯಾಂಟೀನ್‌ನ ತಿಂಡಿಗೆ ಲಗ್ಗೆ ಇಟ್ಟಿರೋದು ಗೊತ್ತಾಯಿತು. ನಾನೂ ಜತೆಯಾದೆ. ರೈಲು ಮುಂದೆ ಸಾಗಿ ಕ್ಯಾಸರ್‌ಲಾಕ್‌ ತಲುಪಿತು. ಇಲ್ಲಿಂದ ಫಾಲ್ಸ್‌ 11 ಕಿ.ಮೀ ದೂರ. ಟ್ರೆಕ್ಕಿಂಗ್‌ ಹೋಗುವವರು ಹೊರಟರು. ನಮ್ಮದೇನು ಟ್ರಕ್ಕಿಂಗ್‌ ಮಾಡುವ ಪ್ಲ್ರಾನ್‌ ಇರಲಿಲ್ಲ. ಅಲ್ಲಿಂದ ಮುಂದೆ ರೈಲು ಆಂಬೋನಿ ಘಾಟ್‌ನ ನಿಸರ್ಗದ ಮಡಿಲಲ್ಲಿ ಚಲಿಸತೊಡಗಿತು. ದಟ್ಟ ಹಸಿರಿನ ಕಾನನ. ದೃಷ್ಟಿ ಸೋಲುವಷ್ಟು ಮರ- ಬೆಟ್ಟಗಳ ಎತ್ತರ. ಎಡಭಾಗಕ್ಕೆ ದೊಡ್ಡ ಪ್ರಪಾತ. ಬ್ಯಾಗಿನಲ್ಲಿದ್ದ ಕ್ಯಾಮೆರಾ, ಜೇಬಿನಲ್ಲಿದ್ದ ಮೊಬೈಲ್‌ಗ‌ಳ ಕೆಲಸ ಇಲ್ಲಿಂದ ಆರಂಭವಾಯಿತು. ನಿಸರ್ಗದ ಆ ಸೊಬಗಿನ ಎಷ್ಟು ಫೋಟೋ ಕ್ಲಿಕ್ಕಿಸಿದರೂ ಸಮಾಧಾನವಾಗುತ್ತಿರಲಿಲ್ಲ. ಘಾಟ್‌ ಆದ್ದರಿಂದ ರೈಲು ಇಲ್ಲಿ ಆಮೆಗತಿಯಲ್ಲಿ ಸಾಗುತ್ತಿತ್ತು. ಮಧ್ಯೆ- ಮಧ್ಯೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಕಿಲೋಮೀಟರ್‌ಗಳಷ್ಟು ಉದ್ದದ ಸುರಂಗಗಳು ಬಂದವು. ಆಗ ಸಂಪೂರ್ಣ ಕತ್ತಲು ಆವರಿಸುತ್ತಿತ್ತು. ಪಕ್ಕದಲ್ಲಿಯೇ ಹರಿಯುತ್ತಿದ್ದ ಚಿಕ್ಕ ಚಿಕ್ಕ ಝರಿಗಳು, ಕೈಗೆಟುಕುತ್ತಿದ್ದವು.

ದೂಧ್‌ ಸಾಗರ್‌ ಫಾಲ್ಸ್‌ ಹತ್ತಿರ ಬರುತ್ತಿದ್ದಂತೆಯೇ ನೀರಿನ ಭೋರ್ಗರೆತ ಜೋರಾಗಿ ಕೇಳುತ್ತಿತ್ತು. ಆ ಶಬ್ದ, “ಇಳಿಯಲು ಸಿದ್ಧರಾಗಿ’ ಎಂಬ ಅಲಾರಂ! ಇನ್ನೊಂದು ಸುರಂಗ ಬಾಕಿಯಿರುವಂತೆ ಚಿಕ್ಕದೊಂದು ತಾಲ್ಕಾಲಿಕ ನಿಲ್ದಾಣದಲ್ಲಿ ರೈಲು ನಿಂತಿತು. ಆಗ ದೂಧ್‌ಸಾಗರ್‌ ನೋಡಲು ಬಂದಿದ್ದವರ ಬಾಯಿಯಲ್ಲೆಲ್ಲ “ವ್ಹಾವ್‌’ ಎಂಬ ಉದ್ಗಾರ. ರೈಲಿನಲ್ಲಿ ಕುಳಿತು ಅಂಗಾಂಗ ಮರಗಟ್ಟಿದ್ದರಿಂದ ಉಳಿದಿದ್ದ ಒಂದು ಸುರಂಗದ ಉದ್ದವನ್ನು ಅಂದಾಜಿಸದೆ, ಎಲ್ಲರೂ ಓಡಿ ಒಳನುಗ್ಗಿದೆವು. ಮುಂದೆ ಹೋದಂತೆ ಕತ್ತಲಾವರಿಸಿ, ಕೆಲವರು ಕಿರುಚಾಡತೊಡಗಿದರು. ಆಗ ಕೈಯಲ್ಲಿದ್ದ ಮೊಬೈಲ್‌ಗ‌ಳು ಅಕ್ಷರಶಃ ದಾರಿದೀಪವಾದವು!

Advertisement

ಫಾಲ್ಸ್‌ ಹತ್ತಿರ ಬಂದಂತೆ ಕುತೂಹಲ ಹೆಚ್ಚುತ್ತಿತ್ತು. ಮುಂದೆ ಸಾಗಿ, ಅದರ ಎದುರು ನಿಂತೆವು. ಮೈ ರೋಮಾಂಚನ…! ಅದು ನಿಜವಾಗಿಯೂ ಹಾಲಿನ ಸಾಗರವೇ! ಯಾರೋ ಮೇಲಿಂದ ಲಕ್ಷಕೋಟಿ ಲೀಟರ್‌ನಷ್ಟು ಹಾಲನ್ನು ಸುರಿಯುತ್ತಿದ್ದಾರೆಂಬ ಭಾವ ಮೂಡಿ, “ಅಷ್ಟೂ ಹಾಲು ವ್ಯರ್ಥವಾಗುತ್ತಿದೆಯಲ್ಲಪ್ಪಾ!’ಎಂಬ ಬೇಸರವೂ ಸುಳಿಯಿತು. ಮಾಂಡೋವಿ ನದಿಯು 1017 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುತ್ತಿದ್ದು, ಆ ನೀರು ಬಂಡೆಗೆ ಸಿಡಿದು ಸೋನೆ ಮಳೆಯ ಹನಿಯ ಸಿಂಚನವಾಗುತ್ತಿತ್ತು. ಅಲ್ಲಿ ಒಮ್ಮೆಲೇ ಮಳೆ ಬರುತಿತ್ತು, ತುಸು ನೀರೆರೆದು ಕಣ್ಮರೆಯಾಗುತಿತ್ತು. ನೂರಾರು ಫೋಟೋ ಕ್ಲಿಕ್ಕಿಸಿ ಕ್ಯಾಮೆರಾ ಮತ್ತು ಮೊಬೈಲ್‌ಗ‌ಳ ಮೆಮೋರಿಯ ಜಾಗ, ಬ್ಯಾಟರಿಯ ಶಕ್ತಿ ಖಾಲಿಮಾಡುತ್ತಾ ರೈಲ್ವೆ ಟ್ರ್ಯಾಕ್‌ ಹಿಡಿದು ಮುನ್ನಡೆದೆವು. ದಾರಿಯಲ್ಲಿ ಸಿಕ್ಕ ಚಿಕ್ಕ ಝರಿಗಳಲ್ಲಿ ಶವರ್‌ಬಾತ್‌ ಮಾಡುತ್ತಾ ಖುಷಿ ಪಟ್ಟೆವು. 2 ಕಿ.ಮೀ. ದೂರದಿಂದ ಫಾಲ್ಸ್‌ನ ವೀವ್‌ ನೋಡಿ, ಅಲ್ಲಿಯೇ ಊರಿಂದ ತಂದಿದ್ದ ಕುರುಕಲು ತಿಂಡಿ ಖಾಲಿ ಮಾಡಿಕೊಂಡು, ಫಾಲ್ಸ್‌ನ ಬಳಿಗೆ ಹಿಂದಿರುಗಿದೆವು. 

ಅಷ್ಟರಲ್ಲಾಗಲೇ ಸಮಯ 4 ಗಂಟೆ. ಅಲ್ಲಿಂದ ಹೊರಡಲು ಕೊನೆಯ ಟ್ರೈನ್ 5 ಗಂಟೆಗಿದ್ದಿದ್ದರಿಂದ ಜನಸಾಗರ ಹಿಂದಿರುಗುತ್ತಿತ್ತು. ಇಷ್ಟವಿಲ್ಲದಿದ್ದರೂ ಕೊನೆಯ ಬಾರಿ ಜಲಪಾತವನ್ನು ಕಣ್ತುಂಬಿಕೊಂಡು ಒಲ್ಲದ ಮನಸ್ಸಿನಿಂದ ಹಳಿ ಹಿಡಿದು ನಿಲ್ದಾಣದೆಡೆಗೆ ಸಾಗಿದೆವು. ಸಾಕಷ್ಟು ಮೋಜು ಮಸ್ತಿಯೊಂದಿಗೆ ದಾರಿಯುದ್ದಕ್ಕೂ ನಿಸರ್ಗದ ಸವಿಯುಂಡು ಅಂತಿಮವಾಗಿ ಫಾಲ್ಸ್‌ಗೆ ಗುಡ್‌ ಬೈ ಹೇಳಿದೆವು. ಬಂದ ಹೌರತ್‌ ನಿಜಾಮುದ್ದೀನನ ಸಹಾಯದಿಂದ ರಾಣಿ ಚನ್ನಮ್ಮನನ್ನು ಹಿಡಿದು ಊರು ಸೇರಿಕೊಂಡೆವು. ಆದರೂ, ನಮ್ಮೆಲ್ಲರ ಮನಸ್ಸು ಮಾತ್ರ ದೂಧ್‌ಸಾಗರ್‌ ಎಂಬ ಹಾಲಿನ ಭೋರ್ಗರೆತಕ್ಕೆ ಮೈಯ್ಯೊಡ್ಡಿ ನಿಂತಿತ್ತು.

ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next