Advertisement

ಪಾಕಿಸ್ಥಾನಕ್ಕೆ ಪುಕ್ಕಟೆ ಎರಡಂಕ ಕೊಡುವುದು ಬೇಡ: ಸಚಿನ್‌

12:30 AM Feb 23, 2019 | Team Udayavani |

ಮುಂಬಯಿ: ಪುಲ್ವಾಮಾ ದಾಳಿಯ ಬಳಿಕ ಮುಂಬರುವ ಪ್ರತಿಷ್ಠಿತ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾರತ ತಂಡ ಪಾಕಿಸ್ಥಾನ ವಿರುದ್ಧ ಆಡುವುದು ಬೇಡ, ಪಾಕಿಸ್ಥಾನವನ್ನು ಕೂಟದಿಂದಲೇ ಬಹಿಷ್ಕರಿಸಿ ಎಂಬ ಕೂಗು ಬಲವಾಗುತ್ತಲೇ ಇದೆ. ಇನ್ನು ಕೆಲವು ಮಾಜಿಗಳು ಪಾಕಿಸ್ಥಾನವನ್ನು ಬಗ್ಗುಬಡಿಯಲು ಲಭಿಸಿದ ಈ ಅವಕಾಶವನ್ನು ಏಕೆ ಬಿಡಬೇಕು ಎಂಬ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

Advertisement

ಒಂದು ದಿನದ ಹಿಂದಷ್ಟೇ ಹೇಳಿಕೆ ನೀಡಿದ್ದ ಮಾಜಿ ಆರಂಭಕಾರ ಸುನೀಲ್‌ ಗಾವಸ್ಕರ್‌, “ವಿಶ್ವಕಪ್‌ನಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಅಜೇಯ ದಾಖಲೆ ಹೊಂದಿದೆ. ಒಮ್ಮೆಯೂ ಸೋತಿಲ್ಲ. ಹೀಗಿರುವಾಗ ಜೂ. 16ರ ಲೀಗ್‌ ಪಂದ್ಯವನ್ನು ಆಡದಿರುವ ಬದಲು ಅವರಿಗೆ ಇನ್ನೊಂದು ಸೋಲಿನೇಟು ಬಿಗಿಯೋಣ. ನಾವು ಹಿಂದೆ ಸರಿದರೆ ಅವರಿಗೆ ಲಾಭವಾಗುತ್ತದೆ’ ಎಂಬಂಥ ಹೇಳಿಕೆ ನೀಡಿದ್ದರು.

ಇದೀಗ ಮತ್ತೋರ್ವ ಮಾಜಿ ಆಟಗಾರ ಸಚಿನ್‌ ತೆಂಡುಲ್ಕರ್‌ ಸರದಿ. ಪಾಕಿಸ್ಥಾನ ವಿರುದ್ಧದ ಪಂದ್ಯವನ್ನು ತ್ಯಜಿಸಿ ಅವರಿಗೇಕೆ ಪುಕ್ಕಟೆಯಾಗಿ ಎರಡು ಅಂಕ ನೀಡಬೇಕು, ವೈಯಕ್ತಿಕವಾಗಿ ಇದನ್ನು ನಾನು ದ್ವೇಷಿಸುತ್ತೇನೆ ಎಂದಿದ್ದಾರೆ.
“ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಪಾಕಿಸ್ಥಾನ ವಿರುದ್ಧ ನಾವು ಪ್ರತೀ ಸಲವೂ ಜಯಭೇರಿ ಮೊಳಗಿ ಸಿದ್ದೇವೆ. ಅವರನ್ನು ಮತ್ತೂಮ್ಮೆ ಸೋಲಿಸುವ ಸಮಯ ಬಂದಿದೆ. ಈ ಪಂದ್ಯವನ್ನು ತ್ಯಜಿಸಿ ಪುಕ್ಕಟೆಯಾಗಿ ಎರಡು ಅಂಕ ನೀಡಿ ಅವರಿಗೆ ನೆರವಾಗುವುದನ್ನು ವೈಯ ಕ್ತಿಕವಾಗಿ ನಾನು ದ್ವೇಷಿಸುತ್ತೇನೆ’ ಎಂಬುದಾಗಿ ಸಚಿನ್‌ ತೆಂಡುಲ್ಕರ್‌ ಹೇಳಿದ್ದಾರೆ. “ಇದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ ನನಗೆ ದೇಶ ಮೊದಲು. ಈ ವಿಚಾರದಲ್ಲಿ ನನ್ನ ದೇಶ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಅದನ್ನು ನಾನು ಹೃದಯಪೂರ್ವಕವಾಗಿ ಸ್ವೀಕರಿಸುತ್ತೇನೆ’ ಎಂದೂ ಲೆಜೆಂಡ್ರಿ ಬ್ಯಾಟ್ಸ್‌ಮನ್‌ ಸಚಿನ್‌ ಹೇಳಿದರು.

ಸರಕಾರದ ನಿರ್ಧಾರವೇ ಅಂತಿಮ
ಇದೇ ವೇಳೆ ಪ್ರತಿಕ್ರಿಯಿಸಿದ ಟೀಮ್‌ ಇಂಡಿಯಾ ಕೋಚ್‌ ರವಿಶಾಸ್ತ್ರಿ, ಭಾರತ- ಪಾಕಿಸ್ಥಾನ ನಡುವಿನ ವಿಶ್ವಕಪ್‌ ಪಂದ್ಯದ ವಿಚಾರದಲ್ಲಿ ಬಿಸಿಸಿಐ ಮತ್ತು ಸರಕಾರದ ನಿರ್ಧಾರವೇ ಅಂತಿಮ ಎಂದಿದ್ದಾರೆ. “ಬಿಸಿಸಿಐ ಮತ್ತು ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತವೋ ಅದಕ್ಕೆ ನಾವು ಬದ್ಧ. ಪಾಕಿಸ್ಥಾನ ವಿರುದ್ಧ ಆಡುವುದು ಬೇಡ ಎಂದು ಹೇಳಿದರೆ ಖಂಡಿತ ನಾವು ಇದನ್ನು ಪಾಲಿಸುತ್ತೇವೆ’ ಎಂದು ಶಾಸ್ತ್ರಿ ಹೇಳಿದರು.

ಬಿಸಿಸಿಐಗೇ ನಿಷೇಧ ಭೀತಿ!
ಪಾಕ್‌ ವಿರುದ್ಧ ವಿಶ್ವಕಪ್‌ ಕ್ರಿಕೆಟ್‌ ಪಂದ್ಯವನ್ನು ಬಹಿಷ್ಕರಿಸಿದರೆ, ಸ್ವತಃ ಬಿಸಿಸಿಐಯೇ ನಿಷೇಧಕ್ಕೊಳಗಾಗಬಹುದು ಎಂಬ ಭೀತಿಯನ್ನು ಕೇಂದ್ರ ಸರಕಾರಿ ಮೂಲಗಳು ವ್ಯಕ್ತಪಡಿಸಿವೆ. ಹೀಗೆಂದು ಆಂಗ್ಲ ವಾಹಿನಿಯೊಂದು ವರದಿ ಮಾಡಿದೆ. ಪಾಕಿಸ್ಥಾನವನ್ನು ಏಕಾಂಗಿಯಾಗಿಸುವ ಯತ್ನದಲ್ಲಿ ಭಾರತವೇ ಏಕಾಂಗಿಯಾಗುವ ಅಪಾಯವಿದೆ. ಆದ್ದರಿಂದ ಯಾವುದೇ ಕಠಿನ ಕ್ರಮವನ್ನು ಗಡಿಬಿಡಿಯಲ್ಲಿ ತೆಗೆದುಕೊಳ್ಳುವುದು ಬೇಡ ಎಂಬ ಚಿಂತನೆ ಸರಕಾರದ್ದಾಗಿದೆ ಎನ್ನಲಾಗಿದೆ.ಪಾಕ್‌ ವಿರುದ್ಧ ಆಡದಿದ್ದರೆ ಭಾರತ ತಂಡ ಸೋಲೊಪ್ಪಿಕೊಂಡು 2 ಅಂಕ ಕಳೆದುಕೊಳ್ಳುತ್ತದೆ. ಅಷ್ಟು ಮಾತ್ರವಲ್ಲ ಬಿಸಿಸಿಐ ವಿರುದ್ಧ ನಿಷೇಧದಂತಹ ಕಠಿನ ಕ್ರಮವನ್ನೂ ಐಸಿಸಿ ತೆಗೆದುಕೊಳ್ಳಬಹುದು. ಈಗಲೂ ಬೇಕಾದಷ್ಟು ಸಮಯ ಬಾಕಿಯಿದೆ. ನಿಧಾನ ವಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next