Advertisement

ಮಾರಟಕ್ಕಿವೆ ಕ್ಯಾಬ್‌ಗಳು…ಕೊಳ್ಳೋರ್ಯಾರು? 

12:17 PM Jul 05, 2017 | Team Udayavani |

ಬೆಂಗಳೂರು: ನಗರದಲ್ಲಿ ಟ್ಯಾಕ್ಸಿಗಳು ಮಾರಾಟಕ್ಕಿವೆ. ಆದರೆ, ಖರೀದಿದಾರರೇ ಸಿಗುತ್ತಿಲ್ಲ. ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡ ಚಾಲಕರಿಗೆ ಪ್ರೋತ್ಸಾಹಧನ (ಇನ್ಸೆಂಟಿವ್‌)ದಲ್ಲಿ ಸಾಕಷ್ಟು ಖೋತಾ ಆಗಿದ್ದು, ಈ ಹಿನ್ನೆಲೆಯಲ್ಲಿ ಬಹುತೇಕರು ತಮ್ಮ ಟ್ಯಾಕ್ಸಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ, ಅವುಗಳನ್ನು ಖರೀದಿಸಲು ಯಾರೂ ಮುಂದೆಬರುತ್ತಿಲ್ಲ. ಯಾಕೆಂದರೆ, ಈಗಾಗಲೇ ಕ್ಯಾಬ್‌ ಸಂಸ್ಥೆಗಳೇ ಮಾರಾಟ ಮಾಡಿದ ಸಾವಿರಾರು ಟ್ಯಾಕ್ಸಿಗಳು ರಸ್ತೆಯಲ್ಲಿವೆ. 

Advertisement

ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬರದೆ ಇರುವುದರಿಂದ ಬ್ಯಾಂಕ್‌ಗಳಿಗೆ ಸಾಲದ ಕಂತು ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡವರ ಪೈಕಿ ಶೇ. 40ರಷ್ಟು ಚಾಲಕರು ತಮ್ಮ ಟ್ಯಾಕ್ಸಿಗಳನ್ನು ಮಾರುತ್ತಿದ್ದಾರೆ. ಆದರೆ, ಖರೀದಿದಾರರೂ ಮುಂದೆಬರುತ್ತಿಲ್ಲ. ಮತ್ತೂಂದೆಡೆ ಬೆಳಗಾದರೆ ಬ್ಯಾಂಕ್‌ಗಳಿಂದ ಸಾಲದ ಕಂತು ಕಟ್ಟುವಂತೆ ಫೋನ್‌ಗಳ ಕಾಟ. ಇದು ಚಾಲಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಚಾಲಕರು ಈಗ ಅಕ್ಷರಶಃ ಕೈಚೆಲ್ಲಿ ಕುಳಿತಿದ್ದಾರೆ. 

ಈ ಮಧ್ಯೆ ಕಂಪೆನಿಗಳೇ ತಮ್ಮ ಕಾರುಗಳನ್ನು ಮಾರಾಟ ಮಾಡಿವೆ. ಇವುಗಳನ್ನು ಖರೀದಿಸಿದವರು ಮೊದಲ ಹಂತದಲ್ಲಿ 30ರಿಂದ 35 ಸಾವಿರ ರೂ. ಪಾವತಿಸಿದರೆ ಸಾಕು, ಉಳಿದ ಹಣವನ್ನು ವಿವಿಧ ಕಂತುಗಳಲ್ಲಿ ಮೂರು ವರ್ಷಗಳವರೆಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಹೀಗೆ ಕಂಪೆನಿಗಳಿಂದ ಖರೀದಿಸಿ, ಆ ಕಂಪೆನಿಗಳಡಿಯಲ್ಲಿಯೇ 30 ಸಾವಿರಕ್ಕೂ ಅಧಿಕ ಟ್ಯಾಕ್ಸಿಗಳು ರಸ್ತೆಗಿಳಿದಿವೆ.

ಹೆಚ್ಚು ಬಾಡಿಗೆಗಳು ಮತ್ತು ಪ್ರೋತ್ಸಾಹಧನ (ಇನ್ಸೆಂಟಿವ್‌) ಕೂಡ ಈ ಮಾದರಿಯ ಟ್ಯಾಕ್ಸಿಗಳಿಗೇ ನೀಡಲಾಗುತ್ತಿದೆ. ಪರಿಣಾಮ ಹೊರಗಡೆಯಿಂದ ಬಂದು, ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡ ಟ್ಯಾಕ್ಸಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲ. ನಷ್ಟದಲ್ಲಿರುವ ಟ್ಯಾಕ್ಸಿಗಳನ್ನು ಮಾರಾಟಕ್ಕಿಟ್ಟರೂ ಯಾರೂ ಮುಂದೆಬರುತ್ತಿಲ್ಲ ಎಂದು ಚಾಲಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. 

ತಿಂಗಳಿಂದ ಮಾರಾಟಕ್ಕಿವೆ
ನಾನು ಓಲಾದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇನೆ. ಆದಾಯ ಬಾರದ ಕಾರಣ ಟ್ಯಾಕ್ಸಿ ಓಡಿಸುವುದನ್ನೇ ನಿಲ್ಲಿಸಿದ್ದೇನೆ. ಇದೇ ರೀತಿ ನಾನಿರುವ ಪೀಣ್ಯ ಎರಡನೇ ಹಂತದ ಹೆಗ್ಗನಹಳ್ಳಿಯೊಂದರಲ್ಲೇ 15ರಿಂದ 20 ಟ್ಯಾಕ್ಸಿಗಳು ಮಾರಾಟಕ್ಕಿವೆ. ಇದರಲ್ಲಿ ಇಂಡಿಕಾ, ಇಟಿಯೋಸ್‌, ಎಕ್ಸೆಂಟ್‌, ಸ್ವಿಫ್ಟ್ ಮತ್ತಿತರ ಕಾರುಗಳಿವೆ. ಅವೆಲ್ಲವುಗಳನ್ನು ಒಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಡಲಾಗಿದೆ. ಅಷ್ಟೇ ಅಲ್ಲ, “ಏಜೆಂಟರುಗಳಿಗೂ ಯಾರಾದರೂ ಖರೀದಿದಾರರಿದ್ದರೆ ಹೇಳಿ’ ಎಂದು ಕೋರಲಾಗಿದೆ. ಒಂದೂವರೆ ತಿಂಗಳಿಂದ ಗಿರಾಕಿಗಳನ್ನು ಹುಡುಕುತ್ತಿದ್ದರೂ ಯಾರೂ ಸಿಗುತ್ತಿಲ್ಲ ಎಂದು ನಾಗರಾಜ್‌ ಎಂಬುವರು ಅಲವತ್ತುಕೊಳ್ಳುತ್ತಾರೆ. 

Advertisement

“ವಾಹನದ ತೆರಿಗೆ ಪಾವತಿ, ಎಫ್ಸಿ (ಫಿಟ್‌ನೆಸ್‌ ಸರ್ಟಿಫಿಕೇಟ್‌) ತೆಗೆದುಕೊಳ್ಳಲಿಕ್ಕೂ ಹಣ ಇಲ್ಲವಾಗಿದೆ. ಹಲವು ತಿಂಗಳಿಂದ ಎಫ್ಸಿ ತೆಗೆದುಕೊಂಡಿಲ್ಲ. ಹಗಲು ಹೊತ್ತಿನಲ್ಲಿ ರಸ್ತೆಗಿಳಿದರೆ, ಆರ್‌ಟಿಒ ಮತ್ತು ಪೊಲೀಸರ ಕಾಟ. ಸಿಗುವ ಪುಡಿಗಾಸು ಕೂಡ ಅವರಿಗೆ ದಂಡದ ರೂಪದಲ್ಲಿ ಕೊಟ್ಟರೆ, ಕುಟುಂಬ ನಿರ್ವಹಣೆಗೆ ಏನು ಮಾಡೋದು? ಆದ್ದರಿಂದ ರಾತ್ರಿ ಹೊತ್ತು ಡ್ಯುಟಿ ಮಾಡುತ್ತಿದ್ದೇವೆ’ ಎಂದು ಸುಂಕದಕಟ್ಟೆ ನಿವಾಸಿ ಚಾಲಕ ಮುನಿರಾಜು ಅಸಹಾಯಕತೆ ತೋಡಿಕೊಳ್ಳುತ್ತಾರೆ. 

ಅಗ್ಗದ ದರದಲ್ಲಿ ಮಾರಾಟ
2011ರಲ್ಲಿ ಖರೀದಿಸಿದ ಸ್ವಿಫ್ಟ್ ಕಾರು 2.25 ಲಕ್ಷ ರೂ.ಗಳಿಗೆ ಮಾರಾಟಕ್ಕಿದ್ದರೆ, 2012ರ ಇಂಡಿಕಾ ಕಾರು 1.50 ಲಕ್ಷಕ್ಕೆ ಮಾರಾಟ ಮಾಡಲು ಚಾಲಕರೊಬ್ಬರು ಮುಂದೆಬಂದಿದ್ದಾರೆ. ಅದೇ ರೀತಿ, ಇಟಿಯೋಸ್‌ ಮೂರು ತಿಂಗಳ ಹಿಂದೆ ಖರೀದಿಸಲಾಗಿದೆ. 5 ಲಕ್ಷ ಈ ಕಾರಿನ ಮೇಲೆ ಸಾಲ ಇದೆ. ಒಂದೂವರೆ ಲಕ್ಷ ರೂ. ನೀಡಿ, ಸಾಲ ಮರುಪಾವತಿ ಮಾಡುವವರು ಈ ಕಾರು ಖರೀದಿಸಬಹುದು. ಇಂತಹ ಸಾವಿರಾರು ಕಾರುಗಳು ಮಾರಾಟಕ್ಕಿವೆ ಎಂದು ಚಾಲಕರು ಮಾಹಿತಿ ನೀಡುತ್ತಾರೆ. 

“ಜಪ್ತಿ ಮಾಡಿಕೊಂಡು ಹೋಗಲಿ’
ಮೂರ್‍ನಾಲ್ಕು ತಿಂಗಳ ಸಾಲದ ಕಂತುಗಳು ಬಾಕಿ ಇವೆ. ಬ್ಯಾಂಕ್‌ನಿಂದ ನಿತ್ಯ ಫೋನ್‌ ಬರುತ್ತದೆ. ಆ್ಯಪ್‌ ಆಧಾರಿತ ಟ್ಯಾಕ್ಸಿ ಕಂಪೆನಿಗಳಡಿ ಬಾಡಿಗೆಗೆ ಹೋದರೆ, ನಿತ್ಯ 12ರಿಂದ 15 ತಾಸುಗಳು ದುಡಿದರೂ ಸಿಗುವುದು 8-10 ಟ್ರಿಪ್‌ಗ್ಳು. ಅದರಲ್ಲೂ ಕಮೀಷನ್‌ ಕಡಿತಗೊಳಿಸಿ, ಪುಡಿಗಾಸು ಕೊಡುತ್ತಾರೆ. 10-12 ಶೇರ್‌ (ಕಾರ್‌ಪೂಲ್‌)ಗಳನ್ನು ಪೂರ್ಣಗೊಳಿಸಿದಾಗ, 100-200 ರೂ. ಸಿಗುತ್ತದೆ. ಆದರೆ, ಅದಕ್ಕಾಗಿ ಮೂರ್‍ನಾಲ್ಕು ತಾಸು ಟ್ರಾಫಿಕ್‌ನಲ್ಲಿ ಕಳೆಯಬೇಕು. ಆದ್ದರಿಂದ ಅದರ ಸಹವಾಸವೇ ಬೇಡ. ಬೇಕಿದ್ದರೆ ಬ್ಯಾಂಕ್‌ನವರು ಜಪ್ತಿ ಮಾಡಿಕೊಂಡು ಹೋಗಲಿ ಎಂದು ಸುಮ್ಮನಾಗಿಬಿಟ್ಟಿದ್ದೇನೆ ಎಂದು ರಾಜಾಜಿನಗರದ ಚಾಲಕ ಮಂಜು ಹೇಳುತ್ತಾರೆ. 

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next