“ಈ ಮೈದಾನವನ್ನು ನಾನೆಂದಿಗೂ ಮರೆಯೋದಿಲ್ಲ…’- ಹೀಗೆ ಹೇಳುತ್ತಾ ಕಾಲೇಜು ದಿನಗಳನ್ನು ಮೆಲುಕು ಹಾಕಿದರು ನಟ ಅರ್ಜುನ್ ಸರ್ಜಾ. ಅವರು ಹೇಳಿದ್ದು, ನ್ಯಾಷನಲ್ ಕಾಲೇಜು ಮೈದಾನ ಕುರಿತು. ಆ ಬಗ್ಗೆ ಹೇಳ್ಳೋಕೆ ಕಾರಣ, “ಭೂಮಿಪುತ್ರ’ ಸಿನಿಮಾ. ಎಸ್. ನಾರಾಯಣ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರವು ಮಾಜಿ ಸಿಎಂ ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತಾವಧಿಯಲ್ಲಿ ನಡೆದ ಚಿತ್ರಣವನ್ನು ಬಿತ್ತರಿಸಲಿದೆ. ಗೋಧೂಳಿ ಸಮಯದಲ್ಲಿ ಚಿತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಚಾಲನೆ ಕೊಟ್ಟರು.
ಅಂದು ಮಾತಿಗಿಳಿದ ಅರ್ಜುನ್ ಸರ್ಜಾ, “ನ್ಯಾಷನಲ್ ಕಾಲೇಜು ಮೈದಾನ ಮರೆಯದ ಅನುಭವ ಕೊಟ್ಟಿದೆ. ಕಾಲೇಜು ದಿನಗಳನ್ನು ಇಲ್ಲೇ ಕಳೆದಿದ್ದೇನೆ. ಆಗ ಡಾ.ರಾಜ್‌ಕುಮಾರ್ ಅವರು ಗೋಕಾಕ್ ಚಳುವಳಿಗೆ ಚಾಲನೆ ಕೊಟ್ಟಿದ್ದು ಇದೇ ಕಾಲೇಜು ಮೈದಾನದಲ್ಲಿ. ಆ ವೇಳೆ ನಾನೂ ಪಾಲ್ಗೊಂಡಿದ್ದೆ ಎಂಬುದನ್ನು ನೆನಪಿಸಿಕೊಂಡರೆ ಖುಷಿಯಾಗುತ್ತೆ. ಇನ್ನು, “ಭೂಮಿಪುತ್ರ’ ಟೈಟಲ್ ಪವರ್‌ಫುಲ್ ಎನಿಸಿದೆ. ಬದುಕಿ ರುವ ವ್ಯಕ್ತಿಯ ಕುರಿತ ಪಾತ್ರ ಮಾಡಲು ಹಿಂಜರಿದಿದ್ದೆ. ಆದರೆ, ಕುಮಾರಸ್ವಾಮಿ ಅವರು ಜನರಿಗೆ ತೋರಿರುವ ಪ್ರೀತಿ, ಬಡವರ ಮೇಲಿನ ಕಾಳಜಿ,ಅನೇಕ ಯೋಜನೆಗಳ ಅನುಷ್ಠಾನ ಇವೆಲ್ಲವೂ ಎಲ್ಲರಿಗೂ ಗೊತ್ತು. ಉತ್ತಮ ಕಾರ್ಯ ಮಾಡಿರುವ ಅವರ ಪಾತ್ರ ಮಾಡಲು ಒಪ್ಪಿದೆ. ನಾನು ಸಿಎಂ ಆಗಿ ಎರಡನೇ ಸಲ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದೇನೆ. ಎಂದರು ಅರ್ಜುನ್ ಸರ್ಜಾ.
ಚಿತ್ರಕ್ಕೆ ಚಾಲನೆ ನೀಡಿದ ದೇವೇಗೌಡರು, “ಕುಮಾರಸ್ವಾಮಿ ಅವರ ದಿನಚರಿ ಮತ್ತು 20 ತಿಂಗಳ ಅಧಿಕಾರದ ಅವಧಿಯ ಸಿನಿಮಾ ಮಾಡುತ್ತಿರುವುದು ಸಂತಸ ತಂದಿದೆ. ನಾನು ಎಲ್ಲಿಗೇ ಹೋದರೂ ಜನರು ಕುಮಾರಸ್ವಾಮಿ ಅವರ ಹೋರಾಟ ಬಗ್ಗೆ ಮಾತನಾಡುತ್ತಾರೆ. ಇನ್ನೊಮ್ಮೆ ಅವಕಾಶ ಕೊಡುವ ಬಗ್ಗೆಯೂ ಚರ್ಚಿಸುತ್ತಿದ್ದಾರೆ. ಇಂಥಾ ಸಮಯದಲ್ಲೇ ಅವರ ಕುರಿತ ಚಿತ್ರ ತಯಾರಾಗುತ್ತಿದೆ. ನಾನು ಕಥೆ ಕೇಳಿಲ್ಲ. ನಿರ್ದೇಶಕರು ನಮ್ಮ ಬ್ಯಾನರ್‌ನಲ್ಲಿ ಎರಡು ಸಿನಿಮಾ ಮಾಡಿದ್ದಾರೆ. ಈ ಚಿತ್ರವನ್ನೂ ಚೆನ್ನಾಗಿ ಮಾಡುತ್ತಾರೆ ಎಂಬ ನಂಬಿಕೆ ಇದೆ. ಚಿತ್ರಕ್ಕೆ ಶುಭವಾಗಲಿ’ ಅಂತ ಹಾರೈಸಿದರು ಅವರು.
ಅಂದು ನಿರ್ದೇಶಕ ಎಸ್.ನಾರಾಯಣ್ ಅವರು, ಕುಮಾರಸ್ವಾಮಿ ಕುರಿತ ಸಿನಿಮಾ ಮಾಡೋಕೆ ಕಾರಣವೇನು, ಅವರನ್ನು ಒಪ್ಪಿಸಿದ್ದು ಹೇಗೆ, ತಮ್ಮ ವೃತ್ತಿ ಬದುಕಿನಲ್ಲಿ ಈ ಸಿನಿಮಾ ಎಂಥದ್ದು ಎಂಬ ಕುರಿತು ಹೇಳಿದ್ದನ್ನು ಸಣ್ಣದ್ದೊಂದು ವಿಡಿಯೋ ಮೂಲಕ ತೋರಿಸಲಾಯಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಸಂಸದ ಪುಟ್ಟರಾಜು, ನಿರ್ಮಾಪಕ ಪ್ರಭುಕುಮಾರ್, ಛಾಯಗ್ರಾಹಕ ಕೆ.ಹೆಚ್.ದಾಸ್ ಇತರರು ಇದ್ದರು.