ಹುಬ್ಬಳ್ಳಿ: ಮಹದಾಯಿ ಚಿಂತೆ ಬಿಡಿ, ಕುಡಿಯುವ ಉದ್ದೇಶಕ್ಕೆ ಮಹದಾಯಿಯಿಂದ ನೀರು ತರುವ ಜವಾಬ್ದಾರಿ ನಮ್ಮದು. ಇದರಲ್ಲಿ ಯಾವುದೇ ಅನುಮಾನ, ಗೊಂದಲಗಳಿಗೆ ಕಿವಿಗೊಡಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಉತ್ತರ ಕರ್ನಾಟಕ ಜನತೆಗೆ ಮನವಿ ಮಾಡಿದರು.
ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಮಹದಾಯಿಯಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ 7.56 ಟಿಎಂಸಿ ಅಡಿಯಷ್ಟು ನೀರು ನೀಡಿಕೆ ಕುರಿತಾಗಿ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ದಿಲ್ಲಿಯಲ್ಲಿ ಡಿ.20ರಂದು ಸುಮಾರು ಒಂದು ತಾಸು ಮಹತ್ವದ ಸಭೆಯಾಗಿದ್ದು, ಸಭೆ ಫಲಪ್ರದವಾಗಿದೆ ಎಂದರು.
ಕುಡಿಯುವ ಉದ್ದೇಶಕ್ಕಾಗಿ ನೀರು ನೀಡಲು ಗೋವಾದ ಆಕ್ಷೇಪ ಇಲ್ಲವೆಂದು ಅಲ್ಲಿನ ಮುಖ್ಯಮಂತ್ರಿ ಮನೋಹರ ಪರೀಕ್ಕರ್ ಡಿ.21ರಂದು ಪತ್ರ ಬರೆದು ಫ್ಯಾಕ್ಸ್ ಮೂಲಕ ತಮಗೆ ಪತ್ರ ಕಳುಹಿಸಿದ್ದಾರೆಂದು ಪತ್ರವನ್ನು ಸಾರ್ವಜನಿಕರಿಗೆ ತೋರಿಸಿದರು. ಬರಪೀಡತ ಉತ್ತರ ಕರ್ನಾಟಕಕ್ಕೆ ಕುಡಿಯುವ ನೀರಿನ ಉದ್ದೇಶಕ್ಕೆ ಮಹದಾಯಿ ನ್ಯಾಯಾಧಿಕರಣದ ನಿಯಮಗಳಿಗೆ ಒಳಪಟ್ಟು ಮಾನವೀಯತೆ ದೃಷ್ಟಿಯಿಂದ ಕುಡಿಯುವ ನೀರು ನೀಡಲು ಗೋವಾದ ಸಹಕಾರ ಇದೆ ಎಂದು ಹೇಳಿದ್ದಾರೆ ಎಂದರು.
ಗೋವಾ ಮುಖ್ಯಮಂತ್ರಿ ಬರೆದಿರುವ ಪತ್ರ ಇಲ್ಲಿದೆ. ಈ ಕುರಿತಾಗಿ ಕೆಲವರು ಇಲ್ಲಸಲ್ಲದ ಗೊಂದಲ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದು, ಅದಕ್ಕೆ ಕಿವಿಗೊಡಬೇಡಿ. ಕುಡಿಯುವ ಉದ್ದೇಶಕ್ಕೆ ಮಹದಾಯಿಯಿಂದ ನೀರು ತರುವ ಜವಾಬ್ದಾರಿ ನಾನು ಸೇರಿದಂತೆ ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ ಮೇಲಿದೆ. ಅದನ್ನು ಮಾಡುತ್ತೇವೆ. ನಮ್ಮ ಮೇಲೆ ವಿಶ್ವಾಸವಿಡಿ ಎಂದು ಮನವಿ ಮಾಡಿದರು.
ಕಳಸಾ-ಬಂಡೂರಿ ನಾಲಾ ಯೋಜನೆಗೆ ನಾನು ಉಪಮುಖ್ಯಮಂತ್ರಿ ಆಗಿದ್ದಾಗ 100 ಕೋಟಿ ರೂ. ನೀಡಿದ್ದೆ. ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬರಲು ಒಪ್ಪದಿದ್ದರೂ ನಾವೆಲ್ಲ ಬಂದು ಕಳಸಾ-ಬಂಡೂರಿ ನಾಲಾ ಯೋಜನೆಗೆ ಚಾಲನೆ ನೀಡಿದ್ದೆವು ಎಂಬುದನ್ನು ಸಿಎಂ ಮರೆಯಬಾರದು. ಮಹದಾಯಿ ವಿವಾದವಾಗಲು ಕಗ್ಗಂಟು ರೂಪ ಪಡೆಯಲು ಕಾಂಗ್ರೆಸ್ ಪ್ರಮುಖ ಕಾರಣ. ಈ ಹಿಂದೆ ಸೋನಿಯಾ ಗಾಂಧಿ ಅವರು ಗೋವಾ ಚುನಾವಣೆ ವೇಳೆ ಕರ್ನಾಟಕಕ್ಕೆ ಮಹದಾಯಿ ಹನಿ ನೀರು ನೀಡುವುದಿಲ್ಲ ಎಂದಿದ್ದರು. ಡಾ.ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಮಹದಾಯಿ ವಿಚಾರ ಸುಪ್ರೀಂ ಕೋರ್ಟ್‌ಗೆ ಹೋಯಿತು, ನ್ಯಾಯಾಧೀಕರಣ ರಚನೆಯಾಯಿತು. ಇಷ್ಟೆಲ್ಲಾ ಕಾಂಗ್ರೆಸ್‌ನಿಂದಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹದಾಯಿ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸದ ಮೂಲಕ ಜನತೆಯನ್ನು ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 1 ಲಕ್ಷ ಕೋಟಿ ರೂ.ಗಳ ಹಣ ನೀಡಲಿದೆ ಎಂದರು.