ಬೆಂಗಳೂರು: ತಂತ್ರಜ್ಞಾನ ಆಧಾರಿತ ಸ್ವಯಂ ಪ್ರೇರಿತವಾಗಿ ಸ್ವಚ್ಛ ಸಾಮರ್ಥ್ಯವಿರುವ ಇ – ಶೌಚಾಲಯವನ್ನು ಉಳಿಸಿಕೊಳ್ಳುವುದೇ ಬಿಬಿಎಂಪಿಗೆ ತಲೆನೋವಾಗಿದೆ.
ಸುಧಾರಿತ ತಂತ್ರಜ್ಞಾನದ ಶೌಚಾಲಯದಿಂದ ನೀರಿನ ಉಳಿಕೆಯೂ ಆಗುತ್ತಿದೆ. ಸಾಮಾನ್ಯ ಶೌಚಾಲಯದಲ್ಲಿ 5ರಿಂದ 6 ಲೀಟರ್ ನೀರು ಫ್ಲಶ್‌ನಲ್ಲಿ ಹೋಗುತ್ತದೆ. ಇ-ಶೌಚಾಲಯದಲ್ಲಿ ಫ್ಲಶ್‌ಗೆ 1.5 ಲೀಟರ್ ನೀರು ಸಾಕು. ಹಾಗೆಯೇ ಇದನ್ನು 3.4 ಗ್ರೇಡ್ ಸ್ಟೀಲ್ ಯೂನಿಟ್ ನಿಂದ ತಯಾರಿಸಲಾಗಿದೆ. ಹೀಗಾಗಿ, ಇದು ತುಕ್ಕು ಸಹ ಹಿಡಿಯುವುದಿಲ್ಲ ಹಾಗೂ ಇದನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬದಲಾಯಿಸಬಹುದು. ಇಷ್ಟೆಲ್ಲ ತಂತ್ರಜ್ಞಾನವಿರುವ ಶೌಚಾಲಯಗಳು ಕೆಟ್ಟು ನಿಲ್ಲುತ್ತಿರುವುದು ಇದರ ಗುಣಮಟ್ಟದ ಬಗ್ಗೆಯೇ ಪ್ರಶ್ನೆ ಮಾಡುವಂತಾಗಿದೆ. ಆದರೆ, ಇ-ಶೌಚಾಲಯನ್ನು ಸಾರ್ವಜನಿಕರು ಸರ್ಮಪಕವಾಗಿ ಬಳಸದಿರುವುದೇ ಪ್ರಮುಖ ಕಾರಣ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
ಇ- ಶೌಚಾಲಯವನ್ನು 1,2 ಅಥವಾ 5ರೂ. ನಾಣ್ಯಗಳನ್ನು ಹಾಕಿ ಬಳಸಬಹುದು. ಕೆಲವರು ಈ ಹಣ ಉಳಿತಾಯ ಮಾಡಲು ಇ-ಶೌಚಾಲಯದ ಬಾಗಿಲಿಗೆ ಕಲ್ಲು , ದಾರ ಕಟ್ಟುವಂತಹ ‘ಕುತಂತ್ರ’ಕ್ಕೆ ಕೈ ಹಾಕಿದ್ದರಿಂದ ಇ-ಶೌಚಾಲಯಗಳು ಕೆಟ್ಟುನಿಲ್ಲುತ್ತಿವೆ. ಹತ್ತು ಜನ ಬಳಸಿದ ಕೂಡಲೇ ಶೌಚಾಲಯದಲ್ಲಿ ಅಳವಡಿಸಿರುವ ತಂತ್ರಜ್ಞಾನದ ಸಹಾಯದಿಂದ ಶೌಚಾಲಯ ತನ್ನಿಂದ ತಾನೇ ಸ್ವಚ್ಛ ವಾಗುತ್ತದೆ. ಆದರೆ, ಶೌಚಾಲಯದ ಬಾಗಿಲು ತೆರೆದೇ ಇರುವುದರಿಂದ ಇದು ಹಾಳಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.
ಬಿಬಿಎಂಪಿ ಮೊದಲ ಹಂತದಲ್ಲಿ 87 ಮತ್ತು ಎರಡನೇ ಹಂತದಲ್ಲಿ 82 ಇ- ಶೌಚಾಲಯವನ್ನು ಪರಿಚಯಿಸಿತ್ತು. ಎಲ್ಲೆಂದರಲ್ಲಿ ಜನ ಮೂತ್ರ ವಿರ್ಸಜನೆ ಮಾಡುವುದು ಇ- ಶೌಚಾಲಯ ಪರಿಚಯಿಸಿದ ಮೇಲೆ ಕಡಿಮೆಯಾಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಸಾರ್ವಜನಿಕರು ಇ- ಶೌಚಾಲಯವನ್ನು ಬಳಸದೆ ಅದರ ಹಿಂದೆ ಹೋಗಿ ಮೂತ್ರ ವಿರ್ಸಜನೆ ಮಾಡುತ್ತಿರುವುದರಿಂದ ಇ-ಶೌಚಾಲಯದ ಸೆನ್ಸಾರ್‌ಗಳು ಹಾಳಾಗುತ್ತಿವೆ!
Advertisement
ಬಿಬಿಎಂಪಿ ಕಳೆದ ಎರಡು ವರ್ಷಗಳ ಹಿಂದೆ ಸಾರ್ವಜನಿಕರ ಶೌಚಾಲಯ ಬಾಧೆ ತಪ್ಪಿಸುವ ಉದ್ದೇಶದಿಂದ ಮತ್ತು ಪರಿಸರ ಸ್ನೇಹಿ ಮತ್ತು ಸಾರ್ವಜನಿಕರ ತುರ್ತು ಅಗತ್ಯಕ್ಕೆ ಪೂರಕವಾಗಿ ಇವುಗಳನ್ನು ನಿರ್ಮಿಸಲಾಗಿತ್ತು. ಎರಡು ಹಂತಗಳಲ್ಲಿ 169 ಕಡೆ ಇ-ಶೌಚಾಲಯವನ್ನು ಪ್ರಾರಂಭಿಸಿತ್ತು. ಆದರೆ, ಇವು ಕೆಲವು ಕಡೆ ಕೆಟ್ಟು ನಿಂತರೆ, ಇನ್ನೂ ಕೆಲವೆಡೆ ಸಾರ್ವಜನಿಕರೇ ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ.
Related Articles
Advertisement
ಈ ಎಲ್ಲಾ ಕಾರಣಗಳಿಗಾಗಿ ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲೂ ಬೆಂಗಳೂರು ಉತ್ತಮ ರ್‍ಯಾಂಕ್ ಗಳಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಮೂರು ವರ್ಷಗಳಿಂದಲೂ ಬಯಲು ಬಹಿರ್ದೆಸೆ ಕಾರಣಕ್ಕೆ ಹೆಚ್ಚಿನ ಅಂಕ ಪಡೆಯುವುದು ಸಾಧ್ಯವಾಗುತ್ತಿಲ್ಲ. ಇ-ಶೌಚಾಲಯ ಯೋಜನೆಗಳ ಹೊರತಾಗಿಯೂ ಈ ಬಾರಿ 194ನೇ ರ್‍ಯಾಂಕ್‌ಗೆ ಬೆಂಗಳೂರು ತೃಪ್ತಿ ಪಟ್ಟಿದೆ. ಕೆಲವು ಕಡೆ ಹೇಳಿಕೊಳ್ಳುವಂತ ಸ್ವಚ್ಛತೆ ಇ-ಶೌಚಾಲಯಗಳಲ್ಲಿ ಇಲ್ಲ. ಮಹಿಳೆಯರಿಗೆ ಮತ್ತು ಪುರುಷರಿಗೆ ಇಲ್ಲಿ ಪ್ರತ್ಯೇಕ ವಿಭಾಗಗಳು ಇಲ್ಲದಿರುವುದರಿಂದ ಮಹಿಳೆಯರು ಇದರಿಂದ ದೂರವೇ ಉಳಿಯುತ್ತಿದ್ದಾರೆ.
ಉದ್ಯೋಗಿಗಳು ಹೆಚ್ಚಿರುವ ಭಾಗಗಳಲ್ಲಿ ಇದರ ಬಳಕೆ ಸರ್ಮಪಕವಾಗಿದೆ. ಅಲ್ಲಿ ಶೌಚಾಲಯಗಳು ಸ್ವಚ್ಛ ವಾಗಿಯೂ ಇದೆ. ಈ ಹಿನ್ನೆಲೆಯಲ್ಲಿ ಸರ್ಮಪಕವಾಗಿ ಬಳಕೆಯಾಗದ ಕಡೆಯಿಂದ ಬೇರೆಡೆ ಸ್ಥಳಾಂತರವಾಗುತ್ತಿವೆ.
ಎರಡು ಇ-ಶೌಚಾಲಯಗಳ ಸ್ಥಾಳಾಂತರ: ಶೌಚಾಲಯವನ್ನು ಹಾಳು ಮಾಡುತ್ತಿರುವ ದೂರುಗಳು ಹೆಚ್ಚು ಕೇಳಿ ಬರುತ್ತಿರುವ ಹಿನ್ನೆಲೆ ಮತ್ತು ವಿವಿಧ ಕಾರಣಗಳಿಂದ ಕೆಲವು ಪ್ರದೇಶಗಳಿಂದ ಅದನ್ನು ಬೇರೆಡೆಗೆ ಸ್ಥಾಳಾಂತರ ಮಾಡಲು ಬಿಬಿಎಂಪಿ ಮುಂದಾಗಿದ್ದು, ಗಂಗೇನಹಳ್ಳಿ ಸ್ಕೈವಾಕ್ ನಿಂದ ಕಾಮಾಕ್ಷಿಪಾಳ್ಯಕ್ಕೆ ಮತ್ತು ಜಯನಗರದ ಮಹದೇವ ಪಾರ್ಕ್‌ನಿಂದ ರಾಜೀವ್‌ಗಾಂಧಿ ಆಸ್ಪತ್ರೆಯ ಆವರಣಕ್ಕೆ ಇ-ಶೌಚಾಲಯವನ್ನು ಬದಲಾಯಿಸಲಾಗಿದೆ. ಇನ್ನು ಹಲವು ಶೌಚಾಲಯವನ್ನು ಬದಲಾಯಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.
‘ಚಿಲ್ಲರೆ’ ಮನಸ್ಥಿತಿ!: ಇದರಲ್ಲಿ ಇರುವ ಸಣ್ಣ ಪ್ರಮಾಣದ ಹಣವನ್ನು ಜನ ಬಿಡದೆ ಕಳ್ಳತನ ಮಾಡಿದ ಉದಾಹರಣೆಗಳೂ ಇವೆ. ನಗರದ ಹಲವು ಇ-ಶೌಚಾಲಯದಲ್ಲಿ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
ಸಾರ್ವಜನಿಕರೇ ಇದನ್ನು ಸರ್ಮಪಕವಾಗಿ ಬಳಸಲು ಮುಂದಾಗಬೇಕು. ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಉತ್ತಮವಾಗಿ ಬಳಸದ ಕಡೆಗಳಿಂದ ಬದಲಾಯಿಸದಿದ್ದರೆ ಅವು ಮತ್ತಷ್ಟು ಹಾಳಾಗಲಿವೆ. ● ಸುರೇಶ್, ಕಾರ್ಯನಿರ್ವಾಹಕ ಎಂಜಿನಿಯರ್, ಬಿಬಿಎಂಪಿ
●ಹಿತೇಶ್ ವೈ