Advertisement

ಜಿಲ್ಲೆ ಹಿಪ್ಪುನೇರಳೆಗೆ ಆಂಧ್ರ ಹುಳು ಕಾಟ!

01:20 PM Apr 23, 2020 | mahesh |

ಚಿಕ್ಕಬಳ್ಳಾಪುರ: ಕೋವಿಡ್ ಸಂಕಷ್ಟದಿಂದ ಇಡೀ ದೇಶವೇ ಲಾಕ್‌ಡೌನ್‌ ಆಗಿ ಬೆಳೆದ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ಬೇಡಿಕೆ ಇಲ್ಲದೇ ರೈತಾಪಿ ಕೃಷಿ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ರೇಷ್ಮೆ ಬೆಳೆಗಾರರಿಗೆ ಹೊಸ ತಲೆ ನೋವು ಶುರುವಾಗಿದೆ. ಬೆವರು ಸುರಿಸಿ ಬೆಳೆದು ಕಾಟಾವಿಗೆ ಬಂದಿರುವ ಹಿಪ್ಪುನೇರಳೆ ಸೊಪ್ಪಿಗೆ ಈಗ ಕೀಟ ಬಾಧೆ ಕಾಣಿಸಿಕೊಂಡಿದೆ. ಮೊದಲೇ ಲಾಕ್‌ ಡೌನ್‌ನಿಂದ ರೇಷ್ಮೆಗೂಡು ಮಾರಾಟಕ್ಕೆ ಹರಸಾಹಸ ಪಡುತ್ತಾ ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ರೇಷ್ಮೆ ಬೆಳೆಗಾರರಿಗೆ
ಕೀಟಬಾಧೆ ನಿದ್ದೆಗೆಡಿಸಿದ್ದು ತೋಟಗಳಲ್ಲಿ ಅಪಾರ ಪ್ರಮಾಣದ ಹಿಪ್ಪುನೇರಳೆ ಸೊಪ್ಪು ಈಗ ಕೈಗೆ ಬಾರದಂತಹ ಸ್ಥಿತಿ ತಲುಪುವಂತಾಗಿದೆ.

Advertisement

ನೆರೆಯ ಆಂಧ್ರಪ್ರದೇಶದಲ್ಲಿ ಹಲವು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಈ ಕೀಟ, ಈಗ ರಾಜ್ಯಕ್ಕೂ ಪ್ರವೇಶಿಸಿದ್ದು ಜಿಲ್ಲೆಯ ಶಿಡ್ಲಘಟ್ಟ ರೇಷ್ಮೆ ಬೆಳೆಗಾರರನ್ನು ಕಂಗಾಲಾಗಿಸಿದೆ. ಒಂದೆಡೆ ಬರ ಮತ್ತೂಂದಡೆ ಕೋವಿಡ್ ಲಾಕ್‌ಡೌನ್‌ನಿಂದ ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿರುವ ಜಿಲ್ಲೆಯ ರೈತರಿಗೆ ರೇಷ್ಮೆ ಗೂಡು ಉತ್ಪಾದನೆಗೆ ಅವಶ್ಯಕವಾದ ಹಿಪ್ಪು ನೇರಳೆ ಸೊಪ್ಪಿಗೆ ಕೀಟಬಾಧೆ ಕಾಣಿಸಿಕೊಂಡಿದ್ದು ರಾತ್ರಿ ವೇಳೆ ತೋಟಗಳಿಗೆ ದಾಳಿ ಇಡುತ್ತಿರುವ ಈ ಕೀಟಗಳ ದಾಳಿಯಿಂದ ಹಲವು ತಿಂಗಳ ಬೆವರಿನ ಶ್ರಮ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಜಿಲ್ಲೆಯಲ್ಲಿ ನಿತ್ಯ 25 ರಿಂದ 30 ಟನ್‌ ರೇಷ್ಮೆಗೂಡು ಉತ್ಪಾದನೆ ಆಗುತ್ತಿದ್ದು ಲಾಕ್‌ಡೌನ್‌ನಿಂದ ಉತ್ಪಾದನೆ ಇಳಿಮುಖವಾದರೂ ಬೆಳೆದ ರೇಷ್ಮೆಗೂಡು ಮಾರಾಟಕ್ಕೆ ರೈತರು ಪರದಾಡುವಂತಾಗಿದೆ.

ಇರುಳಲ್ಲಿ ಮಾತ್ರ ಕಾಣಿಸುತ್ತವೆ
ಹಿಪ್ಪುನೇರಳೆ ಸೊಪ್ಪಿಗೆ ಸದ್ಯ ಆವರಿಸಿರುವ ಕೀಟಗಳು ಹಗಲಿನಲ್ಲಿ ಇರದೇ ಕೇವಲ ರಾತ್ರಿ ಹೊತ್ತು ಮಾತ್ರ ತೋಟಗಳಿಗೆ ಲಗ್ಗೆ ಇಟ್ಟು ಬೆಳೆದು ನಿಂತು ಕಾಟಾವಿಗೆ ಬಂದಿರುವ ರೇಷ್ಮೆ ಸೊಪ್ಪು ತಿಂದು ಹಾಳು ಮಾಡುತ್ತಿವೆ. ಇದು ಬೆಳೆಗಾರರನ್ನು ಆತಂಕಕ್ಕೀಡು ಮಾಡಿದ್ದು, ಕೃಷಿ ತಜ್ಞರು ಕೀಟ ಭಾದೆ ತಡೆಗೆ ಕ್ರಮ ವಹಿಸಬೇಕೆಂದು ಆಗ್ರಹ ರೇಷ್ಮೆ ಬೆಳೆಗಾರರಿಂದ ಕೇಳಿ ಬರುತ್ತಿದೆ.

ಇತ್ತೀಚೆಗೆ ಈ ಮಾದರಿ ಹುಳುಗಳು ಪಕ್ಕದ ಆಂಧ್ರಪ್ರದೇಶದಲ್ಲಿ ಕಾಣಿಸಿಕೊಂಡಿದ್ದವು. ಆಗಲೇ ನಾವು ರಾಜ್ಯದ ರೇಷ್ಮೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ಹಾಗೂ ಕೃಷಿ ತಜ್ಞರಿಗೆ ಮಾಹಿತಿ ನೀಡಿದ್ದವು. ರೇಷ್ಮೆ ಆಯುಕ್ತರಿಗೆ ಈ ವಿಚಾರ ತಿಳಿಸಲಾಗಿದೆ. ಅಧಿಕಾರಿಗಳು ಕೀಟಬಾಧೆ ನಿಯಂತ್ರಣಕ್ಕೆ ಕೂಡಲೇ ಕ್ರಮ ವಹಿಸಬೇಕು.
● ಭಕ್ತರಹಳ್ಳಿ ಬೈರೇಗೌಡ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ

ಕಾಗತಿ ನಾಗರಾಜಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next