ಮುಂಬಯಿ: ಕಳೆದ 25 ವರ್ಷಗಳಿಂದ ವರ್ಲಿ ಪರಿಸರದಲ್ಲಿ ಧಾರ್ಮಿಕ ಸೇವಾ ನಿರತವಾಗಿದ್ದ ವರ್ಲಿಯ ಅಪ್ಪಾಜಿಬೀಡು ಫೌಂಡೇಶನಿನ ಬೆಳ್ಳಿ ಹಬ್ಬ ಸಮಾರಂಭ ಹಾಗೂ 25 ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆಗೆ ಈಗಾಗಲೇ ಸಿದ್ದತೆಗಳು ನಡೆಯುತ್ತಿದ್ದು, ಈ ಧಾರ್ಮಿಕ ಸಮಾರಂಭಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಡೆ ಅವರನ್ನು ಮೇ. 17 ರಂದು ಭೇಟಿಯಿತ್ತು ಆಮಂತ್ರಿಸಲಾಯಿತು.
ಡಿ. 30 ರಂದು ಮಹಾನಗರದ ದಾದರ್‌ನ ಕಾಮ್‌ಗಾರ್ ಮೈದಾನದಲ್ಲಿ ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಬೆಳ್ಳಿಹಬ್ಬ ಸಮಾರಂಭಕ್ಕೆ ಸುಮಾರು ಹತ್ತು ಸಾವಿರದಿಂದ ಹದಿನೈದು ಸಾವಿರ ಭಕ್ತಾಭಿಮಾನಿಗಳು ಸೇರುವ ನೀರೀಕ್ಷೆಯಿದ್ದು ಭರದಿಂದ ಸಿದ್ದತೆ ನಡೆಯುತ್ತಿದೆ.
ಅಪ್ಪಾಜಿಬೀಡು ಪೌಂಡೇಶನಿನ ಸಂಸ್ಥಾಪಕ ಪಡುಬಿದ್ರೆ ಬೇಂಗ್ರೆ ರಮೇಶ್ ಗುರುಸ್ವಾಮಿ, ಅಧ್ಯಕ್ಷರಾದ ಕೇದಗೆ ಸುರೇಶ್ ಶೆಟ್ಟಿ, ಬೆಳ್ಳಿ ಹಬ್ಬ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷರಾದ ಬಿ. ದಿನೇಶ್ ಕುಲಾಲ…, ರತ್ನ ಡಿ. ಕುಲಾಲ…, ಗೋವಾದ ಹೊಟೇಲ್ ಉದ್ಯಮಿ ಹರೀಶ್ ಸಾಲ್ಯಾನ್ ಉಪಸ್ಥಿತರಿದ್ದು ವರ್ಲಿ ಅಪ್ಪಾಜಿಬೀಡು ಪೌಂಡೇಶನಿನ 25 ವರ್ಷಗಳ ಧಾರ್ಮಿಕ ಸೇವೆಯ ಬಗ್ಗೆ ವಿವರಿಸಿದರು.
ಅಪ್ಪಾಜಿಬೀಡು ಫೌಂಡೇಶನಿನ ವಿವರವನ್ನು ತಿಳಿದ ಪದ್ಮಭೂಷಣ ರಾಜಶ್ರೀ ಡಾ| ವೀರೇಂದ್ರ ಹೆಗ್ಡೆಯವರು, ಡಿಸೆಂಬರ್ ಕೊನೆಯಲ್ಲಿ ಧರ್ಮಸ್ಥಳದಲ್ಲಿ ವಿಶೇಷ ಕಾರ್ಯವಿರುದರಿಂದ ಅಂದು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಅನಾನುಕೂಲವಾಗಿದ್ದು, ಈ ಧಾರ್ಮಿಕ ಕಾರ್ಯ ಕ್ರಮಗಳು ಅದ್ದೂರಿಯಾಗಿ ನೆರವೇರಲಿ. ಮಹಾ ನಗರದಲ್ಲಿನ ಸರ್ವಭಾಷಿಗಳು ಈ ಬೆಳ್ಳಿಹಬ್ಬ ಸಮಾರಂಭ ಹಾಗೂ ಅಯ್ಯಪ್ಪ ಮಹಾ ಪೂಜೆಯಲ್ಲಿ ಭಾಗಿಯಾಗಿ ಎಲ್ಲಾ ಕಾರ್ಯ ಕ್ರಮಗಳು ಅದ್ದೂರಿಯಾಗಿ ನಡೆಯಲಿ ಎಂದು ಅವರು ಶುಭ ಹಾರೈಸಿದರು.