ವಾಷಿಂಗ್ಟನ್: ಮಾರಣಾಂತಿಕ ಕೋವಿಡ್ ಮಹಾಮಾರಿ ಜಗತ್ತಿನಾದ್ಯಂತ ಮರಣ ಮೃದಂಗ ಮುಂದುವರಿಸಿದ್ದು, ವಿಶ್ವಾದ್ಯಂತ ಸೋಮವಾರದವರೆಗೆ ಕೋವಿಡ್ 19 ವೈರಸ್ ಗೆ ಬರೋಬ್ಬರಿ 18.5 ಲಕ್ಷ ಜನರು ಸೋಂಕು ಪೀಡಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಜಾನ್ಸ್ ಹೋಪ್ ಕಿನ್ಸ್ ಯೂನಿರ್ವಸಿಟಿ ನೀಡಿರುವ ಅಂಕಿಅಂಶದ ಪ್ರಕಾರ, ಜಾಗತಿಕವಾಗಿ ಕೋವಿಡ್ 19 ವೈರಸ್ ನಿಂದ 18,50,220 ಜನರಿಗೆ ಸೋಂಕು ದೃಢಪಟ್ಟಿದ್ದು, 1,14,215 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.
ವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 5,54,000ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹೋಪ್ ಕಿನ್ಸ್ ಯೂನಿರ್ವಸಿಟಿ ಡಾಟಾ ಮಾಹಿತಿ ನೀಡಿದೆ. ಅಮೆರಿಕದಲ್ಲಿ ಕೋವಿಡ್ ಗೆ 22,079 ಜನರು ಸಾವನ್ನಪ್ಪಿದ್ದಾರೆ. ನ್ಯೂಯಾರ್ಕ್ ನಲ್ಲಿ ದಾಖಲೆ ಎಂಬಂತೆ 1,89,000 ಪ್ರಕರಣ ದಾಖಲಾಗಿದೆ. ಸಾವಿನ ಸಂಖ್ಯೆ 9,385ಕ್ಕೆ ಏರಿದೆ ಎಂದು ವರದಿ ತಿಳಿಸಿದೆ.
ನ್ಯೂಜೆರ್ಸಿಯಲ್ಲಿ ಕೋವಿಡ್ 19 ವೈರಸ್ ನ 61,850 ಪ್ರಕರಣ ದಾಖಲಾಗಿದೆ, 2,350 ಜನರು ಸಾವನ್ನಪ್ಪಿದ್ದಾರೆ. ಅಮೆರಿಕದ ಮಿಚಿಗನ್, ಪೆನ್ಸೆಲೆವೇನಿಯಾ, ಮೆಸಾಸುಚೆಸೆಟ್ಸ್, ಕ್ಯಾಲಿಫೋರ್ನಿಯಾ, ಇಲಿನಾಯ್ಸ್ ಮತ್ತು ಲೂಸಿಯಾನಾದಲ್ಲಿ 20 ಸಾವಿರಕ್ಕೂ ಅಧಿಕ ಕೋವಿಡ್ ಪ್ರಕರಣ ದಾಖಲಾಗಿದೆ ಎಂದು ವರದಿ ವಿವರಿಸಿದೆ.
ಕೋವಿಡ್ 19 ವೈರಸ್ ಗೆ ಸಂಬಂಧಿಸಿದಂತೆ ಅಮೆರಿಕ ಈಗಾಗಲೇ ಸ್ಪೇನ್ ಮತ್ತು ಇಟಲಿಯನ್ನು ಮೀರಿಸಿದ್ದು, ಅತೀ ಹೆಚ್ಚು ಕೋವಿಡ್ ಸೋಂಕಿತರ ಸಂಖ್ಯೆ ಅಮೆರಿಕದಲ್ಲಿ ದಾಖಲಾಗಿದೆ.