Advertisement

ವಿಶ್ವದ ಮೊದಲ ಜೇನಿನ ಟೂತ್‌ಪೇಸ್ಟ್‌ ಮಾರುಕಟ್ಟೆಗೆ ಬರಲು ಅಣಿ

12:24 PM Jun 05, 2022 | Team Udayavani |

ಹುಬ್ಬಳ್ಳಿ: ಕೆಲ ಕಂಪೆನಿಗಳು ತಮ್ಮ ಟೂತ್‌ಪೇಸ್ಟ್‌ನಲ್ಲಿ ಜೇನು ಬೆರೆಸಿದ್ದೇವೆ ಎಂದು ಹೇಳಿಕೊಳ್ಳುತ್ತಿವೆ. ಆದರೆ, ಪೂರ್ತಿಯಾಗಿ ಜೇನುತುಪ್ಪದಿಂದಲೇ ಟೂತ್‌ಪೇಸ್ಟ್‌ವೊಂದನ್ನು ತಯಾರಿಸಲಾಗಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರಲು ಅಣಿಯಾಗಿದೆ.

Advertisement

ವಾಸಿಯಾಗದ ಕಾಯಿಲೆಗೆ ವಾಸನದ ವೈದ್ಯ ಎಂದೇ ಖ್ಯಾತರಾಗಿರುವ, ಕ್ಯಾನ್ಸರ್‌ ಸೇರಿದಂತೆ ಅನೇಕ ಮಾರಕ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುವ ಪಾರಂಪರಿಕ ವೈದ್ಯ ಡಾ| ಹನುಮಂತ ಮಳಲಿ ಅವರು ಜೇನುತುಪ್ಪದ ದ್ರವರೂಪದ ಪೇಸ್ಟ್‌ ತಯಾರಿಸಿದ್ದಾರೆ. ರಾಸಾಯನಿಕ ಮುಕ್ತ ಹಾಗೂ ನಿಸರ್ಗದತ್ತ ಪದಾರ್ಥಗಳನ್ನು ಒಳಗೊಂಡ ಜೇನುತುಪ್ಪವೇ ಪ್ರಧಾನವಾಗಿರುವ “ದಂತಾಮೃತ ಬಿಂದು’ ಎಂಬ ಪೇಸ್ಟ್‌ ತಯಾರಿಸಿದ್ದು, ಪ್ರಯೋಗಾಲಯದಿಂದಲೂ ಪರೀಕ್ಷೆಗೊಳಪಟ್ಟು ಅನುಮತಿ ಪಡೆದುಕೊಳ್ಳಲಾಗಿದೆ.

ಪ್ರಯೋಗಶೀಲ ವೈದ್ಯ: ಆಯುರ್ವೇದ ಉಳಿಯಬೇಕು, ನಿಸರ್ಗದತ್ತ ಪದಾರ್ಥಗಳಿಂದ ಉತ್ಪನ್ನಗಳನ್ನು ತಯಾರಿಸಬೇಕು, ಜನರ ಆರೋಗ್ಯಕ್ಕೆ ಇದು ಪ್ರಯೋಜನಕಾರಿ ಆಗಬೇಕು ಎಂಬ ಉದ್ದೇಶದೊಂದಿಗೆ ಡಾ| ಮಳಲಿ ಹಲವು ಪ್ರಯೋಗ ಕೈಗೊಂಡಿದ್ದಾರೆ, ಹಲವು ಉತ್ಪನ್ನ ಅಭಿವೃದ್ಧಿಪಡಿಸಿದ್ದಾರೆ. ಚಮತ್ಕಾರ ಚೂರ್ಣ, ಅಮರನಾಥ ಭಸ್ಮ ಹೀಗೆ ವಿವಿಧ ಉತ್ಪನ್ನಗಳನ್ನು ರೂಪಿಸಿದ್ದು, ಇವುಗಳ ಸಾಲಿಗೆ ಜೇನುತುಪ್ಪದ ಪೇಸ್ಟ್‌ ಸೇರಿಕೊಂಡಿದೆ.

ಸಂಪೂರ್ಣ ದಂತ ಆರೋಗ್ಯ: ದಂತಾಮೃತ ಬಿಂದು ಜೇನು ಪೇಸ್ಟ್‌ ಸಂಪೂರ್ಣ ದಂತ ಆರೋಗ್ಯ ರಕ್ಷಣೆಯದ್ದಾಗಿದ್ದು, ರಾಸಾಯನಿಕ ಮುಕ್ತವಾಗಿದೆ. ಬಾಯಿ ದುರ್ಗಂಧ ತಡೆಗೂ ಸಹಕಾರಿ, ಬಾಯಿ ಹುಣ್ಣಿಗೆ ಪರಿಣಾಮಕಾರಿ ಆಗಲಿದೆಯಂತೆ. ನೊರೆ ಬರುವುದಿಲ್ಲ, ಹೆಚ್ಚಿನ ನೀರು ಬೇಕಾಗುವುದಿಲ್ಲ. ಮಕ್ಕಳು, ವೃದ್ಧರು ಸೇರಿದಂತೆ ಯಾವುದೇ ವಯೋಮಾನದವರು ಬಳಸಬಹುದಾಗಿದೆ. ಒಬ್ಬರು 4-5 ಹನಿಗಳನ್ನು ಬಳಸಬಹುದಾಗಿದೆ. ದಂತಾಮೃತವನ್ನು ವಸಡು ಮತ್ತು ಹಲ್ಲುಗಳಿಗೆ ಹಚ್ಚಿ, ಕೈಯಿಂದ ಇಲ್ಲವೇ ಬ್ರೆಶ್‌ನಿಂದ ಹಲ್ಲುಜ್ಜಬಹುದಾಗಿದೆ.

ಫ‌ಲ ಕೊಟ್ಟಿತು ನಿರಂತರ ಪ್ರಯೋಗ:

Advertisement

ಡಾ| ಹನುಮಂತ ಮಳಲಿ ಅವರಿಗೆ 80 ವರ್ಷದ ವೃದ್ಧರೊಬ್ಬರು ಆ ವಯಸ್ಸಿನಲ್ಲೂ ತಮ್ಮ ಹಲ್ಲು ಗಟ್ಟಿಮುಟ್ಟಾಗಿ ಆರೋಗ್ಯವಾಗಿರುವುದಕ್ಕೆ ನಿತ್ಯ ಜೇನುತುಪ್ಪದಿಂದ ಹಲ್ಲುಜ್ಜುವುದೇ ಕಾರಣ ಎಂದು ಹೇಳಿದ್ದರಂತೆ. ಡಾ| ಮಳಲಿ ಅವರು ಸಹ ಸ್ವತಃ ಜೇನುತುಪ್ಪದಿಂದ ಹಲ್ಲುಜ್ಜಿ ನೋಡಿದ್ದು, ಫಲಿತಾಂಶ ಕಂಡುಬಂದ ನಂತರ ಜೇನುತುಪ್ಪವನ್ನು ಕೆಲವರಿಗೆ ನೀಡಿ ಹಲ್ಲುಜ್ಜಲು ಬಳಸಲು ಸೂಚಿಸಿದ್ದಾರೆ. ಅವರಿಂದಲೂ ಉತ್ತಮ ಫಲಿತಾಂಶದ ಅನಿಸಿಕೆ ವ್ಯಕ್ತವಾಗಿದೆ. ಬಳಿಕ ಜೇನಿಗೆ ಉಪ್ಪು ಸೇರಿಸಿ ಸುಮಾರು 3-6 ತಿಂಗಳು ಪ್ರಯೋಗ ಮಾಡಿದ್ದಾರೆ. ನಂತರ ಜೇನುತುಪ್ಪಕ್ಕೆ ತುಳಸಿರಸ, ಲವಂಗದ ಎಣ್ಣೆ, ಶ್ರೀಗಂಧದ ಎಣ್ಣೆ, ಪಚ್ಚೆ ಕರ್ಪೂರ ಬಳಸಿ ದಂತಾಮೃತ ಬಿಂದು ಪೇಸ್ಟ್‌ ತಯಾರಿಸಿದ್ದಾರೆ.

ರಾಸಾಯನಿಕ ಪದಾರ್ಥಗಳು ಇಂದಿನ ಟೂತ್‌ಪೇಸ್ಟ್‌ಗಳಲ್ಲಿ ಇರುವುದು ಸಾಬೀತಾಗಿದೆ. ಜನರಿಗೆ ರಾಸಾಯನಿಕ ಮುಕ್ತ, ದಂತಗಳ ಪರಿಪೂರ್ಣ ಆರೋಗ್ಯಕ್ಕೆ ಪೂರಕವಾಗುವ ಪೇಸ್ಟ್‌ ತಯಾರಿಸಬೇಕೆಂಬ ಚಿಂತನೆಯೊಂದಿಗೆ ಕೈಗೊಂಡ ಪ್ರಯೋಗ ಯಶಸ್ವಿಯಾಗಿದ್ದು, ಜೇನುತುಪ್ಪದ ದ್ರವರೂಪದ ದಂತಾಮೃತ ಬಿಂದು ಜನರ ದಂತ ಆರೋಗ್ಯ ಸಂರಕ್ಷಕನಾದರೆ, ಜೇನುಕೃಷಿಕರಿಗೆ ಮಹತ್ವದ ಆಸರೆ ಆಗಲಿದೆ. ಮಕ್ಕಳು ಹಲ್ಲುಜ್ಜುವಾಗ ಅದನ್ನು ನುಂಗಿದರೂ ಯಾವುದೇ ಅಪಾಯವಿಲ್ಲ. –ಡಾ| ಹನುಮಂತ ಮಳಲಿ, ಪಾರಂಪರಿಕ ವೈದ್ಯರು

ಇನ್ನೆರಡು ತಿಂಗಳಲ್ಲಿ ಲೋಕಾರ್ಪಣೆ

ದಂತಾಮೃತ ಬಿಂದು ಪೇಸ್ಟ್‌ ಅನ್ನು ಮಧುಮೇಹಿಗಳು ಸಹ ಬಳಸಬಹುದಾಗಿದೆ. ಸುಮಾರು 30 ಎಂಎಲ್‌ ಟ್ಯೂಬ್‌ನಲ್ಲಿ ದಂತಾಮೃತ ಬಿಂದು ಬರಲಿದ್ದು, ಮುಂದಿನ ದಿನಗಳಲ್ಲಿ ಜನರ ಬೇಡಿಕೆ ಆಧರಿಸಿ ಹೆಚ್ಚಿನ ಪ್ರಮಾಣದ ಟ್ಯೂಬ್‌ನಲ್ಲಿ ಹೊರತರಲು ನಿರ್ಧರಿಸಲಾಗಿದೆ. ಪೇಸ್ಟ್‌ಅನ್ನು ಓಂಶಕ್ತಿ ಆಯುರ್ವೇದ ಘಟಕ ಉತ್ಪಾದನೆ ಮಾಡಿದರೆ, ಸ್ವಯಂ ಸಂಜೀವಿನಿ ಮಾರುಕಟ್ಟೆಗೆ ನೀಡುತ್ತಿದೆ. ಇನ್ನೆರಡು ತಿಂಗಳಲ್ಲಿ ಹುಬ್ಬಳ್ಳಿಯಿಂದಲೇ ಮಾರುಕಟ್ಟೆಗೆ ದಂತಾಮೃತ ಬಿಂದು ಲೋಕಾರ್ಪಣೆಗೊಳ್ಳಲಿದೆ.     „ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next