ನುರ್ ಸುಲ್ತಾನ್ (ಕಜಾಕ್‌ಸ್ಥಾನ್): ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರೀಕೋ-ರೋಮನ್ ವಿಭಾಗದಲ್ಲಿ ಭಾರತೀಯರ ವೈಫಲ್ಯ ರವಿವಾರವೂ ಮುಂದು ವರಿದಿದೆ. ಆರ್. ರವಿ ಹೊರತು ಪಡಿಸಿ ಉಳಿದವರೆಲ್ಲ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದರು. ಆದರೆ ರವಿ ದ್ವಿತೀಯ ಸುತ್ತಿ ನಲ್ಲಿ ಹೀನಾಯ ಸೋಲು ಕಾಣಬೇಕಾಯಿತು.
97 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದ ರವಿ ಚೈನೀಸ್ ತೈಪೆಯ ಚೆಂಗ್ ಹಾವೊ ಚೆನ್ ವಿರುದ್ಧ 5-0 ಅಂಕಗಳ ಭರ್ಜರಿ ಮೇಲುಗೈ ಸಾಧಿಸಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದರು. ಇದರೊಂದಿಗೆ ಈ
ಹಂತಕ್ಕೇರಿದ ಏಶ್ಯದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೂ ಪಾತ್ರ ರಾದರು. ಆದರೆ ಇಲ್ಲಿ ಜೆಕ್ ಗಣರಾಜ್ಯದ ಅಪಾಯ ಕಾರಿ ಕುಸ್ತಿಪಟು ಆರ್ಥರ್ ಒಮರೋವ್ ವಿರುದ್ಧ 0-7 ಅಂಕಗಳ ಸೋಲು ಕಾಣಬೇಕಾಯಿತು.
ಭಾರತದ ಉಳಿದಿಬ್ಬರು ಗ್ರೀಕೋ-ರೋಮನ್ ಸ್ಪರ್ಧಿ ಗಳಾದ ಮನೀಷ್ ಎಂ. (67 ಕೆಜಿ) ಮತ್ತು ಸುನೀಲ್ ಕುಮಾರ್ (87 ಕೆಜಿ) ಮೊದಲ ಸುತ್ತಿ ನಲ್ಲೇ ಎಡವಿದರು. ಮನೀಷ್ ಅವರನ್ನು ಬಲ್ಗೇರಿಯಾದ ಡೇವಿಡ್ ಡಿಮಿಟ್ರೋವ್ 10-1 ಅಂತರದಿಂದ ಪರಾಭವ ಗೊಳಿಸಿದರೆ, ಸುನೀಲ್ ಕುಮಾರ್ ಅವರನ್ನು ಅಮೆರಿಕದ ಜೋ ರೋ 6-0 ಅಂತರದಿಂದ ನೆಲಕ್ಕೆ ಕೆಡವಿದರು. ಸುನೀಲ್ ಕುಮಾರ್ ಇದೇ ವರ್ಷದ ಏಶ್ಯನ್ ಕುಸ್ತಿ ಯಲ್ಲಿ ಬೆಳ್ಳಿ ಪದಕ ಜಯಿಸಿದ್ದರು.