Advertisement

ವಿಶ್ವವಿಜೇತೆ ಸಿಂಧುಗೆ ವಿಶ್ರಾಂತಿ ಅಗತ್ಯ

07:13 PM Nov 01, 2019 | Lakshmi GovindaRaju |

ಈ ವಾರದ ತಾರೆಯಾಗಿ ಗುರ್ತಿಸಿಕೊಂಡಿದ್ದು ಪಿ.ವಿ.ಸಿಂಧು. ಇದಕ್ಕೆ ಕಾರಣ ಆಕೆಯ ಸಾಧನೆಯಲ್ಲ, ಕಳಪೆ ಸಾಧನೆ. ಒಂದೆರಡು ತಿಂಗಳ ಹಿಂದೆ ಬ್ಯಾಡ್ಮಿಂಟನ್‌ ವಿಶ್ವಕಪ್‌ ಗೆದ್ದು, ಇಡೀ ದೇಶದಲ್ಲಿ ಸುದ್ದಿಯಾಗಿದ್ದ ಸಿಂಧು, ಅಲ್ಲಿಂದೀಚೆಗೆ ಆಡಿದ ಕೂಟದಲ್ಲೆಲ್ಲ ಸೋಲುತ್ತಿದ್ದಾರೆ. ಅವರ ವಿಶ್ವಕಪ್‌ ಗೆಲುವು ಹಾಗಾದರೆ ಸುಳ್ಳೇ ಎನ್ನುವ ಮಟ್ಟಿಗೆ ಗೊಂದಲವುಂಟಾಗಿದೆ. ಇತ್ತೀಚೆಗೆ ಫ್ರೆಂಚ್‌ ಓಪನ್‌ನ ಎಂಟರಘಟ್ಟದ ಹೋರಾಟದಲ್ಲಿ ದೀರ್ಘ‌ಕಾಲ ಹೋರಾಡಿಯೂ, ಸಿಂಧು ಸೋತಿದ್ದಾರೆ.

Advertisement

ಅವರು ಹೀಗೇಕೆ ವಿಫ‌ಲವಾಗುತ್ತಿದ್ದಾರೆ ಎನ್ನುವುದೇ ಅರ್ಥವಾಗದ ಪ್ರಶ್ನೆ. ಸಿಂಧು ಭಾರತೀಯ ಬ್ಯಾಡ್ಮಿಂಟನ್‌ ಇತಿಹಾಸದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ್ದಾರೆ. ವಿಶ್ವಕಪ್‌ನಲ್ಲಿ 2 ಬೆಳ್ಳಿ, 2 ಕಂಚು, ಒಮ್ಮೆ ಚಿನ್ನ ಗೆದ್ದಿದ್ದಾರೆ. ಬಿಡಬ್ಲ್ಯುಎಫ್ ವಿಶ್ವ ಟೂರ್‌ ಪ್ರಶಸ್ತಿ ಗೆದ್ದ ದೇಶದ ಏಕೈಕ ಕ್ರೀಡಾಪಟು. ಒಲಿಂಪಿಕ್ಸ್‌ನಲ್ಲೂ ಬೆಳ್ಳಿ ಗೆದ್ದಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಅವರು ಸಣ್ಣಮಟ್ಟದ ಕೂಟದಲ್ಲಿ ಮಾತ್ರ ಸತತವಾಗಿ ಕೈಚೆಲ್ಲುತ್ತಿದ್ದಾರೆ.

ಇದೇಕೆ ಹೀಗೆ? ಈ ಕೂಟಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೇ? ಅಥವಾ ಗೆಲ್ಲುವ ಶಕ್ತಿಯನ್ನು ಕಳೆದುಕೊಂಡಿದ್ದಾರೆಯೇ? ನಿರಂತರವಾದ ಆಟ ಅವರನ್ನು ಸುಸ್ತುಗೊಳಿಸಿದೆಯೇ? ಸದ್ಯದ ಸ್ಥಿತಿ ನೋಡಿದರೆ ಸಿಂಧು ವಿಶ್ರಾಂತಿ ತೆಗೆದುಕೊಳ್ಳುವುದೇ ಉತ್ತಮ. ಬ್ಯಾಡ್ಮಿಂಟನ್‌ ವಿಶ್ವಕಪ್‌ನಲ್ಲಿ ಚಿನ್ನ ಗೆಲ್ಲುವುದು ಭಾರತೀಯರ ಕನಸಾಗಿತ್ತು. ಮೊದಲಬಾರಿಗೆ ವಿಶ್ವಕಪ್‌ ಫೈನಲ್‌ಗೇರಿದ್ದು ಸೈನಾ ನೆಹ್ವಾಲ್‌. ಅವರು ಅಲ್ಲಿ ಸೋತು ಬೆಳ್ಳಿ ಪದಕ ಪಡೆದರು.

ಅಲ್ಲಿಂದ ಸೈನಾಗೆ ಅಂತಹದೊಂದು ಸಾಧನೆ ಸಾಧ್ಯವಾಗಲೇ ಇಲ್ಲ. ಸಿಂಧು ಮಾತ್ರ 2 ಬಾರಿ ಫೈನಲ್‌ಗೇರಿ ಸೋತಿದ್ದರು. ಅದೂ ಅದ್ಭುತ ಹೋರಾಟದ ನಂತರ. ಪದೇಪದೆ ಫೈನಲ್‌ನಲ್ಲೇ ಅವರು ಸೋಲುವುದನ್ನು ನೋಡಿದಾಗ, ಇದೇನೋ ಮಾನಸಿಕ ಸಮಸ್ಯೆ ಎಂದು ಭಾವಿಸಿದವರೇ ಹೆಚ್ಚು. ಆದರೆ ಸಿಂಧು ಹೋರಾಟ ನಿಲ್ಲಿಸಲಿಲ್ಲ, ಈ ಬಾರಿ ತಮ್ಮ ಹಿಂದಿನ ತಪ್ಪುಗಳನ್ನೆಲ್ಲ ತಿದ್ದಿಕೊಂಡು ಫೈನಲ್‌ಗೇರಿ, ಸುಲಭವಾಗಿ ವಿಶ್ವಕಪ್‌ ಗೆದ್ದೇ ಬಿಟ್ಟರು.

ಎದುರಾಳಿಗೆ ಸಣ್ಣ ಅವಕಾಶವನ್ನೂ ಕೊಡದೇ, ಅಧಿಕಾರಯುತವಾಗಿ ಗೆದ್ದರು. ಆಗ ಸಿಂಧು ಮತ್ತೆ ವೈಭವದ ದಿನಗಳಿಗೆ ಮರಳಿದರು ಎಂದು ಎಲ್ಲರೂ ಖುಷಿಪಟ್ಟರು. ಆಗಿದ್ದೇ ಬೇರೆ. ಅಲ್ಲಿಂದೀಚೆಗೆ ಅವರು ಗೆಲ್ಲಲೇ ಇಲ್ಲ. ಈ ಸೋಲುಗಳನ್ನು ಸಹಿಸಿಕೊಳ್ಳುವುದು ಸಿಂಧುವಿನಷ್ಟೇ ಅಭಿಮಾನಿಗಳಿಗೂ ಕಷ್ಟ ತಾನೇ?

Advertisement
Advertisement

Udayavani is now on Telegram. Click here to join our channel and stay updated with the latest news.

Next