ಇಂದು ವಿಶ್ವ ಜಲದಿನ. ಹನಿ ನೀರು ಕೂಡ ಅತ್ಯಮೂಲ್ಯ. ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಯಾಗುತ್ತಿದ್ದರೂ ನೀರು ಮಾತ್ರ ನಿಲ್ಲುತ್ತಿಲ್ಲ. ಪ್ರತಿ ವರ್ಷ ವಾಡಿಕೆಯಷ್ಟೇ ಮಳೆ ಬೀಳುತ್ತಿದೆ. ಆದರೆ, ಸುರಿಯುವ ರೀತಿ ಬದಲಾಗಿದೆ. ಈ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಕಾರ್ಯಗಳು ಜರೂರಾಗಿ ಆಗಬೇಕಿದೆ. ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳು ಇಲ್ಲ. ಆದರೆ, ಇರುವ ನದಿಮೂಲಗಳು ಕೂಡ ಕಲುಷಿತವಾಗುತ್ತಿವೆ. ತಾಜ್ಯ ಹಾಗೂ ಕೊಳಚೆ ನೀರಿನಿಂದ ಅರ್ಕಾವತಿ ನದಿ ಹಾಗೂ ನಗರದ ಜೀವನಾಡಿಯಾದ ನಾಗರಕೆರೆ ಮತ್ತಿತರ ಕೆರೆಕಟ್ಟೆಗಳು ಕಲುಷಿತವಾಗುತ್ತಿದೆ. ತುರ್ತಾಗಿ ಅರ್ಕಾವತಿ ನದಿ ಸೇರಿದಂತೆ ಜಿಲ್ಲೆಯ ಕೆರೆಗಳನ್ನು ಸಂರಕ್ಷಿಸಿ ಜಲಮೂಲಗಳನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ.
ದೊಡ್ಡಬಳ್ಳಾಪುರ: ಮಾರ್ಚ್ 22 ವಿಶ್ವ ಜಲದಿನ. ಈ ಬಾರಿ ತಾಲೂಕಿನಲ್ಲಿ ಸಮಾಧಾನಕರ ಮಳೆ ಬಿದ್ದಿದ್ದರೂ ಅಂತರ್ಜಲದ ಮಟ್ಟ ನಿರೀಕ್ಷಿತವಾಗಿ ಏರಿಲ್ಲ. ನೀರಿನ ಸಂರಕ್ಷಣೆ ಜೊತೆಗೆ ಶಾಶ್ವತ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತು ನೀಡುವ ಕೂಗು ಕೇಳಿ ಬರುತ್ತಿದೆ. ತಾಲೂಕಿನಲ್ಲಿ ಯಾವುದೇ ನದಿ ಮೂಲಗಳಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂತರ್ಜಲ ಸ್ಥಿತಿಗತಿ ತುಂಬಾ ಚಿಂತಾಜನಕವಾಗಿದೆ. ನಗರದ ಸುತ್ತಮುತ್ತಲಿನ ಗ್ರಾಮಗಳ ಹಾಗೂ ನಗರಕ್ಕೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿನ ಬೋರ್‌ವೆಲ್‌ಗಳೇ ನೀರಿಗೆ ಆಧಾರವಾಗಿವೆ.
ಅಂತರ್ಜಲ ಮಲಿನ: ಒಂದೆಡೆ ಕೆರೆ ಕುಂಟೆಗಳಲ್ಲಿ ನೀರು ತುಂಬಿರುವುದು ಸಮಾಧಾನಕರ ಸಂಗತಿಯಾಗಿದ್ದರೆ, ಇನ್ನೊಂದೆಡೆ ಅಂತರ್ಜಲ ಮಲಿನವಾಗುತ್ತಿರ ಯವುದು ಆತಂಕಕಾರಿಯಾಗಿದೆ. ದೊಡ್ಡಬಳ್ಳಾಪುರ ತಾಲೂಕಿನಲ್ಲಿನ ನೂರಾರು ಕೈಗಾರಿಕೆಗಳಿಂದಾಗಿ ಕೆರೆಗಳು ಮಲಿನವಾಗುತ್ತಿವೆ. ಉಸಿರಾಡುವ ಗಾಳಿ ಕಲುಷಿತವಾಗುತ್ತಿದೆ. ಭೂಮಿ ತನ್ನ ಫಲವತ್ತತೆ ಕಳೆದು ಕೊಳ್ಳುತ್ತಿದೆ. ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಗರೇನಹಳ್ಳಿಯಲ್ಲಿನ ಎಂಎಸ್‌ಜಿಪಿ ಘಟಕದಲ್ಲಿ ಬೆಂಗಳೂರಿನ ತ್ಯಾಜ್ಯ ತಂದು ಸುರಿಯಲಾಗುತ್ತಿದ್ದು, ಕಸದ ತ್ಯಾಜ್ಯದಿಂದ ಹೊರಬರುವ ಕಲುಷಿತ ನೀರಿನಿಂದಾಗಿ ಸುತ್ತಮುತ್ತಲ ಗ್ರಾಮಗಳ ಕೆರೆಗಳು ಕಲುಷಿತವಾಗಿತವುದಲ್ಲದೇ ಅಂತರ್ಜಲ ಸಹ ಮಲಿನವಾಗುತ್ತಿದೆ. ಘಟಕ ಮುಚ್ಚುವಂತೆ ಹಲವಾರು ಹೋರಾಟಗಳು ನಡೆಯುತ್ತಿದ್ದರೂ ಯಾವುದೂ ಫಲಪ್ರದವಾಗುತ್ತಿಲ್ಲ.
ತಾಲೂಕಿನ ದೊಡ್ಡತುಮಕೂರು, ಚಿಕ್ಕತುಮಕೂರು ಹಾಗೂ ಮಜರಾಹೊಸಹಳ್ಳಿ ಗ್ರಾಮದ ಕೆರೆಗಳು ಸೇರಿದಂತೆ ಮದುರೆ ಹೋಬಳಿ ಕೆರೆಗಳು ಕೈಗಾರಿಕಾ ಪ್ರದೇಶ ಹಾಗೂ ನಗರಸಭೆಯ ತ್ಯಾಜ್ಯದಿಂದ ಕಲುಷಿತವಾಗುತ್ತಿದ್ದು, ಈ ಬಗ್ಗೆ ದೊಡ್ಡತುಮಕೂರು ಹಾಗು ಮಜರಾ ಹೊಸಹಳ್ಳಿ ಕೆರೆ ಹೋರಾಟ ಸಮಿತಿಯಿಂದ ನಿರಂತರ ಹೋರಾಟ ಮಾಡುವ ಮೂಲಕ, ಇಲ್ಲಿನ ಗಂಭೀರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ. ಅರ್ಕಾವತಿ ನದಿ ಉಳಿವಿಗಾಗಿ ನೀರನ್ನು ಶುದ್ಧೀಕರಣ ಮಾಡಿಬಿಡಿ ಎನ್ನುವ ಒತ್ತಾಯ ಗ್ರಾಮಸ್ಥರದ್ದಾಗಿದೆ. ನಗರದ ಜೀವನಾಡಿಯಾದ ನಾಗರಕೆರೆ ಕೂಡ, ನಗರಸಭೆಯ ಯುಜಿಡಿ ನೀರಿನಿಂದಾಗಿ ಹಾಗೂ ಇತರೆ ತ್ಯಾಜ್ಯಗಳನ್ನು ಕೆರೆಗೆ ಸುರಿಯುತ್ತಿರುವುದರಂದ ಮಲಿನವಾಗುತ್ತಿದೆ.
ಕಾರ್ಯಗತವಾಗದ ನೀರಾವರಿ ಯೋಜನೆಗಳು: 3 ವರ್ಷಗಳ ಹಿಂದೆ ನಗರಸಭೆ ವ್ಯಾಪ್ತಿ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಮಳೆ ನೀರು ಕಡ್ಡಾಯಗೊಳಿಸಲು ಅಂದಿನ ಜಿಲ್ಲಾಧಿಕಾರಿ ಕರೀಗೌಡ ಆದೇಶ ನೀಡಿದ್ದರು. ಆರಂಭದಲ್ಲಿ ಇದು ಕಾರ್ಯಗತವಾಯಿತಾದರೂ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದ್ದು ಕಡ್ಡಾಯ ಕಾನೂನು ಜಾರಿಯಾಗಬೇಕಿದೆ. ಸದ್ಯಕ್ಕೆ ಜಕ್ಕಲಮಡುಗುವಿನಿಂದ ನಗರಕ್ಕೆ ನೀರು ಸರಬರಾ ಜಾಗುತ್ತಿರುವುದರಿಂದ ಪರಿಸ್ಥಿತಿ ತಿಳಿಯಾಗಿದೆ. ನಗರದಲ್ಲಿ ನೀರು ಸರಬರಾಜಿಗೆ ಮೀಟರ್‌ಗಳನ್ನು ಅಳವಡಿಸುವ ಕಾರ್ಯ ಆರಂಭವಾಗಿ 4 ವರ್ಷ ಕಳೆದರೂ ಇನ್ನೂ ಕಾರ್ಯಗತವಾಗದೇ ಹಾಕಿರುವ ಪೈಪ್‌ಗ್ಳು ಸಹ ಕಿತ್ತು ಬರುತ್ತಿವೆ. ನಗರದಲ್ಲಿ ಬೀದಿ ನಲ್ಲಿಗಳಲ್ಲಿ ನೀರು ಪೋಲಾಗುತ್ತಿರುತ್ತದೆ.
ವೃಷಾಭವತಿ ಕಣಿವೆಯಿಂದ ಸಂಸ್ಕರಿಸಿದ ನೀರನ್ನು ಹರಿಸಲು ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ತಾಲೂಕು ಸೇರಿದಂತೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು, ಕಳೆದ ಬಜೆಟ್‌ನಿಂದ ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಸೇರಿಸಿದ್ದು, ಈ ಬಾರಿಯ ಬಜೆಟ್‌ನಲ್ಲಿ 865 ಕೋಟಿ ರೂ ಮೀಸಲಾಗಿರಿಸಿದೆ. ಎತ್ತಿನ ಹೊಳೆ ಯೋಜನೆಗಾಗಿ ನಿರ್ಮಿಸಲಾಗುತ್ತಿರುವ ಬೈರಗೊಂಡ್ಲು ಜಲಾಶಯದ ವಿವಾದ ಇನ್ನೂ ಬಗೆಹರಿದಿಲ್ಲ. ನೀರಿನ ಸಂರಕ್ಷಣೆಗಳೊಂದಿಗೆ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ.
ನಗರದ ನೀರಿನ ಸ್ಥಿತಿಗತಿ : ದೊಡ್ಡಬಳ್ಳಾಪುರ ತಾಲೂಕಿನಲ್ಲಿ ವಾರ್ಷಿಕ ಸರಾಸರಿ 800 ಮಿ.ಮೀ. ಮಳೆಯಾಗುತ್ತದೆ. ನಗರಸಭೆಯಲ್ಲಿ ಒಟ್ಟು 31 ವಾರ್ಡ್‌ಗಳಿದ್ದು, ಹಾಲಿ ಅಂದಾಜು 1.05 ಲಕ್ಷ ಜನಸಂಖ್ಯೆಗೆ ತಲಾ 135 ಲೀಟರ್ ಪ್ರಮಾಣದಂತೆ ದೊಡ್ಡಬಳ್ಳಾಪುರ ನಗರಕ್ಕೆ 14.17 ಎಂ.ಎಲ್.ಡಿ (ಒಂದು ದಿನಕ್ಕೆ ದಶಲಕ್ಷ ಲೀ) ಅವಶ್ಯಕತೆ ಇದ್ದು, ಪ್ರಸ್ತುತ ತಲಾ 68 ಎಲ್.ಪಿ.ಸಿ.ಡಿ ಪ್ರಮಾಣದ ರೀತ್ಯಾ 7.17 ಎಂ.ಎಲ್.ಡಿ ನೀರು ಸರಬರಾಜು ಮಾಡಲಾಗುತ್ತಿದೆ. ಇನ್ನೂ 7 ಎಂ.ಎಲ್.ಡಿ ನೀರು ಕೊರತೆ ಇದೆ. ನಗರದಲ್ಲಿ ಸರಾಸರಿ 5ರಿಂದ 6ದಿನಗಳಿಗೊಮ್ಮೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ.
ಜಿಲ್ಲೆಯಲ್ಲಿ ಅಂತರ್ಜಲ ಲಭ್ಯತೆ : ಜಿಲ್ಲೆಯಲ್ಲಿ 23,864 ಹೆಕ್ಟೇರ್ ಮೀಟರ್ ವಾರ್ಷಿಕ ಅಂತರ್ಜಲ ಲಭ್ಯತೆ ಯಿದ್ದು, ನಿವ್ವಳ ನೀರಾವರಿಗಾಗಿ ದೊಡ್ಡಬಳ್ಳಾಪುರ(5561 ಹೆಕ್ಟೇರ್.), ದೇವನ ಹಳ್ಳಿ (6408 ಹೆ.), ಹೊಸಕೋಟೆ(4917 ಹೆ.), ಹಾಗೂ ನೆಲಮಂಗಲ (3911 ಹೆ.), 20,797 ಹೆಕ್ಟೇರ್ ಮೀಟರ್ ಬಳಕೆಯಾಗು ತ್ತಿದೆ. ಗೃಹ ಮತ್ತು ಕೈಗಾರಿಕೆಗಳಲ್ಲಿ 3,239 ಹೆಕ್ಟೇರ್ ಮೀಟರ್ ಬಳಸುತ್ತಿದ್ದು, ಶೇ.127 ಅಂತರ್ಜಲ ಅಭಿವೃದ್ಧಿ ಹಂತ ತಲುಪಿದೆ. ರಾಜ್ಯದಲ್ಲಿ ಅಂತರ್ಜಲ ಅತಿಬಳಕೆಯ ತಾಲೂಕುಗಳಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳು ಸ್ಥಾನ ಪಡೆದಿವೆ. ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ ಪ್ರಮಾಣ ಸರಾಸರಿ 838 ಮಿ.ಮೀ ಇದೆ.
-ಡಿ.ಶ್ರೀಕಾಂತ