Advertisement

ಇಂದು ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಿ ತಾಣಗಳ ಆಗರ ಕರಾವಳಿ

12:22 AM Sep 27, 2021 | Team Udayavani |

ಸೆ.27ರ ಸೋಮವಾರ ವಿಶ್ವ ಪ್ರವಾಸೋದ್ಯಮ ದಿನ. ನಮ್ಮ ದೈನಂದಿನ ಜಂಜಾಟಗಳೆಲ್ಲವನ್ನೂ ಮರೆತು ನಮ್ಮ ಮನಸ್ಸನ್ನು ಒತ್ತಡಮುಕ್ತವಾಗಿಸಿ ಸಹಜಸ್ಥಿತಿಗೆ ತರುವಲ್ಲಿ ನಾವು ಕೈಗೊಳ್ಳುವ ಪ್ರವಾಸ ಬಲು ಮುಖ್ಯ ಪಾತ್ರ ವಹಿಸುತ್ತದೆ. ಇಂದು ಪ್ರವಾಸೋದ್ಯಮ ನಮ್ಮ ಆರ್ಥಿಕತೆಯ ಒಂದು ಆಧಾರಸ್ತಂಭವಾಗಿ ಬೆಳೆದುನಿಂತಿದೆ. ಕರಾವಳಿ ಜಿಲ್ಲೆಗಳಲ್ಲಿ ಎಲೆಮರೆಯ ಕಾಯಿಯಂತಿರುವ ಅದೆಷ್ಟೋ ಪ್ರವಾಸಯೋಗ್ಯ ಸ್ಥಳಗಳಿವೆ. ಈ ನೈಸರ್ಗಿಕ ತಾಣಗಳಿಗಿನ್ನೂ ಆಧುನಿಕತೆಯ ಗಾಳಿ ಬೀಸಿಲ್ಲ. ಇಂತಹ ಕೆಲವೊಂದು ತಾಣಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

Advertisement

ರಾಜ್ಯದ ಕರಾವಳಿ ಜಿಲ್ಲೆಗಳು ಅನೇಕ ಸುಂದರ ಪ್ರವಾಸಿ ಸ್ಥಳಗಳನ್ನು ಹೊಂದಿವೆ. ಪ್ರವಾಸೋದ್ಯಮವನ್ನು ಉತ್ತೇಜಿ ಸುವುದು ಕೇವಲ ಸರಕಾರ ಮತ್ತು ಪ್ರವಾಸೋದ್ಯಮ ಇಲಾಖೆಯ ಕೆಲಸವಲ್ಲ, ಇದು ಪ್ರತಿಯೊಬ್ಬರದಾಗಿದೆ. ಪ್ರವಾಸಿ ತಾಣಗಳನ್ನು ಸ್ನೇಹಿತರು ಮತ್ತು ಕುಟುಂಬದ ಸದಸ್ಯರಿಗೆ ಪರಿಚಯಿಸಲು ಪ್ರಯತ್ನಿಸಬೇಕು. ಅದು ನಮ್ಮ ಕರಾವಳಿ ಜಿಲ್ಲೆಗಳಿಗೆ ಹೆಚ್ಚಿನ ಪ್ರವಾಸಿಗರನ್ನು ಕರೆತರಲು ಸಹಾಯಕ.
ಕೊರೊನಾ ಕಾರಣದಿಂದಾಗಿ ಬಹಳಷ್ಟು ಪ್ರವಾಸಿಗರು ಜನನಿಬಿಡ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ. ಕರಾವಳಿಯಲ್ಲಿ ಸಾಕಷ್ಟು ಪ್ರವಾಸೋದ್ಯಮ ಸ್ಥಳಗಳಿದ್ದು, ಅದನ್ನು ಗುರುತಿಸುವ ಕೆಲಸವಾಗಬೇಕು.

ಫ್ಯಾಮಿಲಿ ಟೂರಿಸಂ: ಕರಾವಳಿ ಜಿಲ್ಲೆಗೆ ಆಗಮಿಸುವ ಹೆಚ್ಚಿನ ಪ್ರವಾಸಿಗರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಒಂದೇ ದಿನದಲ್ಲಿ ಹಿಂದಿರು ಗುತ್ತಿದ್ದಾರೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಕುಟುಂಬಸ್ಥ ರೊಂದಿಗೆ ಬಂದು 2-3 ದಿನ ಗಳ ಕಾಲ ಕರಾವಳಿಯ ಪ್ರವಾಸಿ ತಾಣಗಳನ್ನು ಸುತ್ತಾಡಲು ಅಗತ್ಯ ಅನುಕೂಲಗಳನ್ನು ಮಾಡಿಕೊಡಬೇಕಿದೆ. ಮೊದಲು ಇಲ್ಲಿನ ಪ್ರವಾಸಿ ಸ್ಥಳಗಳ ಬಗ್ಗೆ ಸಮರ್ಪಕ ಮಾಹಿತಿ ಒದಗಿಸುವ ಕೆಲಸವಾಗಬೇಕು. ಇದರಿಂದ ಸ್ಥಳೀಯ ಆರ್ಥಿಕತೆಗೂ ಉತ್ತೇಜನ ಸಿಗಲಿದೆ. ಈಗಾಗಲೇ ಎಸ್‌ಇಝಡ್‌ ನಿಯಮಾವಳಿ ಯಲ್ಲಿ ವಿನಾಯಿತಿ ಕಲ್ಪಿಸಿರುವುದರಿಂದ ಸಮುದ್ರ ತೀರದಲ್ಲಿ ರೆಸಾರ್ಟ್‌ ನಿರ್ಮಿಸುವವರಿಗೆ ಅನುಕೂಲವಾಗಲಿದೆ.

ಮಾಹಿತಿ ಕೇಂದ್ರಗಳು: ಕರಾವಳಿ ಭಾಗಕ್ಕೆ ಆಗಮಿಸು ವವರಿಗೆ ಇಲ್ಲಿನ ಪ್ರವಾಸಿ ಸ್ಥಳಗಳ ಬಗ್ಗೆ ತಿಳಿದುಕೊಳ್ಳಲು ಆಯಾ ಸ್ಥಳಗಳಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಬೇಕು. ಆಯಾಯ ಪ್ರದೇಶದ ಸಂಪೂರ್ಣ ವಿವರಗಳು, ಸುತ್ತಮುತ್ತಲಿನ ತಾಣಗಳ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ಲಭಿಸುವಂತಾಗಬೇಕು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಪರಿಸರ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕಿದೆ. ಮಾಹಿತಿ ಕೇಂದ್ರ ಹಾಗೂ ಪರಿಸರ ಸ್ನೇಹಿ ಶೌಚಾಲಯಗಳು ಒಂದೇ ಕಡೆ ಇದ್ದರೆ ಪೂರಕ.

ಅತಿಥಿ ದೇವೋಭವ: ಪ್ರವಾಸಿಗರಿಗೆ ಅನುಕೂಲವಾಗಲು “ಅತಿಥಿ ದೇವೋಭವ’ ಕಲ್ಪನೆಯಡಿ ಪ್ಯಾಕೇಜ್‌ನಂತಹ ಸೇವೆ ಒದಗಿಸಬೇಕು. ಹೋಂ ಸ್ಟೇಗಳಲ್ಲಿ ತಂಗುವ ಪ್ರವಾಸಿಗರಿಗೆ ಸ್ಥಳೀಯ ತಿನಿಸು, ಖಾದ್ಯಗಳನ್ನು ವಿಶೇಷ ಆದ್ಯತೆಯ ಮೇಲೆ ಉಣಬಡಿಸಬೇಕು. ಈ ಮೂಲಕ ವಿದೇಶ, ಹೊರರಾಜ್ಯಗಳ ಮಂದಿಗೆ ಕರಾವಳಿಯ ಖಾದ್ಯ, ಸಂಸ್ಕೃತಿಯನ್ನು ಪರಿ ಚಯಿಸಲು ಸಾಧ್ಯ. ಹೋಂ ಸ್ಟೇಗಳು ಸ್ಥಳೀಯರಿಗೆ ಉದ್ಯೋಗಾವ ಕಾಶಗಳನ್ನು ಸೃಷ್ಟಿಸುವಲ್ಲಿ ಹಾಗೂ ಆರ್ಥಿಕ ಪ್ರಗತಿಗೆ ಸಹಕಾರಿ. ಪ್ರವಾಸಿಗರ ಸಂಖ್ಯೆ ಹೆಚ್ಚಳವಾದರೆ ಹೊಟೇಲ್‌, ರೆಸಾರ್ಟ್‌, ಹೋಂ ಸ್ಟೇ, ರೆಸ್ಟೋರೆಂಟ್‌ಗಳು, ಟ್ರಾವೆಲ್‌ ಏಜೆನ್ಸಿಗಳು, ಟ್ಯಾಕ್ಸಿ ಆಪರೇಟರ್‌ಗಳು, ಸ್ಥಳೀಯ ಕರಕುಶಲ ಅಂಗಡಿಗಳು ಮತ್ತು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ಇದು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಪ್ರವಾಸೋದ್ಯಮವು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮಗಳಲ್ಲಿ ಒಂದಾಗಿದೆ. ಕರಾವಳಿ ಜನತೆ ಒಟ್ಟಾಗಿ ಇಲ್ಲಿನ ಪ್ರವಾಸೋ ದ್ಯಮವನ್ನು ಔನ್ನತ್ಯಕ್ಕೆ ಕೊಂಡೊಯ್ಯಲು ಇನ್ನೂ ಹೆಚ್ಚಿನ ಪ್ರಯತ್ನ ಮಾಡಬೇಕು.
ಮೂಲಸೌಕರ್ಯ ಹೆಚ್ಚಲಿ: ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಸುಗಮ ಸಂಚಾರ ಸಹಿತ ಸಮರ್ಪಕ ಮೂಲಸೌಕರ್ಯದ ಕೊಡುಗೆಯೂ ಅಪಾರವಾಗಿದೆ. ಇವೆಲ್ಲವನ್ನು ಆದ್ಯತೆಯ ಮೇಲೆಒದಗಿಸಿದಲ್ಲಿ ಕರಾವಳಿ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದೆ.
-ಗೌರವ ಶೇಣವ
ಕಾರ್ಯದರ್ಶಿ, ಅಸೋಸಿಯೇಶನ್‌
ಆಫ್ ಕೋಸ್ಟಲ್‌
ಟೂರಿಸಂ

Advertisement

ಚಾರಣ ಪ್ರಿಯರ ಸ್ವರ್ಗ; ಕೊರತಿಕಲ್ಲು ಗುಡ್ಡ
ಕುಂದಾಪುರ: ಬೈಂದೂರಿನಿಂದ ಸುಮಾರು 12 ಕಿ.ಮೀ. ದೂರದ ಕೊರತಿಕಲ್ಲು ಗುಡ್ಡ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗುಳ್ಳಾಡಿ, ಮಂದಣಕಲ್ಲು, ಹುಲ್ಕಲ್‌ ಈ ಮೂರು ಜಲಧಾರೆಗಳು ಚಾರಣ ಪ್ರಿಯರಿಗೆ ಸ್ವರ್ಗದಂತಿವೆ. ಈ ಗುಡ್ಡಕ್ಕೆ ಹೋಗಲು ಸೂಕ್ತ ಮಾರ್ಗಸೂಚಿಗಳ ಅಳವಡಿಕೆ, ದಾರಿ ಸಹಿತ ಕೆಲವೊಂದು ಮೂಲ ಸೌಕರ್ಯಗಳನ್ನು ಒದಗಿಸಿದರೆ ಈ ಪ್ರಾಕೃತಿಕ ಸೌಂದರ್ಯದ ಪ್ರವಾಸಿ ತಾಣವು ಹೊರಜಗತ್ತಿಗೂ ತೆರೆದುಕೊಳ್ಳಬಹುದು.

ಅರಣ್ಯ ತಪ್ಪಲು ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ ಸಾವಿರಾರು ಅಡಿ ಎತ್ತರದಲ್ಲಿರುವ ಕೊರತಿಕಲ್ಲು ಗುಡ್ಡ ಈಗಲೂ ಬಹು ಜನರಿಗೆ ತಿಳಿಯದೇ ಅಜ್ಞಾತವಾಗಿಯೇ ಉಳಿದಿದೆ. ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾ.ಪಂ.ನ ಯಳಜಿತ್‌ ಗ್ರಾಮದಲ್ಲಿ ದಟ್ಟ ಹಸುರಿನ ರಾಶಿ, ತೊರೆ, ಜಲಪಾತ ಒಳಗೊಂಡ ಈ ಸುಂದರ ತಾಣ ಚಾರಣಪ್ರಿಯರನ್ನು ಕೈ ಬೀಸಿ ಕರೆಯುವಂತಿದೆ.

ದಾರಿ ಹೇಗೆ: ಬೈಂದೂರಿನಿಂದ 12 ಕಿ.ಮೀ., ಯಳಜಿತ್‌ನಿಂದ 6-7 ಕಿ.ಮೀ. ದೂರ ಉತ್ತರಾಭಿಮುಖವಾಗಿ ಕಾಡು ಹಾದಿಯಲ್ಲಿ ಸಂಚರಿಸಿದರೆ ಕೊರತಿಕಲ್ಲು ಗುಡ್ಡ ಸಿಗುತ್ತದೆ. ಯಳಜಿತ್‌ನಿಂದ ಹುಣ್ಸೆಮನೆವರೆಗೆ 2 ಕಿ.ಮೀ. ಮಾತ್ರ ವಾಹನದಲ್ಲಿ ಸಂಚರಿಸಿ, ಆ ಬಳಿಕ ಸುಮಾರು 2-3 ಗಂಟೆ ಕಾಡುಹಾದಿಯಲ್ಲಿ ನಡೆದುಕೊಂಡೇ ಈ ಗುಡ್ಡದ ತುದಿ ತಲುಪಬೇಕು.

ಬೈಂದೂರು ಹೆದ್ದಾರಿ, ಗೋಳಿಹೊಳೆ, ಯಳಜಿತ್‌ ಮತ್ತಿತರ ಕಡೆ ಈ ತಾಣವನ್ನು ಸಂಪರ್ಕಿಸುವ ಕುರಿತು ಮಾರ್ಗಸೂಚಿ ಅಳವಡಿಸಿದರೆ ಪ್ರವಾಸಿಗರಿಗೆ ಅನುಕೂಲಕರ.

ಏನೇನು ಕಾಣಬಹುದು?
ಸಾವಿರಾರು ಅಡಿಗಳಷ್ಟು ಎತ್ತರದಲ್ಲಿರುವ ಈ ಕೊರತಿಕಲ್ಲು ಗುಡ್ಡದ ತುತ್ತತುದಿಯಲ್ಲಿ ಎರಡು ಬೃಹತ್‌ ಬಂಡೆಗಳಿದ್ದು, ಅದರಡಿ ಕುಳಿತು ಸಾವಿರಾರು ಅಡಿಯಲ್ಲಿರುವ ಪ್ರಪಾತಕ್ಕೆ ಕಣ್ಣು ಹಾಯಿಸಿದರೆ ಸುತ್ತಲೂ ಸಹಜ ಸೌಂದರ್ಯದ ಪ್ರಾಕೃತಿಕ ಸೊಬಗೇ ಅನಾವರಣಗೊಳ್ಳುತ್ತದೆ. ಈ ಗುಡ್ಡದೆಡೆಗೆ ಸಾಗುವಾಗ ನೀರವ ಕಾಡಿನ ನಡುವೆ ಆಗೊಮ್ಮೆ ಈಗೊಮ್ಮೆ ದರ್ಶನ ನೀಡಿ ಮಾಯವಾಗುವ ಪ್ರಾಣಿ ಪಕ್ಷಿಗಳು ನಿಬ್ಬೆರಗಾಗಿಸುತ್ತವೆ. ಹಿಂದಿನ ಕಾಲದಲ್ಲಿ ಬಿದಿರು ತರಲು ಕೃಷಿಕರು ಈ ಕೊರತಿಕಲ್ಲು ಗುಡ್ಡಕ್ಕೆ ತೆರಳುತ್ತಿದ್ದರು. ಅಲ್ಲಿಂದ ಬಿದಿರು ತಂದು ಬುಟ್ಟಿ, ಕುರ್ಚಿ, ಟೇಬಲ್‌ ಸಹಿತ ಹಲವು ಉತ್ಪನ್ನಗಳನ್ನು ತಯಾರಿಸುತ್ತಿದ್ದರು. ಕಾಲಕ್ರಮೇಣ ಆ ವಸ್ತುಗಳಿಗೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಆ ಗುಡ್ಡಕ್ಕೆ ತೆರಳುವವರು ಕಡಿಮೆಯಾಗಿ, ದಾರಿಯಲ್ಲಿ ಗಿಡಗಂಟಿ ಬೆಳೆದು, ಗುಡ್ಡಕ್ಕೆ ತೆರಳಲು ಸಾಧ್ಯವಾಗದ ಪರಿಸ್ಥಿತಿಯಿದೆ. ಕೊರತಿಕಲ್ಲು ಗುಡ್ಡಕ್ಕೆ ಹೊಂದಿಕೊಂಡು ಗುಳ್ಳಾಡಿ ಫಾಲ್ಸ್‌, ಹುಲ್ಕಲ್‌ ಫಾಲ್ಸ್‌, ಮಂದಣಕಲ್ಲು ಫಾಲ್ಸ್‌ ಎಂದು ಮೂರು ಜಲಧಾರೆಗಳಿದ್ದು, ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುತ್ತಿರುತ್ತದೆ. ನೂರಾರು ಅಡಿಗಳಷ್ಟು ಎತ್ತರದಿಂದ ನೀರು ಧುಮುಕುವ ಆಕರ್ಷಕ ದೃಶ್ಯ ಮಳೆಗಾಲದಲ್ಲಿ ನೋಡುವುದೇ ಚೆಂದ. ಜೂನ್‌ನಿಂದ ಬಹುತೇಕ ಅಕ್ಟೋಬರ್‌ವರೆಗೂ ಜಲಧಾರೆ ಇರುತ್ತದೆ. ಆಗಸ್ಟ್‌ವರೆಗೆ ನೀರಿನ ಅಬ್ಬರ ಹೆಚ್ಚಿರುತ್ತದೆ.

ಬೆಟ್ಟದ ಮೇಲಿದೆ ಎರಡು ಬೃಹತ್‌ ಪಾದಗಳ ಚಿತ್ರಣ ಇರುವ ಕಲ್ಲು!
ವಾಲಿಕುಂಜ ಬೆಟ್ಟ
ಕಾರ್ಕಳ: ಪಶ್ಚಿಮ ಘಟ್ಟದ ಕುದುರೆಮುಖ ಬೆಟ್ಟದ ಸಾಲಿನಲ್ಲಿ ಅತೀ ಎತ್ತರದಲ್ಲಿರುವ ಬೆಟ್ಟ ವಾಲಿಕುಂಜ (ಅಜ್ಜಿಕುಂಜ). ಈ ಸ್ಥಳವು ಪ್ರೇಕ್ಷಣೀ ಯವಾಗಿದೆ. ಹೆಬ್ರಿ ತಾಲೂಕಿನ ಅಂಡಾರು ಗ್ರಾಮದಲ್ಲಿರುವ ಈ ಸ್ಥಳ ಸ್ಥಳೀಯವಾಗಿ ಪ್ರೇಕ್ಷಣೀಯ ತಾಣವಾಗಿ ಮಾತ್ರವಲ್ಲದೆ ಧಾರ್ಮಿಕ ಶ್ರದ್ಧಾಕೇಂದ್ರವಾಗಿಯೂ ಪ್ರಸಿದ್ಧಿ ಪಡೆದಿದೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಚಾರಣಿಗರು ಮತ್ತು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಆದರೆ ಪ್ರಚಾರ ಇಲ್ಲದಿರುವುದರಿಂದ ಈ ಬೆಟ್ಟ ಹೊರ ಪ್ರಪಂಚಕ್ಕೆ ಇನ್ನೂ ತೆರೆದುಕೊಂಡಿಲ್ಲ.

ವಾಲಿ ಮೂರು ಸಮುದ್ರಗಳಲ್ಲಿ ಮೂರು ಹೊತ್ತು ಸೂರ್ಯ ದೇವರಿಗೆ ಅಘ್ಯ ನೀಡುತ್ತಿದ್ದನಂತೆ. ಹಾಗೇ ಇದೆ ಬೆಟ್ಟದ ತುದಿಯಿಂದ ಸಮುದ್ರಕ್ಕೆ ಹಾರುತ್ತಿದ್ದನಂತೆ. ಬೆಟ್ಟದ ಮೇಲೆ ಎರಡು ಬೃಹತ್‌ ಪಾದಗಳ ಚಿತ್ರಣ ಇರುವ ಕಲ್ಲು ಇದೆ. ಇದನ್ನು ಕೆಲವರು ವಾಲಿಪಾದ ಎಂದು ಕರೆಯುತ್ತಾರೆ. ಪರಶುರಾಮ ಪಾದವೆಂಬ ಹೆಸರೂ ಇದಕ್ಕಿದೆ. ಪರಶುರಾಮ ಇದೇ ಸ್ಥಳದಲ್ಲಿ ನಿಂತು ಕೊಡಲಿ ಎಸೆದನೆಂದು ಅದು ಹೋಗಿ ಬಿದ್ದ ಸ್ಥಳದವರೆಗೆ ಸಮುದ್ರ ಹಿಂದೆ ಸರಿಯಿತು ಎಂಬುದು ರಾಜ್ಯದ ಕರಾವಳಿಯ ಬಗೆಗಿನ ಪೌರಾಣಿಕ ಕಥೆ.

ಈ ಸ್ಥಳದ ಸಮೀಪ ಸೂಜಿಗುಡ್ಡೆ, ಪೆದೆ¾ದಿ ಕಲ್ಲು (ತಾಯಿ ಮಗುವಿನ ಚಿತ್ರವಿರುವ ಕೆತ್ತನೆಯ ಕಲ್ಲಿದೆ) ಸಿರಿಗುಂಡಿ( ವರ್ಷವಿಡಿ ನೀರು ಬೀಳುತ್ತಿರುತ್ತದೆ) ಶಿರ್ಲಾಲು ಹಳ್ಳ ಮುಂತಾದ ಪ್ರೇಕ್ಷಣೀಯ ಸ್ಥಳಗಳು ಇವೆ. ಸಮುದ್ರ ಮಟ್ಟದಿಂದ 1,039 ಮೀ. ಎತ್ತರದಲ್ಲಿದೆ ಈ ವಾಲಿಕುಂಜ ಬೆಟ್ಟ.

ದಾರಿ ಹೇಗೆ: ಕಾರ್ಕಳದ ಅಜೆಕಾರಿನಿಂದ ಹೆಬ್ರಿ ನಡುವೆ ಮುನಿಯಾಲಿನಿಂದ ಬಲ ಮಾರ್ಗವಾಗಿ ಹೋದರೆ ಮುಟ್ಲುಪ್ಪಾಡಿ ಸಿಗುತ್ತದೆ. ಅಲ್ಲಿರುವ ಅರ್ಧನಾರೀಶ್ವರ ದೇವಸ್ಥಾನದಿಂದ ಮೂರು ಕಿ. ಮೀ. ಹೀಗೆ ಅಂಡಾರುವಿನಿಂದ 9.5 ಕಿ ಮೀ ಕಡಿದಾದ ಕಾಡು ದಾರಿಯಲ್ಲಿ ಈ ವಾಲಿಕುಂಜ ಬೆಟ್ಟವಿದೆ. ಸಸ್ಯರಾಶಿಯ ಮಧ್ಯೆ ನೂರಾರು ಸಸ್ಯ ಪ್ರಭೇದಗಳಿಗೆ ಆಸರೆ ನೀಡಿರುವ ಈ ಬೆಟ್ಟಕ್ಕೆ ತೆರಳುವ ದಾರಿಯುದ್ದಕ್ಕೂ ಹಚ್ಚ ಹಸುರಿನ ಪರಿಸರ ಕೈಬೀಸಿ ಕರೆಯುತ್ತದೆ. ಬೆಟ್ಟ, ಗುಡ್ಡ, ದಟ್ಟ ಕಾಡುಗಳು, ನದಿ, ಹೊಳೆ, ತೊರೆಗಳ ರಸಾನುಭವವನ್ನು ಆಸ್ವಾದಿಸುತ್ತ ಈ ಬೆಟ್ಟವನ್ನು ಏರಬಹುದು.

ಬಂದಾರು ಗ್ರಾಮದ ಬಿಸಿನೀರಿನ ಬುಗ್ಗೆ
ದಿನಂಪ್ರತಿ ಚಿಮ್ಮುತ್ತದೆ ಬಿಸಿನೀರು!
ಬೆಳ್ತಂಗಡಿ: ಪ್ರಕೃತಿಯ ವಿಸ್ಮಯ ಗಳಲ್ಲಿ ನಾನಾ ವಿಶೇಷಗಳು ಅಡ ಗಿದ್ದು ಅವುಗಳಲ್ಲಿ ಬಿಸಿನೀರಿನ ಬುಗ್ಗೆಯೂ ಒಂದು. ಪ್ರಸಕ್ತ ದಕ್ಷಿಣ ಭಾರತದ ಏಕೈಕ ವರ್ಷವಿಡೀ ಚಿಮ್ಮುವ ಬಿಸಿನೀರ ಬುಗ್ಗೆ ಬೆಳ್ತಂಗಡಿ ತಾ|ನ ಬಂದಾರು ಗ್ರಾಮದ ವೋಟೆಚ್ಚಾರುವಿನಲ್ಲಿದೆ.

ಸಾಮಾನ್ಯವಾಗಿ ಬಿಸಿನೀರಿನ ಬುಗ್ಗೆಯ ನೀರು ತನ್ನ ಶಾಖವನ್ನು ಭೂಗರ್ಭ ದಲ್ಲಿರುವ ಶಿಲೆಗಳಿಂದ ಪಡೆದುಕೊಳ್ಳುತ್ತದೆ. . ಬಂದಾರು ಗ್ರಾಮದಲ್ಲಿ ರುವ ಈ ಬಿಸಿನೀರಿನ ಬುಗ್ಗೆ ವರ್ಷದ 365 ದಿನವೂ ಸರಿಸುಮಾರು 35 ಡಿಗ್ರಿಯಿಂದ ಗರಿಷ್ಠ 36.6 ಡಿಗ್ರಿ ಸೆಲ್ಸಿಯಸ್‌ ವರೆಗೆ ಶಾಖವನ್ನು ಹೊಂದಿರುತ್ತದೆ. ಸಣ್ಣ ಪ್ರಾಣದ ಒಸರುವಿಕೆಯಿಂದ ಬರುವ ನೀರನ್ನು ಪುಟ್ಟ ಕೆರೆಯ ಮಾದರಿಯಲ್ಲಿ ಶೇಖರಿಸಲಾಗಿದೆ.

ಈ ಬಿಸಿನೀರ ಬುಗ್ಗೆ ಯಿಂದ 100 ಮೀಟರ್‌ ದೂರ ದಲ್ಲೇ ನೇತ್ರಾವತಿ ನದಿಯೂ ಹರಿ ಯುತ್ತದೆ. ಜಾಗದ ಮಾಲಕರಾದ ಮಹಮ್ಮದ್‌ ಅವರು ಹೇಳುವಂತೆ ಅವರ ಅಜ್ಜನ ಕಾಲದಿಂದಲೂ ಇಲ್ಲಿ ಬಿಸಿನೀರು ಉಕ್ಕುತ್ತಿದೆ.

ಬಿಸಿನೀರಿನಲ್ಲಿ ಗಂಧಕ ಸತ್ವ ಇರುವುದರಿಂದ ಚರ್ಮ ರೋಗಕ್ಕೆ ಔಷಧವೂ ಹೌದು. ಬಹಳಷ್ಟು ಮಂದಿ ಇಲ್ಲಿಂದ ನೀರನ್ನು ಸಂಗ್ರಹಿಸಿ ಕೊಂಡೊಯ್ಯುತ್ತಾರೆ. ತರಕಾರಿ ಗಿಡಗಳಿಗೆ ಈ ನೀರು ಬಳಸಿದಲ್ಲಿ ಉತ್ತಮ ಬೆಳೆ ವೃದ್ಧಿಸುತ್ತದೆ ಎನ್ನಲಾಗುತ್ತಿದೆ. ಪ್ರಸಕ್ತ ಕೇಂದ್ರ ಸರಕಾರವು ಈ ಬಿಸಿನೀರಿನ ಬುಗ್ಗೆ ಪ್ರತಿನಿತ್ಯದ ವರದಿ ಕೇಳಿದೆ. ಇದಕ್ಕಾಗಿ ತಾಪಮಾನ ಪರಿಶೋಧನ ಯಂತ್ರವನ್ನು ನೀಡಿದ್ದು, ಹೀಗಾಗಿ ಕಳೆದ ಎರಡು ವರ್ಷಗಳಿಂದ ಪ್ರತಿನಿತ್ಯ ಮುಂಜಾನೆ ಹಾಗೂ ಸಂಜೆ ವರದಿ ನೀಡುತ್ತಾ ಬರಲಾಗಿದೆ.

ದಾರಿ ಹೇಗೆ: ಉಪ್ಪಿನಂಗಡಿ -ಬೆಳ್ತಂಗಡಿ ರಸ್ತೆಯಲ್ಲಿ ಕುಪ್ಪೆಟ್ಟಿ ಜಂಕ್ಷನ್‌ನಿಂದ 11 ಕಿ.ಮೀ. ದೂರವಿದೆ. ಉಪ್ಪಿನಂಗಡಿಯಿಂದ 18 ಕಿ.ಮೀ., ಹಾಗೂ ಬೆಳ್ತಂಗಡಿಯಿಂದ 23 ಕಿ.ಮೀ. ದೂರವಿದೆ.

ತೆರೆಮರೆಯಲ್ಲೇ ಉಳಿದ ಕುಡ್ಲದ ಕುದ್ರುಗಳು
ಮಂಗಳೂರು: ನೇತ್ರಾವತಿ ನದಿ ಹರಿಯುತ್ತಿರುವ ಅಡ್ಯಾರ್‌ನಿಂದ ಅಳಿವೆ ಬಾಗಿಲು ವರೆಗಿನ ಹಾಗೂ ಫಲ್ಗುಣಿ ನದಿ ಹರಿಯುತ್ತಿರುವ ಗುರುಪುರದಿಂದ ತಣ್ಣೀರುಬಾವಿಯ ವರೆಗಿನ ಪ್ರದೇಶದಲ್ಲಿ ಹಲವಾರು ಕಡೆ ನದಿಯ ಇಕ್ಕೆಲಗಳಲ್ಲಿ ಹಿನ್ನೀರಿನಲ್ಲಿ ಸುಂದರ ಪ್ರಕೃತಿ ತಾಣಗಳಿವೆ. ಬೋಟ್‌ ಹೌಸ್‌ಗಳು, ಪ್ರವಾಸೋದ್ಯಮ ತಾಣಗಳ ಸ್ಥಾಪನೆಗೆ ಈ ಪ್ರದೇಶಗಳು ಅತ್ಯಂತ ಸೂಕ್ತವಾಗಿದೆ.

ನದಿಗಳ ಮಧ್ಯೆಯಿರುವ ಕುದ್ರುಗಳು (ಕಿರು ದ್ವೀಪಗಳು) ಹಿನ್ನೀರು ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಮಂಗಳೂರು ನಗರದ ಇಕ್ಕೆಲಗಳಲ್ಲಿ ಹರಿಯುತ್ತಿರುವ ನೇತ್ರಾವತಿ ಮತ್ತು ಫಲ್ಗುಣಿ ನದಿಗಳ ಮಧ್ಯೆ ಸುಂದರ ಕುದ್ರುಗಳಿವೆ. ಜಪ್ಪಿನಮೊಗರು ಕಡೆಕಾರು ಬಳಿ ನೇತ್ರಾವತಿ ನದಿಯ ಮಧ್ಯದಲ್ಲಿ, ಹಳೆ ಬಂದರು ಬಳಿಯ ಫಲ್ಗುಣಿ ನದಿ ಮಧ್ಯದಲ್ಲಿ, ತಣ್ಣೀರುಬಾವಿ ಬೀಚ್‌ ಬಳಿ ಕುಡ್ಲಕುದುರು ಸೇರಿದಂತೆ ಮಂಗಳೂರು ಸುತ್ತಮುತ್ತ ಆರು ಕುದ್ರುಗಳಿವೆ. ಜೆಪ್ಪಿನಮೊಗರು ಕಡೆಕಾರಿನ ಬಳಿ ನೇತ್ರಾವತಿ ನದಿ ಮಧ್ಯದಲ್ಲಿರುವ ಸುಂದರ ಕುದ್ರು ಗಮನ ಸೆಳೆಯುವಂತಿದೆ.
ಕಡೆಕಾರು ಬಳಿಯ ಕುದ್ರು ಅನ್ನು ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ 2011ರಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸಿ ಪರಿಶೀಲನೆ ನಡೆಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸಿದ್ಧತೆಗಳನ್ನು ನಡೆಸಲಾಗಿತ್ತು. ದ್ವೀಪಕ್ಕೆ ಬೋಟ್‌ ಸೌಲಭ್ಯಕ್ಕೂ ಚಾಲನೆ ನೀಡಲಾಗಿತ್ತು. ಆದರೆ ಮುಂದೆ ಯಾವುದೇ ಪ್ರಗತಿ ಕಾಣಲಿಲ್ಲ. ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿ ನೇತ್ರಾವತಿ ಮತ್ತು ಫಲ್ಗುಣಿ ನದಿಯಲ್ಲಿನ 3 ದ್ವೀಪಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸುವ ಬಗ್ಗೆಯೂ ಚಿಂತನೆ ನಡೆದಿತ್ತು.

ಸಿಆರ್‌ಝಡ್‌ ನಿಯಮ ಗಳನ್ನೇ ಪೂರಕವಾಗಿ ಬಳಸಿ ಕೊಂಡು ಕೇರಳ ಸಾಗರ ಹಾಗೂ ಹಿನ್ನೀರು ಪ್ರವಾ ಸೋದ್ಯಮ ಇಲಾಖೆ ಅಭಿ ವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. . ಇದೇ ಮಾದರಿಯಲ್ಲಿ ಇಲ್ಲಿನ ಕುದ್ರುಗಳನ್ನು ಅಭಿವೃದ್ಧಿಪಡಿಸಬೇಕಿದೆ.

ವಿಹಾರಕ್ಕೆ ಪ್ರಶಸ್ತ ತಾಣ ಬೀರಮಲೆ ಬೆಟ್ಟ
ಪುತ್ತೂರು: ಸಮುದ್ರ ಮಟ್ಟದಿಂದ 550 ಅಡಿ ಎತ್ತರ ದಲ್ಲಿರುವ ಬೀರ ಮಲೆಬೆಟ್ಟ ಪುತ್ತೂರು ನಗರದ ಕೇಂದ್ರದಲ್ಲಿರುವ ಪ್ರೇಕ್ಷಣಿಯ ಸ್ಥಳಗಳಲ್ಲಿ ಒಂದು. ಹತ್ತೂರಿ ನಲ್ಲಿ ಹಬ್ಬಿರುವ ಪ್ರಾಕೃತಿಕ ಸಂಪತ್ತಿನ ಸೌಂದರ್ಯ ಸವಿಯಲು ಈ ಬೆಟ್ಟ ಅತ್ಯಂತ ಸೂಕ್ತ ಸ್ಥಳ. ನಗರದ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ 1.2 ಕಿ.ಮೀ. ದೂರ ಸಂಚರಿಸಿದರೆ ಈ ಬೆಟ್ಟ ತಲುಪಬಹುದು.

ಬೀರಮಲೆ ಬೆಟ್ಟದಲ್ಲಿ 16 ಎಕರೆ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಿಸಲಾದ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಬೆಟ್ಟದ ಕಳೆಯನ್ನು ಇಮ್ಮಡಿಗೊಳಿಸಿದೆ. ಮಕ್ಕಳ ಆಟಕ್ಕೆ ಬೇಕಾದ ಸಾಧನಗಳು, ಹಿರಿಯರ ವಿಹಾರಕ್ಕೆ ಬೇಕಾದ ಆಸನಗಳು, ಸುತ್ತಮುತ್ತ ಕಾಣುವ ಹಸುರು ಸಂಪತ್ತನ್ನು ಕಣ್ತುಂಬಿಕೊಳ್ಳಲು ಬೆಟ್ಟ ಏರಬಹುದು. ಸಂಜೆ ಹೊತ್ತಿನಲ್ಲಿ ಪ್ರಕೃತಿದತ್ತವಾದ ಗಾಳಿಯನ್ನು ಆಸ್ವಾದಿಸಲೆಂದು ಬೆಟ್ಟ ಏರಿ ವಿಶ್ರಾಂತಿ ಪಡೆಯಬಹುದು. ಬೀರಮಲೆ ಬೆಟ್ಟದಲ್ಲಿ ಅರಣ್ಯ ಇಲಾಖೆಯು ಕಾಡು ಜಾತಿಯ 3,000 ಸಸಿಗಳನ್ನು ನೆಟ್ಟು ಪೋಷಿಸುತ್ತಿದೆ. ಆಲ, ಅರಳಿ, ಮಾವು, ನೇರಳೆ ಸೇರಿದಂತೆ ಉತ್ತಮ ಜಾತಿಯ ಗಿಡಗಳು ಇಲ್ಲಿ ಬೆಳೆಯುತ್ತಿವೆ. ಬೆಟ್ಟದಲ್ಲಿ ಸಂಚಾರ, ಸಂಪರ್ಕ ಮೂಲಭೂತ ಸೌಕರ್ಯ, ಪ್ರವಾಸಿಗರ ಸುರಕ್ಷೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದಲ್ಲಿ ಈ ತಾಣ ಪ್ರವಾಸಿಗರನ್ನು ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಉತ್ತಮ ಸಂಪರ್ಕ ರಸ್ತೆ, ಮಕ್ಕಳ ಅನುಕೂಲತೆಗಾಗಿ ಚಿಣ್ಣರ ಪಾರ್ಕ್‌ನ್ನು ವಿಸ್ತರಿಸುವುದು, ಹೂತೋಟ, ಶೌಚಾಲಯ ಹೀಗೆ ಪ್ರವಾಸಿ ತಾಣಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಾಗಿದೆ.

ಕಣ್ಮನ ತಣಿಸುವ ಬಬ್ಬುಕುದ್ರು
ಕುಂದಾಪುರ: ಅರಬಿ ಸಮುದ್ರದ ಹೊಳೆಯುವ ಹಿನ್ನೀರಿನಿಂದ ಆವೃತ್ತ‌ವಾಗಿರುವ ಬಬ್ಬು ಕುದ್ರು ಅಪರೂಪದ ಸೌಂದರ್ಯ ಹೊಂದಿರುವ ತಾಣ.
ಕುಂದಾಪುರ ನಗರದಿಂದ ತುಸು ಅಂತರದಲ್ಲಿ ಇರುವ ಬಬ್ಬು ಕುದ್ರು ಸಣ್ಣ, ಜನವಸತಿ ಇಲ್ಲದ ದ್ವೀಪ. ಹಚ್ಚ ಹಸುರಿನ ಪರಿಸರ. ಈ ದ್ವೀಪವು ಅರಬಿ ಸಮುದ್ರದ ಮರಳು ಸವೆತದ ಪರಿಣಾಮದಿಂದ ಸೃಷ್ಟಿಯಾಗಿದೆ. ಅಲೆಗಳು ಹೆಚ್ಚಾದಾಗ ಮತ್ತು ಮಳೆಗಾಲದಲ್ಲಿ ದ್ವೀಪದಲ್ಲಿ ನೀರಿನ ಮಟ್ಟ ಸ್ವಲ್ಪ ಏರಿರುತ್ತದೆ.

ದ್ವೀಪವು ಚಿಕ್ಕದಾಗಿದ್ದರೂ, ವೈವಿಧ್ಯತೆಯನ್ನು ಹೊಂದಿದೆ. ನಿತ್ಯಹರಿದ್ವರ್ಣ ಮರಗಳ ಕಾರಣದಿಂದ ವಿಶಾಲ ಜಾಗವೂ ಇರುವುದರಿಂದ ಮಾನಸಿಕ ವಿಶ್ರಾಂತಿಗೆ ಪ್ರಶಸ್ತ ಸ್ಥಳವಾಗಿದೆ. ಇಲ್ಲಿಂದ ಹತ್ತಿರದ ಇನ್ನಷ್ಟು ದ್ವೀಪಗಳನ್ನು ಕಾಣಬಹುದು.

ದಾರಿ ಹೇಗೆ: ಮಿನಿ ವಿಧಾನಸೌಧದ ಬಳಿ ನದಿ ತೀರದಲ್ಲಿ ಬಾಡಿಗೆಗೆ ಸಣ್ಣ ಮರದ ದೋಣಿಗಳಿದ್ದು ಅವುಗಳ ಮೂಲಕ 20 ನಿಮಿಷಗಳ ಪ್ರಯಾಣದಲ್ಲಿ ದ್ವೀಪ ಪ್ರವೇಶಿಸಬಹುದು. ಸಾಮಾನ್ಯವಾಗಿ ಒಬ್ಬರಿಗೆ 100 ರೂ. ದರ ವಿಧಿಸಲಾಗುತ್ತದೆ. ಸಣ್ಣ ದೋಣಿಯಾದರೆ 4-5 ಜನ ಹೋಗಬಹುದು. ಯಾವುದೇ ಅಂಗಡಿ, ಇತರ ಸೌಲಭ್ಯಗಳಿಲ್ಲ. ಹೋಗುವಾಗಲೇ ಅಗತ್ಯ ವಸ್ತುಗಳನ್ನು ಕೊಂಡೊಯ್ಯಬೇಕು. ಇಲ್ಲಿನ ಅಭಿವೃದ್ಧಿ ಯೋಜನೆಗಳು ಮಾತ್ರ ಇನ್ನೂ ಕಡತದಲ್ಲೇ ಇವೆ.

ಪ್ರಕೃತಿಯೇ ನಿರ್ಮಿಸಿದ ಪುರಾತನ ಕ್ಷೇತ್ರ
ಶ್ರೀಂಗಾರಕಲ್ಲು ಬನಶಂಕರಿ ಗುಹಾಲಯ
ಬಂಟ್ವಾಳ: ಎತ್ತರದ ಗುಡ್ಡ ಪ್ರದೇಶದ ಬಂಡೆಯೊಳಗಿನ ಈ ಕ್ಷೇತ್ರವು ಗುಹಾಲಯ ವಾಗಿದೆ. ಪ್ರಕೃತಿಯೇ ನಿರ್ಮಿಸಿದ ಈ ಕ್ಷೇತ್ರ ದಲ್ಲಿ ಗುಹೆಯೊಳಗೆ ದೇವಿ ನೆಲೆಸಿದ್ದು, ಒಳಗೆ ತಣ್ಣನೆಯ ವಾತಾವರಣದಲ್ಲಿ ನೆಲದಲ್ಲೇ ಕುಳಿತು ದರ್ಶನ ಪಡೆಯಬೇಕು.

ಇದು ಬಂಟ್ವಾಳ ತಾಲೂಕಿನ ಸಂಗ ಬೆಟ್ಟು ಗ್ರಾಮ(ಸಿದ್ದಕಟ್ಟೆ ಸಮೀಪ)ದ ಶ್ರೀಂಗಾರಕಲ್ಲು ಶ್ರೀ ಆದಿ ಬನಶಂಕರಿ ಕ್ಷೇತ್ರ. ಬಹಳ ಪುರಾತನ ಕ್ಷೇತ್ರವಾದರೂ 1994ರ ಬಳಿಕ ಇಲ್ಲಿ ಶ್ರೀ ಬನಶಂಕರಿಯ ಆರಾಧನೆ ನಡೆಯುತ್ತಿದೆ. ಬಂಡೆಯೊಳಗೆ ತಾಯಿ ಇದ್ದಾಳೆ ಎಂಬ ಅಭಯ ಸಿಕ್ಕಿದ ಬಳಿಕ ಸುಮಾರು 8 ತಿಂಗಳುಗಳ ಕಾಲ ಗುಹೆಯೊಳಗಿನ ಕಲ್ಲು ತೆರವುಗೊಳಿಸಿದ ಬಳಿಕ ದೇವಿಯ ಪೀಠ ಲಭ್ಯವಾಗಿದೆ.ಇದು ಹುಲಿಗಳ ಓಡಾಟವಿದ್ದ ಪ್ರದೇಶ ವಾಗಿದ್ದು, ಹಿಂದೆ ಹಲವರಿಗೆ ಕಾಣಸಿಕ್ಕಿದ ನಿದರ್ಶನಗಳೂ ಇವೆ ಎನ್ನುತ್ತಾರೆ ಕ್ಷೇತ್ರದ ಪ್ರಧಾನ ಅರ್ಚಕ ವಾಸುದೇವ ಶೆಟ್ಟಿಗಾರ್‌.

ದಾರಿ ಹೇಗೆ: ಬಿ.ಸಿ. ರೋಡಿನಿಂದ 19 ಕಿ.ಮೀ. ದೂರದಲ್ಲಿ ಈ ಕ್ಷೇತ್ರವಿದ್ದು, ಮೂಡುಬಿದಿರೆ ರಸ್ತೆಯಲ್ಲಿ ಸಾಗಿ ಸಂಗಬೆಟ್ಟಿ ನಲ್ಲಿ ಎಡಭಾಗಕ್ಕೆ ಸಾಗಿರುವ ಗುಂಡಿಪಲ್ಕೆ ರಸ್ತೆಯಲ್ಲಿ ಸಾಗಿದರೆ ಶ್ರೀಂಗಾರಕಲ್ಲು ಸಿಗು ತ್ತದೆ. ಪ್ರವೇಶಕ್ಕೆ ಮುನ್ನ ತೀರ್ಥ ಸಂಪ್ರೋಕ್ಷಣೆ ಮಾಡಿ, ಪ್ರವೇಶ ಕಲ್ಲಿಗೆ ತೀರ್ಥ ಬಿಟ್ಟ ಬಳಿಕವೇ ಗುಹೆ ಪ್ರವೇಶಿಸಬೇಕು.

ಬರಹ: ಕೇಶವ ಕುಂದರ್‌, ಲಕ್ಷ್ಮೀ ಮಚ್ಚಿನ, ಪ್ರಶಾಂತ್‌ ಪಾದೆ, ಕಿರಣ್‌ ಪ್ರಸಾದ್‌ ಕುಂಡಡ್ಕ,ಚೈತ್ರೇಶ್‌ ಇಳಂತಿಲ, ಕಿರಣ್‌ ಸರಪಾಡಿ, ಬಾಲಕೃಷ್ಣ ಭೀಮಗುಳಿ, ಪುನೀತ್‌ ಸಾಲ್ಯಾನ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next