Advertisement

World Tourism Day 2024: ಕಾನೂರ ವಜ್ರಮಾಳ ಜಲಪಾತ

10:01 AM Sep 27, 2024 | Team Udayavani |

ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ಹೆಸರುವಾಸಿ ಜಲಪಾತಗಳಲ್ಲಿ ಇದು ಒಂದು. ನಾನು ಹಾಗೂ ಸುಹಾಸ್ ನಾವು ಜಲಪಾತ ಇರುವ ಹಳ್ಳಿಗೆ ಹೋಗಿ, ಜಲಪಾತಕ್ಕೆ ನಮ್ಮನ್ನು ಯಾರು ಕರೆದೊಯ್ಯಬಹುದು ಎಂದು ಸ್ಥಳೀಯ ಜನರನ್ನು ಕೇಳಿದೆವು. ಸ್ಥಳೀಯರು “3-4 ವರ್ಷಗಳಿಂದ ಯಾರೂ ಅಲ್ಲಿಗೆ ಹೋಗಿಲ್ಲ” ಎಂದು ಹೇಳಿದರು.

Advertisement

ಸ್ವಲ್ಪ ಸಮಯದ ನಂತರ ಸ್ಥಳೀಯ ವ್ಯಕ್ತಿಯೊಬ್ಬರು ನಮ್ಮನ್ನು ಜಲಪಾತಕ್ಕೆ ಕರೆದೊಯ್ಯುವುದಾಗಿ ಹೇಳಿದರು. ನಾವು ಸ್ಥಳೀಯ ಮಾರ್ಗದರ್ಶಿಯೊಂದಿಗೆ ಸ್ವಲ್ಪ ಸಮಯದವರೆಗೆ ಮಾತನಾಡಿದ ಮೇಲೆ ಅವರು ನಮ್ಮನ್ನು ಜಲಪಾತಕ್ಕೆ ಕರೆದೊಯ್ಯಬಹುದು ಎಂಬ ವಿಶ್ವಾಸವನ್ನು ನಾವು ಪಡೆದುಕೊಂಡೆವು. ಅಂದು ಮಾರ್ಗದರ್ಶಿಯನ್ನು ಹುಡುಕುವಾಗಲೆ ಮಧ್ಯಾಹ್ನ ಆಗಿತ್ತು. ನಾಳೆ ಬೆಳಿಗ್ಗೆ ಬೇಗ ಬರುತ್ತೇವೆ ಎಂದೆವು. ಕೂಡಲೇ ಗೆಳೆಯನಾದ ವರುಣ್ ಗೆ ಫೋನ್ ಮಾಡಿ ನಮ್ಮನ್ನು ಜಲಪಾತಕ್ಕೆ ಕರೆದೊಯ್ಯುವವರ ಬಗ್ಗೆ ಹೇಳಿದೆ.

ವರುಣ್ ತಕ್ಷಣ ಬೆಂಗಳೂರಿನಿಂದ ಹೊರಟು ಇನ್ನೂ 4 ಜನರನ್ನು ಚಾರಣಕ್ಕೆ ಕರೆತರುವುದಾಗಿ ಹೇಳಿದ. ಸರಿ 5-6 ಜನ ಸೇರಿ ಹೋಗೋಣ ಎಂದು ನಿರ್ಧರಿಸಿದೆವು. ವರುಣ್ ಜೊತೆ ನಿಸರ್ಗ, ಮೇಘನಾ, ಜ್ಯೋತಿ ಹಾಗೂ ಶಿವ ಎಂಬ ಗೆಳೆಯರ ಬಳಗ ನಮ್ಮ ಅನ್ವೇಷಣೆಯಲ್ಲಿ ಕೈ ಜೋಡಿಸಿತ್ತು. ನಾವು ಬೆಳಿಗ್ಗೆ 6 ಗಂಟೆಗೆ ನಮ್ಮ ಮಾರ್ಗದರ್ಶಿಯ ಮನೆಗೆ ಹೋಗಿ, ಸುಮಾರು 7 ಗಂಟೆ ಹೊತ್ತಿಗೆ ನಮ್ಮ ಚಾರಣವನ್ನು ಪ್ರಾರಂಭಿಸಿದೆವು.

ಚಾರಣ ಮಾಡುವಾಗ, ಜಲಪಾತ ಎಷ್ಟು ದೂರವಿದೆ ಎಂದು ನಾನು ಮಾರ್ಗದರ್ಶಿಯನ್ನು ಕೇಳಿದಾಗ, ಇದು 7 ಕಿಲೋಮೀಟರ್ ಕಠಿಣ ಚಾರಣ ಎಂದು ಹೇಳಿದರು. ಅದರ ಹೊರತಾಗಿ 2 ಬೆಟ್ಟಗಳನ್ನು ದಾಟಬೇಕು, ಮರಗಳನ್ನು ಹಿಡಿದುಕೊಂಡು ಇಳಿಯಬೇಕು ಎಂದು ತಿಳಿಯಿತು. ಸ್ವಲ್ಪ ಸಮಯದ ನಂತರ ಚಾರಣ ಮಾಡುವಾಗ, ನಾವು ಒಂದು ದೊಡ್ಡ ಶಿಖರವನ್ನು ಇಳಿಯುತ್ತಿದ್ದೇವೆ ಎಂದು ನಮಗೆ ಅನಿಸಿತು. ನಾವು ಬಿದಿರಿನ ಬಳ್ಳಿಯನ್ನು ಹಿಡಿದುಕೊಂಡು ಇಳಿಯಲು ಪ್ರಾರಂಭಿಸಿದೆವು. ಅದು ನಿಜವಾಗಿಯೂ ಭಯಾನಕವಾಗಿತ್ತು.

Advertisement

ಎಲ್ಲರೂ ಬಿದಿರಿನ ಬಳ್ಳಿಯನ್ನು ಹಿಡಿದು ಎಳೆದಾಡಿದಾಗ ಒಂದು ಬಾರಿ ತುಂಡಾಗಿ ಎಲ್ಲರೂ ಬಿದ್ದಿದ್ದೆವು. ಅದರ ನಂತರ ನಾವೆಲ್ಲರೂ ಕುಳಿತು ಇಳಿಯಲು ಪ್ರಾರಂಭಿಸಿದೆವು. ಎಲ್ಲರೂ ಜಾರುತ್ತಾ ಇಳಿಯಲು ಪ್ರಾರಂಭಿಸಿದೆವು, ಕೆಲವು ಸ್ನೇಹಿತರ ಬಟ್ಟೆ ಹರಿದಿತ್ತು.

5 ಕಿಲೋಮೀಟರ್ ಚಾರಣಿಸಿದ ಮೇಲೆ ಜಲಪಾತದ ಹೊಳೆಗೆ ತಲುಪಿದೆವು. ಸ್ವಲ್ಪ ದೂರ ಕ್ರಮಿಸಿದ ಮೇಲೆ ಜಲಪಾತದ ಮೊದಲ ನೋಟ ಕಾಣಿಸಿತು.  ಹೊಳೆಯ ಇನ್ನೊಂದು ಬದಿಗೆ ದಾಟಿ ಜಲಪಾತದ ಬುಡಕ್ಕೆ ತಲುಪಿದೆವು. 400-500 ಅಡಿಗಳಷ್ಟು ಎತ್ತರದ ಜಲಪಾತ. ನಾವೆಲ್ಲರೂ ಜಲಪಾತದ ತಳದಲ್ಲಿ ಕುಳಿತು ರುದ್ರರಮಣೀಯ ನೋಟವನ್ನು ಆನಂದಿಸಿದೆವು.

ಒಂದೇ ಹೆಜ್ಜೆಯ ಜಲಪಾತ, ತಲೆ ಎತ್ತಿ ನೋಡಿದರೆ ಜಲಪಾತದ ಇನ್ನೊಂದು ತುದಿ ಕಾಣಲಿಲ್ಲ. ಜ್ಯೋತಿ, ಧಾರವಾಡದ ಸ್ನೇಹಿತೆ ಜೋಳದ ಖಡಕ್ ರೊಟ್ಟಿ ಮತ್ತು ಶೇಂಗಾ ಚಟ್ನಿ ತಂದಿದ್ದಳು. ಅದರ ಜೊತೆ ನಾವು ತಂದ ತಿಂಡಿಗಳನ್ನು ಕೂಡ ತಿಂದು ವಾಪಸು ಹೊರಡಲು ಸಿದ್ಧರಾದೆವು.

ನಾವು ತಂದ  10-12 ನೀರಿನ ಬಾಟಲಿಗಳನ್ನು ಹೊಳೆಯ ನೀರಿನಿಂದ ತುಂಬಿಸಿದೆವು. 2 ಬೆಟ್ಟಗಳನ್ನು ಹತ್ತಬೇಕಾಗಿದ್ದರಿಂದ ನೀರಿನ ಅವಶ್ಯಕತೆ ತುಂಬಾ ಮುಖ್ಯವಾಗಿತ್ತು. ಮಧ್ಯಾಹ್ನ 2 ಗಂಟೆಗೆ ವಾಪಸು ಹೊರಡಲು ಶುರು ಮಾಡಿದೆವು. ಮರ ಗಿಡಗಳನ್ನು ಹಿಡಿದು ಹತ್ತ ತೊಡಗಿದೆವು. ಹತ್ತುವಾಗ ನಮ್ಮ ಮೊಣಕಾಲು ನಮ್ಮ ಕುತ್ತಿಗೆಯನ್ನು ಮುಟ್ಟುತ್ತಿತ್ತು. 6-7 ಜನ ಒಬ್ಬರ ಹಿಂದೆ ಒಬ್ಬರು ಹತ್ತುವಾಗ ಕಲ್ಲೊಂದು ಜಾರಿ ಜ್ಯೋತಿಯ ಕಾಲಿಗೆ ಬಿದ್ದಿತ್ತು. ಅವಳಿಗೆ ತಾಗಿದ ರಭಸಕ್ಕೆ ಕಾಲು ಊದಿಕೊಂಡಿತ್ತು. ನಾನು ಹಾಗೂ ವರುಣ್ ಜ್ಯೋತಿಯನ್ನು ನಿಧಾನಕ್ಕೆ ಕರೆದುಕೊಂಡು ಬರುತ್ತೇವೆ, ನೀವೆಲ್ಲ ಆದಷ್ಟು ಮುಂದೆ ಹೋಗಿ ಬೆಟ್ಟದ ಮೇಲೆ ಕುಳಿತುಕೊಳ್ಳಿ ಎಂದು ಗೆಳೆಯರಿಗೆ ಹೇಳಿದೆ.

6 ಕಿಲೋಮೀಟರ್ ಅಷ್ಟು ಎತ್ತರದ ಬೆಟ್ಟವನ್ನು ಹತ್ತಬೇಕಾಗಿತ್ತು. ಇದೆಲ್ಲ ಆಗುವಾಗ ಗಂಟೆ 3 ಆಗಿತ್ತು. ನಿಧಾನವಾಗಿ ಹೆಜ್ಜೆ ಇಡುತ್ತಿದ್ದ ನಮಗೆ ದೊಡ್ಡ ಕಲ್ಲೊಂದು ಜಾರಿ ಬರುವ ಶಬ್ಧ ಕೇಳಿಸಿತು. ನಾವು ಮರದ ಎಡೆಯಲ್ಲಿ ನಿಂತುಕೊಂಡು ಕಲ್ಲಿಂದ ತಪ್ಪಿಸಿಕೊಂಡೆವು. ಸಂಜೆ 4:30 ಗೆ ಮಾರ್ಗದರ್ಶಿಯ ಜೊತೆಗೆ ತೆರಳಿದ ಗೆಳೆಯರು ನಾವು ಆರಂಭಿಸಿದ ಹಾದಿಗೆ ತಲುಪಿದ್ದರು. ನಾವಿನ್ನೂ ನಿಧಾನಕ್ಕೆ ಹೆಜ್ಜೆ ಇಡುತ್ತಾ ಬೆಟ್ಟವನ್ನು ಹತ್ತುತ್ತಿದ್ದೇವು. ಇನ್ನೇನು 2 ಕಿಲೋಮೀಟರ್ ಇದೆ ಎನ್ನುವಾಗ, ಜ್ಯೋತಿ ನಡೆಯಲು ಆಗುವುದೇ ಇಲ್ಲವೆಂದು ಕುಳಿತಿದ್ದಳು. ಅಲ್ಲಿಯವರೆಗೆ ಸಮಾಧಾನ ಮಾಡಿಸಿ ಕರೆದುಕೊಂಡು ಬರುತ್ತಿದ್ದ ವರುಣ್, ಬರದಿದ್ದರೆ ಇಲ್ಲೇ ಬಿಟ್ಟು ಹೋಗುತ್ತೇವೆ ಎಂದು ಜ್ಯೋತಿಗೆ ಹೆದರಿಸಿದರು. ಸಂಜೆ 6 ಗಂಟೆಗೆ ನಾವು ಬೆಟ್ಟದ ತುದಿ ತಲುಪಿದೆವು.

ಜಲಪಾತ ಚಾರಣ ಆರಂಭ ಮಾಡಿದ ಜಾಗ ತಲುಪಲು ಮುಸ್ಸಂಜೆ ಕವಿದು ಕತ್ತಲೆ ಆವರಿಸಿತ್ತು. ರಾತ್ರಿ 8 ಗಂಟೆಗೆ ಎಲ್ಲರೂ ಮನೆ ತಲುಪಿದೆವು.

-ರಾಘವ ಭಟ್

Advertisement

Udayavani is now on Telegram. Click here to join our channel and stay updated with the latest news.

Next