ಹೊಸದಿಲ್ಲಿ: ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಪಾಲ್ಗೊಳ್ಳಲು ಭಾರತದ ಕ್ರಿಕೆಟಿಗರು ಒಂದೊಂದೇ ತಂಡವಾಗಿ ಲಂಡನ್ಗೆ ಪ್ರಯಾಣ ಬೆಳೆಸಲಿದ್ದಾರೆ. ಮೊದಲ “ಬ್ಯಾಚ್’ ಮಂಗಳವಾರ ಮುಂಜಾನೆ 4.30ಕ್ಕೆ ವಿಮಾನ ಏರಲಿದೆ. ಇದರಲ್ಲಿ ವಿರಾಟ್ ಕೊಹ್ಲಿ ಕೂಡ ಇದ್ದಾರೆ.
ಆರ್ಸಿಬಿ ಪ್ಲೇ ಆಫ್ನಿಂದ ಹೊರಬಿದ್ದ ಕಾರಣ ಈ ತಂಡದ ಟೆಸ್ಟ್ ಆಟಗಾರರಿಗೆ ಬೇಗನೇ ಲಂಡನ್ಗೆ ತೆರಳಲು ಸಾಧ್ಯವಾಗಿದೆ. ಮೊಹಮ್ಮದ್ ಸಿರಾಜ್, ಇತರ ಐಪಿಎಲ್ ತಂಡಗಳ ಆಟಗಾರರಾದ ಆರ್. ಅಶ್ವಿನ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜೈದೇವ್ ಉನಾದ್ಕತ್ ಅವರೆಲ್ಲ ಇದೇ ವಿಮಾನ ಏರಲಿದ್ದಾರೆ. ಉನಾದ್ಕತ್ ಭುಜದ ನೋವಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಉಳಿದ 7 ಆಟಗಾರರು ಐಪಿಎಲ್ ಪ್ಲೇ ಆಫ್ ತಂಡಗಳ ಸದಸ್ಯರಾಗಿದ್ದಾರೆ. ಇವರೆಂದರೆ ನಾಯಕ ರೋಹಿತ್ ಶರ್ಮ, ರವೀಂದ್ರ ಜಡೇಜ, ಇಶಾನ್ ಕಿಶನ್, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಕೆ.ಎಸ್. ಭರತ್ ಮತ್ತು ಅಜಿಂಕ್ಯ ರಹಾನೆ. ಇವರೆಲ್ಲ ಇನ್ನೊಂದು ತಂಡವಾಗಿ ಲಂಡನ್ ತಲುಪಲಿದ್ದಾರೆ.
ಭಾರತ-ಆಸ್ಟ್ರೇಲಿಯ ನಡುವಿನ ಫೈನಲ್ ಪಂದ್ಯ ಜೂನ್ 7ರಿಂದ 11ರ ತನಕ ಲಂಡನ್ನ ಓವಲ್ ಅಂಗಳದಲ್ಲಿ ನಡೆಯಲಿದೆ. ಇಂಗ್ಲೆಂಡ್ನಲ್ಲೀಗ ಕೌಂಟಿ ಚಾಂಪಿಯನ್ಶಿಪ್ ನಡೆಯುತ್ತಿರುವುದರಿಂದ ಪ್ರವಾಸಿ ಭಾರತ ತಂಡಕ್ಕೆ ಯಾವುದೇ ಅಭ್ಯಾಸ ಪಂದ್ಯ ಇರುವುದಿಲ್ಲ ಎಂದು ಇಸಿಬಿ ಸ್ಪಷ್ಟಪಡಿಸಿದೆ.