Advertisement

ತಂತ್ರಜ್ಞಾನದ ಅರಿವಿರಲಿ; ಮಾಹಿತಿಯುಕ್ತ ಸಮಾಜ ನಿರ್ಮಾಣವಾಗಲಿ

07:31 PM May 16, 2019 | sudhir |

ಅಂತರ್ಜಾಲ ಮತ್ತು ಸಂವಹನ ತಂತ್ರಜ್ಞಾನಗಳ ಸದ್ಭಳಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹುಟ್ಟಿಕೊಂಡ ದಿನವೇ ವಿಶ್ವ ದೂರ ಸಂಪರ್ಕ, ಮಾಹಿತಿ ಸಮಾಜ ದಿನ. ದೂರದ ಊರಿನವರನ್ನು ಸಂಪರ್ಕಿಸಲು ದೂರ ಸಂಪರ್ಕ ನೆರವಾದರೆ, ವಿಶ್ವದಲ್ಲಿ ನಡೆಯುವ ಪ್ರತಿಯೊಂದು ವಿಷಯಗಳು ಜಗತ್ತಿನ ಮೂಲೆಮೂಲೆಗೂ ತಲುಪಿಸಲು ತಂತ್ರಜ್ಞಾನಗಳು ಸಹಕಾರಿ. ಅಭಿವೃದ್ಧಿಯ ಪಥದಲ್ಲಿ ಸಾಗುವಾಗ ಇದರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಂಡಿರುವುದು ಇಂದಿನ ಅನಿವಾರ್ಯ

Advertisement

ದೂರಸಂಪರ್ಕ ವ್ಯವಸ್ಥೆ ಮತ್ತು ಸಮಾಜದ ನಡುವೆ ಅವಿನಾಭಾವ ಸಂಬಂಧವಿದೆ. ದೂರಸಂಪರ್ಕ ವ್ಯವಸ್ಥೆಯನ್ನೇ ಕೇಂದ್ರವಾಗಿರಿಸಿಕೊಂಡು ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದನ್ನು ಗಮನಿಸಬಹುದು.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಒಂದಂಶವಾಗಿರುವ ದೂರಸಂಪರ್ಕ ವ್ಯವಸ್ಥೆಯ ಸದುಪಯೋಗವಾಗಬೇಕು ಎನ್ನುವ ಸದುದ್ದೇಶ ಮತ್ತು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 1969ರಿಂದ ಪ್ರತಿ ವರ್ಷ ಮೇ 17ರಂದು ವಿಶ್ವ ದೂರಸಂಪರ್ಕ ದಿನವನ್ನು ಅಚರಿಸಿಕೊಂಡು ಬರಲಾಗುತ್ತಿದೆ.

ಇದರ ಜತೆಯಲ್ಲಿಯೇ ಮೇ 17ರಂದು ವಿಶ್ವ ಮಾಹಿತಿ ಸಮಾಜ ದಿನವನ್ನೂ ಆಚರಿಸಲಾಗುತ್ತದೆ. ಅಂತಾರ್ಜಲ, ಸಾಮಾಜಿಕ ಮಾಧ್ಯಮಗಳು ಅಭಿವೃದ್ಧಿ ಹೊಂದುತ್ತಿರುವ ಈ ಕಾಲದಲ್ಲಿ ಸಮಾಜವು ಮಾಹಿತಿಯುಕ್ತವಾಗಿರಬೇಕು. ತಂತ್ರಜ್ಞಾನಗಳ ಬಗ್ಗೆ ಅರಿವಿರಬೇಕು ಎಂಬುದೇ ಈ ದಿನದ ಆಚರಣೆಯ ಮುಖ್ಯ ಉದ್ದೇಶ.

ಮಾಹಿತಿ ಸಮಾಜದ ವಿಶ್ವ ಸಮಿತಿ
(ವರ್ಲ್ಡ್ ಸಮಿತ್‌ ಆನ್‌ ದಿ ಇನ್‌ಫಾರ್ಮೇಶನ್‌ ಸೊಸೈಟಿ) ಮೇ 17ರಂದು ವಿಶ್ವ ಮಾಹಿತಿ ಸಮಾಜ ದಿನವನ್ನು ಆಚರಿಸುವುದಾಗಿ ಘೋಷಿಸಲು 2005ರಲ್ಲಿ ಯುನೈಟೆಡ್‌ ನೇಶನ್ಸ್‌ನ ಸಾಮಾನ್ಯ ಸಭೆಯನ್ನು ಕರೆಯಿತು. ತಂತ್ರಜ್ಞಾನಗಳ ಅಭಿವೃದ್ಧಿಯ ಮೇಲೆ ಬೆಳಕು ಚೆಲ್ಲುವುದು, ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದ ಮಾಹಿತಿಯ ಅರಿವು ಜನರಿಗೆ ಇರಬೇಕು ಎನ್ನುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶ ಎನ್ನುವುದು ಸಾಮಾನ್ಯ ಸಭೆಯ ಅಭಿಪ್ರಾಯವಾಗಿತ್ತು.

Advertisement

ಅನಂತರ 2006ರಲ್ಲಿ ಮೇ 17ರಂದು ಪ್ರತಿ ವರ್ಷ ವಿಶ್ವ ಮಾಹಿತಿ ದಿನವನ್ನು ಆಚರಿಸಲು ನಿರ್ಣಯಿಸಲಾಯಿತು. ಅನಂತರ ಟರ್ಕಿಯ ಅಂಟಾಲ್ಯಾದಲ್ಲಿ ನಡೆದ ಐಟಿಯುನ ಪೂರ್ಣಾಧಿಕಾರ ಸಮಾವೇಶದಲ್ಲಿ ವಿಶ್ವ ದೂರ ಸಂಪರ್ಕ ದಿನ ಮತ್ತು ವಿಶ್ವ ಮಾಹಿತಿ ಸಮಾಜ ದಿನವನ್ನು ಒಟ್ಟಾಗಿ ವಿಶ್ವ ದೂರ ಸಂಪರ್ಕ ಮತ್ತು ಮಾಹಿತಿ ಸಮಾಜ ದಿನವೆಂದು ಮೇ 17ರಂದು ಆಚರಿಸಲು ತೀರ್ಮಾನಿಸಲಾಯಿತು. ಯುನೈಟೆಡ್‌ ನೇಶನ್ಸ್‌ನ ಪ್ರಕಾರ ಅಂತಾರಾಷ್ಟ್ರೀಯ ದೂರಸಂಪರ್ಕ ಯೂನಿಯನ್‌ ( ಐಟಿಯು) ಸ್ಥಾಪನೆ ಮತ್ತು 1865ರಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಟೆಲಿಗ್ರಾಫ್ ಸಮಾವೇಶದ ಸ್ಮರಣಾರ್ಥವಾಗಿ ವಿಶ್ವ ದೂರಸಂಪರ್ಕ ದಿನವನ್ನು ಆಚರಿಸಲಾಗುತ್ತಿದೆ.

ಉದ್ದೇಶ
ಸುಸ್ಥಿರ ಅಭಿವೃದ್ಧಿಯ ಭಾಗವಾಗಿ ಜನರಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಲಭ್ಯತೆ ಅತ್ಯಗತ್ಯ. 2020ರೊಳಗೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪ್ರತಿಯೊಬ್ಬರಿಗೂ ಅಂತರ್ಜಾಲದ ಲಭ್ಯತೆ ದೊರೆಯಬೇಕು. ಜಗತ್ತಿನಾದ್ಯಂತ ಬಿಲಿಯನ್‌ಗಟ್ಟಲೆ ಮಂದಿಗೆ ಅಂತರ್ಜಾಲದ ಬಗ್ಗೆ ತಿಳಿದಿಲ್ಲ. ಸರಿಯಾದ ದೂರವಾಣಿ ಸಂಪರ್ಕ ಕೂಡ ಇವರಿಗಿಲ್ಲ. ಈ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ಸರಕಾರ ಈ ಕೆಲಸ ಮಾಡಲು ಮುಂದಾಗಬೇಕು ಎನ್ನುವ ನಿಟ್ಟಿನಲ್ಲಿ ಈ ವಿಶ್ವ ದೂರಸಂಪರ್ಕ ದಿನವನ್ನು ಆಚರಿಸಲಾಗುತ್ತಿದೆ.

– ಪ್ರಸನ್ನ ಹೆಗಡೆ ಊರಕೇರಿ

Advertisement

Udayavani is now on Telegram. Click here to join our channel and stay updated with the latest news.

Next