Advertisement

World Soil Day: ಮಣ್ಣಿನಲ್ಲಡಗಿದೆ ಜೀವರಾಶಿಗಳ ಭವಿಷ್ಯ!

02:24 PM Dec 05, 2024 | Team Udayavani |

ಕೃಷಿಗೆ ಮೂಲಾಧಾರವಾಗಿರುವ ಮಣ್ಣು ಭೂಮಿಯ ಸರ್ವ ಜೀವರಾಶಿಗಳ ನೆಲೆ. ಪರಿಸರ, ವಾತಾವರಣ, ಹವಾಮಾನದ ನಿಯಂತ್ರಣದಲ್ಲೂ ಮಣ್ಣಿನ ಪಾತ್ರ ಪ್ರಮುಖವಾದುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿನ ಹವಾಮಾನ ವೈಪರೀತ್ಯಗಳು ಮಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ. ಹಾಗಾಗಿ ಮಣ್ಣಿನ ಮಹತ್ವ, ಪ್ರಾಮುಖ್ಯವನ್ನು ಅರ್ಥೈಸಿಕೊಂಡು, ಅದರ ರಕ್ಷಣೆಗೆ ಕೈಗೊಳ್ಳ ಬಹುದಾದ ಕ್ರಮಗಳ ಕುರಿತಂತೆ ಜನರಲ್ಲಿ ಅರಿವು ಮೂಡಿಸಲು ಪ್ರತೀ ವರ್ಷ ಡಿ. 5ರಂದು ವಿಶ್ವ ಮಣ್ಣು ದಿನವನ್ನು ಆಚರಿಸಲಾಗುತ್ತದೆ.

Advertisement

ಈ ವರ್ಷದ ಧ್ಯೇಯ
ಈ ಬಾರಿ ‘ಮಣ್ಣಿನ ಆರೈಕೆ: ಕ್ರಮ, ಮೇಲ್ವಿಚಾರಣೆ, ನಿರ್ವಹಣೆ’ಎಂಬ ಧ್ಯೇಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ಮಣ್ಣಿನ ಆರೋಗ್ಯದಲ್ಲಿನ ಗುಣಮಟ್ಟದ ಬಗ್ಗೆ ಇದು ಬೆಳಕು ಚೆಲ್ಲುತ್ತದೆ. ಮಣ್ಣು ನಮ್ಮ ಅಸ್ತಿತ್ವದ ಅಡಿಪಾಯ. ಹಾಗಾಗಿ ನಮ್ಮ ಭವಿಷ್ಯವು ಮಣ್ಣಿನಲ್ಲಿ ಅಡಗಿದೆ ಎಂಬುದನ್ನು ಈ ಧ್ಯೇಯವಾಕ್ಯ ಪ್ರತಿಬಿಂಬಿಸುತ್ತದೆ.

ಹಿನ್ನೆಲೆ
ಅಂತಾರಾಷ್ಟ್ರೀಯ ಮಣ್ಣು ವಿಜ್ಞಾನ ಒಕ್ಕೂಟದ ಪ್ರಸ್ತಾವವನ್ನು ಪರಿಗಣಿಸಿ 2014ರಲ್ಲಿ ವಿಶ್ವಸಂಸ್ಥೆಯು ಡಿ.5 ಅನ್ನು “ವಿಶ್ವ ಮಣ್ಣು ದಿನ’ವಾಗಿ ಅಧಿಕೃತವಾಗಿ ಘೋಷಿಸಿತು. ಕಳೆದೊಂದು ದಶಕದಿಂದ ನಿರಂತರವಾಗಿ ಮಣ್ಣಿನ ಮಹತ್ವ ಮತ್ತದರ ಸಂರಕ್ಷಣೆಯ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ದಿನವನ್ನು ವಿಶ್ವಾದ್ಯಂತ ಆಚರಿಸುತ್ತ ಬರಲಾಗಿದೆ.

ಮೂರು ಹಂತಗಳು
ನಮ್ಮ ದೇಹವನ್ನು ಚರ್ಮಗಳು ಹೇಗೆ ರಕ್ಷಿಸುತ್ತವೆಯೋ ಹಾಗೆಯೇ ಭೂಮಿಯ ಮೇಲೆ ಹಾಗೂ ಕೆಳಗೆ ಬದುಕಿರುವ ಜೀವಿಗಳನ್ನು ಮಣ್ಣು ರಕ್ಷಿಸುತ್ತದೆ. ಭೂಮಿಯ ಸಮತೋಲನದಲ್ಲಿ ಮಣ್ಣಿನ ಪಾತ್ರ ಅತ್ಯಂತ ಮಹತ್ವವಾದುದಾಗಿದೆ. ಹಾಗಾಗಿ ಮಣ್ಣಿನ ಆರೋಗ್ಯವನ್ನು ರಕ್ಷಿಸುವುದು ಅಷ್ಟೇ ಅಗತ್ಯ.

ಈ ಬಾರಿಯ ಧ್ಯೇಯ ‘ಮಣ್ಣಿನ ಆರೈಕೆ: ಕ್ರಮ, ಮೇಲ್ವಿಚಾರಣೆ, ನಿರ್ವಹಣೆ’ಯು ಮಣ್ಣಿನ ಬಗೆಗಿನ ದತ್ತಾಂಶ ಆಧಾರಿತ ಮಾಹಿತಿಗೆ ಹೆಚ್ಚಿನ ಒತ್ತನ್ನು ನೀಡಿದ್ದು, ಮೂರು ಹಂತಗಳನ್ನು ಒಳಗೊಂಡಿದೆ.

Advertisement

ಕ್ರಮ: ಮಣ್ಣಿನ ಆರೋಗ್ಯ ಹಾಗೂ ನಿಖರತೆಯನ್ನು ಸರಿಯಾಗಿ ಗಮನಿಸುವುದು.

ಮೇಲ್ವಿಚಾರಣೆ: ಮಣ್ಣಿನಲ್ಲಿ ಆಗುವ ಬದಲಾ ವಣೆಗಳನ್ನು ನಿರಂತರ ಪರಿಶೀಲಿಸುವುದು.

ನಿರ್ವಹಣೆ: ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಸಮರ್ಥವಾದ ಅಭ್ಯಾಸವನ್ನು ಕಾರ್ಯಗತಗೊಳಿಸುವುದು.

ಮಣ್ಣಿನ ಆರೋಗ್ಯದಲ್ಲೇ ಹವಾಮಾನ ಸಮತೋಲನವು ನಿಂತಿದೆ. ಮಣ್ಣಿನ ಉತ್ತಮ ಆರೋಗ್ಯವು ಈಗ ಎದುರಿಸುತ್ತಿರುವ ಹವಮಾನ ವೈಪರೀತ್ಯಗಳಂತಹ ಸಮಸ್ಯೆಗಳನ್ನು ತಗ್ಗಿಸುವುದರಲ್ಲಿ ಸಹಾಯ ಮಾಡುತ್ತವೆ. ಒಂದು ವೇಳೆ ಮಣ್ಣು ಅವನತಿಯನ್ನು ಕಂಡರೆ ಇದು ಆಹಾರ ಅಭದ್ರತೆ, ನೀರಿನ ಕೊರತೆ, ನೈಸರ್ಗಿಕ ವಿಕೋಪಗಳಂತಹ ಘಟನೆಗಳಿಗೆ ದಾರಿ ಮಾಡಿಕೊಡುತ್ತದೆ.

ವಿಶ್ವಸಂಸ್ಥೆಯ ಪ್ರಕಾರ ವಿಶ್ವದ ಶೇ.33ರಷ್ಟು ಮಣ್ಣು ಈಗಾಗಲೇ ಅವನತಿಯನ್ನು ಕಂಡಿದೆ. ಮಾಲಿನ್ಯ, ಸವಕಳಿ, ಅವೈಜ್ಞಾನಿಕ ಅಭ್ಯಾಸಗಳು ಇದಕ್ಕೆ ಕಾರಣವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ 2050ರ ವೇಳೆಗೆ ಶೇ.90ರಷ್ಟು ಮಣ್ಣು ಅವನತಿಯನ್ನು ಕಾಣಲಿದೆ ಎಂದು ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಎಚ್ಚರಿಸಿದೆ.

ಮಾನವ ಸಹಿತ ಈ ಭೂಮಿಯ ಮೇಲಣ ಪ್ರತಿಯೊಂದು ಜೀವಿಯ ಬದುಕುಳಿಯುವಿಕೆಗೆ ಮಣ್ಣಿನ ರಕ್ಷಣೆ ಅತೀಮುಖ್ಯ. ಮಣ್ಣನ್ನು, ಮಣ್ಣಿನ ಆರೋಗ್ಯವನ್ನು ರಕ್ಷಿಸುವಲ್ಲಿ ಎಲ್ಲರೂ ಜಾಗೃತರಾಗಬೇಕಿದೆ. ಹೆಚ್ಚೆಚ್ಚುಹಸುರನ್ನು ಬೆಳೆಸುವಲ್ಲಿ ಕಾರ್ಯಗತರಾಗಬೇಕು. ಈ ಕುರಿತು ಉಳಿದವರಲ್ಲಿ ಅರಿವು ಮೂಡಿಸಬೇಕು. ಮಣ್ಣಿನಿಂದಲೇ ಬದುಕು ಎನ್ನುವುದನ್ನು ಸದಾ ನೆನಪಿಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next