ಛಾಯಾಗ್ರಹಣದ ಹುಚ್ಚು ನನ್ನ ಚಿಕ್ಕಂದಿನ ಹವ್ಯಾಸ. ಕ್ಯಾಮರಾ ಹಿಡಿದಿದ್ದು 40 ವರುಷದ ಹಿಂದೆಯೇ ಆದರೂ, ಫೋಟೋಗ್ರಫಿಯನ್ನು ಸೀರಿಯಸ್ಸಾಗಿ ತೆಗೆದುಕೊಂಡು ಸ್ವಂತ ಕ್ಯಾಮರಾ ತೆಗೆದುಕೊಂಡಿದ್ದು 15 ವರ್ಷಗಳ ಹಿಂದೆ. ಪಕ್ಷಿ ಛಾಯಾಗ್ರಹಣ ಶುರುವಾಗಿದ್ದು ಆಗಲೇ. ನನಗೆ ಅರಿವಿಲ್ಲದಂತೆ ಈ ನೆಲದ ಬಗ್ಗೆ ಅರಿವು ಹೆಚ್ಚಿಸಿದ್ದು ಪಕ್ಷಿ ಛಾಯಾಗ್ರಹಣ.
ನನ್ನ ವನ್ಯಜೀವಿ ಛಾಯಾಗ್ರಹಣದ ಪಯಣದ ಬಗ್ಗೆ ಹೇಳಲು ತೀರಾ ಸಂಕೋಚ ಎನಿಸುತ್ತದೆ. ಚಿಕ್ಕವಳಿದ್ದಾಗ ಈ ಪ್ರಕೃತಿ, ಕಾಡು ನನಗೆ ಹೊಸದೇನೂ ಅಲ್ಲ. ಆಗ ನಾಗರಹೊಳೆ, ಬಂಡೀಪುರ ಸಫಾರಿಗೆ ಹೋಗಿದ್ದು ನೆನಪಿದೆ. ಆಗೆಲ್ಲ ಕಾಡನ್ನು ರೊಮ್ಯಾಂಟಿಕ್ ಆಗಿ ಪರಿಭಾವಿಸಿದ್ದೇ ಹೆಚ್ಚು. ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಅವ್ಯಕ್ತ ಭಯ ತುಂಬಿದ್ದ ಕಾಲ ಅದು. ನನಗೆ ನನ್ನ ಮಿತಿಯಲ್ಲಿ ಎದುರಾದ ಸ್ವಾರಸ್ಯಕರ ಅಥವಾ ಮರೆಯಲಾಗದ ಅನುಭವಗಳಲ್ಲಿ ಹೆಚ್ಚಿನವು ನನ್ನ ನೆನಪಿನ ಪಟಲದಲ್ಲಿ ಅರೆಬರೆಯಾಗಿ ನಿಂತಿವೆ. ರಾತ್ರಿ ಅಜ್ಜಿಯ ಮನೆಯ ಹತ್ತಿರವೇ ಬರುತ್ತಿದ್ದ ಆನೆಗಳು ಬೆಳಗ್ಗೆ ನಮಗೆ ಸುದ್ದಿಯಾಗುತ್ತಿತ್ತು. ಹುಲಿಯೊಂದು ಹಟ್ಟಿಯ ದಟ್ಟಿಯನ್ನು ಸರಿಸಿ ಕರುವನ್ನು ಹೊತ್ತು ಒಯ್ದಿದ್ದು, ನನ್ನ ತಂಗಿ ಕಾಡಿನಲ್ಲಿ ತಪ್ಪಿಸಿಕೊಂಡಿದ್ದು,.. ಇತ್ಯಾದಿ.
ಭಂಡ ಧೈರ್ಯವೇ ಬಂಡವಾಳ! ಚಿಕ್ಕಂದಿನಲ್ಲಿ ನಮ್ಮ ಹಿರಿಯರು ಆದಷ್ಟೂ ರಾತ್ರಿ ಪ್ರಯಾಣ ತಪ್ಪಿಸುತ್ತಿದ್ದರು. ಅನಿವಾರ್ಯವಾಗಿ ಹೋಗಬೇಕಾದಾಗ ದಾರಿಯಲ್ಲಿ ಕಾಡೆಮ್ಮೆಗಳು, ಆನೆಗಳ ಹಿಂಡು ಎದುರಾಗುತ್ತಿದ್ದವು. ನಮಗೆಲ್ಲ ಅದು ಸಹಜ ಅನುಭವ. ಬಹಳಷ್ಟು ದೂರದಲ್ಲೇ ಜೀಪು ನಿಲ್ಲುತ್ತಿತ್ತು. ಒಮ್ಮೆ ರಾತ್ರಿ ಪ್ರಯಾಣ ಮಾಡಲೇಬೇಕಾಗಿ ಬಂದಾಗ ದಾರಿಯಲ್ಲಿ ಹುಲಿ ಅಡª ಬಂದರೂ ಹೆದರುವುದಿಲ್ಲ ಎಂದು ಭಂಡ ಧೈರ್ಯ ಮಾಡಿದ್ದೆ. ಮುತ್ತೋಡಿ ದಾರಿಯಲ್ಲಿ ನಿಜಕ್ಕೂ ಹುಲಿ ರಸ್ತೆ ದಾಟುತ್ತಿತ್ತು! ಕಾರಿನೊಳಗೆ ಮಕ್ಕಳ ಗುಸುಪಿಸು. ನನ್ನ ಜಂಘಾಬಲವೇ ಉಡುಗಿತ್ತು. ಕಾಡಿನ ಬಗ್ಗೆ, ವನ್ಯಜೀವಿಗಳ ಬಗ್ಗೆ ಈ ಭಯ ಹೋಗಿದ್ದು ವನ್ಯಜೀವಿ ಛಾಯಾಗ್ರಹಣದಲ್ಲಿ ಸೀರಿಯಸ್ಸಾಗಿ ತೊಡಗಿಕೊಂಡಾಗ, ವನ್ಯಜೀವಿಗಳ ಸಹಜ ಸ್ವಭಾವದ ಬಗ್ಗೆ ತಿಳಿದುಕೊಂಡಾಗ. ಹಾವುಗಳ ಭಯ ಬಿಡಿಸಿದ್ದು ನನ್ನ ಕ್ಯಾಮರಾ. ಹುಲಿ, ಚಿರತೆ ಎದುರಿಗೆ ಬಂದರೆ ನಾನು ಸತ್ತರೂ ಪರವಾಗಿಲ್ಲ; ಒಂದು ಅಮೂಲ್ಯ ಫೋಟೋ ತೆಗೆದೇ ಸಾಯಬೇಕು ಎನ್ನುವ ಅತಿ ಉತ್ಸಾಹ ಪ್ರಾರಂಭದ ದಿನಗಳಲ್ಲಿ ಇತ್ತು. ಅದು ಭಂಡ ಧೈರ್ಯ ಎಂದು ಆಮೇಲೆ ತಿಳಿಯಿತು. ಕಾಡು, ಗವ್ವೆನ್ನುವ ಕತ್ತಲೆ ನನಗೆ ಭಯ ಹುಟ್ಟಿಸಿದ್ದರೂ, ಪ್ರಕೃತಿ ಪ್ರೇಮವನ್ನು ಇನ್ನಷ್ಟು ಹೆಚ್ಚಿಸಿತ್ತು. ಕಣ್ಣೆಂಬ ಕ್ಯಾಮರಾ ಹತ್ತಿರದಿಂದ ಪ್ರಕೃತಿಯನ್ನು ಸೆರೆ ಹಿಡಿದದ್ದು ಆಗಲೇ.
ಅನುಭವದ ಮಾಧ್ಯಮ ಬೇರೆಯದು…
ಹಕ್ಕಿಗಳ ಹಿಂದೆ ಬಿದ್ದಿದ್ದರಿಂದ ನನ್ನ ಕಾವ್ಯಕ್ಕೆ, ಬರವಣಿಗೆಗೆ ಬೇರೆಯದೇ ಆಯಾಮ ಸಿಕ್ಕಿತು. ಕ್ಯಾಮರಾ ಹಿಡಿದಾಗ ಮೊದಲಿಗೆ ಬರವಣಿಗೆ ಹಿಂದೆಬಿದ್ದದ್ದು ನಿಜ. ಆದರೆ, ಪ್ರಕೃತಿ, ಪರಿಸರ, ವನ್ಯಜೀವಿ ಪರಿಸರವನ್ನು, ಅತಿ ಮುಖ್ಯವಾಗಿ ಪಕ್ಷಿಗಳ ಬಗ್ಗೆ ಅರಿವನ್ನು ಹೆಚ್ಚಿಸಿತು. ಬಹಳಷ್ಟು ಸ್ನೇಹಿತರು, ಕವಿತೆ ಬರೆಯುವುದನ್ನು ಬಿಟ್ಟುಬಿಟ್ಟಿರಾ? ಎಂದೇ ಕೇಳುತ್ತಾರೆ. “ನಿನ್ನ ಕವಿತ್ವ ನಿಂತು ಹೋಯಿತು. ಸೂಕ್ಷ್ಮತೆ ಕಳೆದು ಕೊಂಡಿತು…’ ಎನ್ನುವುದು ಆತ್ಮೀಯರ ತಕರಾರು. ಆದರೆ, ಛಾಯಾಗ್ರಹಣದ ಮೂಲಕ ಹಕ್ಕಿಗಳು ಈ ಬದುಕಿಗೆ ಬಹಳ ಷ್ಟನ್ನು ಕಲಿಸಿವೆ. ಸಾಮಾಜಿಕ ಕವಿತೆಯಾ ಗಿವೆ. ಸೃಜನಶೀಲ ಮಾಧ್ಯಮ ಬೇರೆ ಬೇರೆಯಾದರೂ ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿವೆ. ನಮ್ಮ ಅನುಭವದ ಮಾಧ್ಯಮ ಬೇರೆಯಾಗಿದೆ ಅಷ್ಟೇ. ಕ್ಯಾಮರಾ ಕೈಯಲ್ಲಿ ಹಿಡಿದು ಸೆರೆಹಿಡಿಯುವುದಷ್ಟೇ ಛಾಯಾಚಿತ್ರವಲ್ಲ, ಅದು ಮನಸ್ಸಿನ ಚಿತ್ರವೂ ಹೌದು. ಛಾಯಾಗ್ರಹಣದ ಆಳಕ್ಕೆ ಇಳಿದಂತೆ ನಮ್ಮ ಅರಿವಿನ ಚಿತ್ರವೇ ಬದಲಾಗುತ್ತದೆ. ದಕ್ಕಿದಷ್ಟು ಅನುಭವ ನಮಗೆ ದೊಡ್ಡದು. ಅದರ ಅರಿವಿನ ವಿಸ್ತಾರ ಇನ್ನಷ್ಟು ದೊಡ್ಡದು.
–ಎಂ. ಆರ್. ಭಗವತಿ, ಬೆಂಗಳೂರು